ನಗರ ಪೊಲೀಸ್‌ ಆಯುಕ್ತರ ಬದಲಾವಣೆ? ಹಿರಿಯ ಅಧಿಕಾರಿಗಳ ಮಧ್ಯೆ ಪೈಪೋಟಿ

Published : May 25, 2025, 09:34 AM IST
vidhan soudha

ಸಾರಾಂಶ

ರಾಜ್ಯ ಪೊಲೀಸ್ ಮಹಾನಿರ್ದೇಶಕರ ನೇಮಕ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತರ ಬದಲಾವಣೆ ಚರ್ಚೆ ಮುನ್ನಲೆಗೆ ಬಂದಿದ್ದು, ಹಲವು ಹಿರಿಯ ಐಪಿಎಸ್‌ ಅಧಿಕಾರಿಗಳ ಮಧ್ಯೆ ಆಯುಕ್ತರ ಹುದ್ದೆಗೆ ತೀವ್ರ ಸ್ವರೂಪದ ಪೈಪೋಟಿ ಎದುರಾಗಿದೆ.

 ಬೆಂಗಳೂರು : ರಾಜ್ಯ ಪೊಲೀಸ್ ಮಹಾನಿರ್ದೇಶಕರ ನೇಮಕ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತರ ಬದಲಾವಣೆ ಚರ್ಚೆ ಮುನ್ನಲೆಗೆ ಬಂದಿದ್ದು, ಹಲವು ಹಿರಿಯ ಐಪಿಎಸ್‌ ಅಧಿಕಾರಿಗಳ ಮಧ್ಯೆ ಆಯುಕ್ತರ ಹುದ್ದೆಗೆ ತೀವ್ರ ಸ್ವರೂಪದ ಪೈಪೋಟಿ ಎದುರಾಗಿದೆ.

ಡಿಜಿ-ಐಜಿಪಿ ಸ್ಥಾನಕ್ಕೆ ಅಲ್ಪಸಂಖ್ಯಾತ ಸಮುದಾಯದ ಡಾ.ಎಂ.ಎ.ಸಲೀಂರನ್ನು ನಿಯೋಜಿಸಿದ್ದ ಸರ್ಕಾರ, ಈಗ ರಾಜಧಾನಿ ಆಯುಕ್ತರ ಹುದ್ದೆಗೆ ದಲಿತ ಅಥವಾ ಹಿಂದುಳಿದ ವರ್ಗದ ಅಧಿಕಾರಿಗೆ ಅವಕಾಶ ನೀಡಲು ಗಂಭೀರ ಚಿಂತನೆ ನಡೆಸಿದೆ. ಅದರಲ್ಲೂ ದಲಿತ ಸಮುದಾಯದವರಿಗೆ ಹೆಚ್ಚಿನ ಒಲವು ಮುಖ್ಯಮಂತ್ರಿ ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ.

ಪ್ರಸುತ್ತ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಎರಡು ವರ್ಷ ಪೂರೈಸಲಿದ್ದು, ಕೆಲವೇ ದಿನಗಳಲ್ಲಿ ಸೇವಾ ಹಿರಿತನದ ಮೇರೆಗೆ ಡಿಜಿಪಿ ಹುದ್ದೆಗೆ ಅವರು ಮುಂಬಡ್ತಿ ಹೊಂದಲಿದ್ದಾರೆ. ಆದರೆ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಕಾರಣಕ್ಕೆ ದಯಾನಂದ್ ಅವರ ಬದಲಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಕೆಲವರು ಒತ್ತಡ ಹೇರುತ್ತಿದ್ದಾರೆ. ಇನ್ನು ತಮ್ಮ ನಿಷ್ಠ ಅಧಿಕಾರಿಗಳಿಗೆ ಹುದ್ದೆ ಕೊಡಿಸಲು ಕೆಲ ಪ್ರಭಾವಿ ಸಚಿವರು ಯತ್ನಿಸಿದ್ದರೆ, ರಾಜಕೀಯ ನಾಯಕರ ಮೂಲಕ ಪದವಿ ಒಲಿಸಿಕೊಳ್ಳಲು ಕೆಲ ಅಧಿಕಾರಿಗಳು ಮುಂದಾಗಿದ್ದಾರೆ.

ಆಯುಕ್ತರ ಹುದ್ದೆ ರೇಸಲ್ಲಿ ಯಾರ್‍ಯಾರು?:

ಕಮಿಷನರ್ ಹುದ್ದೆ ರೇಸ್‌ನಲ್ಲಿ ಡಿಸಿಆರ್‌ಇ ಎಡಿಜಿಪಿ ಅರುಣ್ ಚಕ್ರವರ್ತಿ, ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್‌, ಗುಪ್ತದಳ ಎಡಿಜಿಪಿ ಹಾಗೂ ವಾರ್ತಾ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್‌, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್‌.ಹಿತೇಂದ್ರ, ಬಿಎಂಟಿಎಫ್‌ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ರವಿ, ರಾಜ್ಯ ಗೃಹ ಮಂಡಳಿ ಪ್ರಧಾನ ವ್ಯವಸ್ಥಾಕ ಕೆ.ವಿ.ಶರತ್ ಚಂದ್ರ ಅವರ ಹೆಸರು ಕೇಳಿ ಬರುತ್ತಿದೆ. ಆದರೆ ಈ ಅಧಿಕಾರಿಗಳ ಪೈಕಿ ಹೇಮಂತ್ ನಿಂಬಾಳ್ಕರ್‌, ಅರುಣ್ ಚಕ್ರವರ್ತಿ ಹಾಗೂ ಬಿ.ಕೆ.ಸಿಂಗ್ ಅವರು ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.

ದಲಿತ ಸಮುದಾಯಕ್ಕೆ ಆಯುಕ್ತ ಹುದ್ದೆ ನೀಡಲು ಸರ್ಕಾರದ ಮೇಲೆ ಒತ್ತಡ ಬರುತ್ತಿದ್ದು, ಆ ಸಮುದಾಯದ ಅರುಣ್ ಚಕ್ರವರ್ತಿ ಅವರ ಪರ ದಲಿತ ಸಮುದಾಯದ ಹಿರಿಯ ಸಚಿವರು ಹಾಗೂ ಶಾಸಕರು ಬ್ಯಾಟ್‌ ಬೀಸಿದ್ದಾರೆ. ಸವಾಲಿನ ಪ್ರಕರಣ ತನಿಖೆ ಹೊಣೆಗಾರಿಕೆ ವಹಿಸುವ ಹೊತ್ತಿನಲ್ಲಿ ಮುಖ್ಯಮಂತ್ರಿ ಅವರಿಗೆ ಬಿ.ಕೆ,ಸಿಂಗ್ ಮೊದಲ ಆಯ್ಕೆಯಾಗಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ, ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಹಗರಣ, ವಿಧಾನಪರಿಷತ್ ಸದಸ್ಯ ಸೂರಜ್ ಮೇಲೆ ಅಸಹಜ ಲೈಂಗಿಕ ಹಗರಣ ಹಾಗೂ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣಗಳ ಕುರಿತ ಎಸ್‌ಐಟಿ ಮುಖ್ಯಸ್ಥರಾಗಿ ಎಡಿಜಿಪಿ ಬಿ.ಕೆ.ಸಿಂಗ್ ಅವರು ಸರ್ಕಾರದ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಮನ್ನಣೆ ನೀಡುವ ಸಾಧ್ಯತೆಯಿದೆ.

ಗುಪ್ತದಳ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗಿದೆ ಎನ್ನಲಾಗಿದೆ. ಅದೇ ರೀತಿ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ರವಿ ಪರವಾಗಿ ಹಿಂದುಳಿದ ವರ್ಗಗಳ ಪ್ರಮುಖ ಮುಖಂಡರು ಹಾಗೂ ಹಿತೇಂದ್ರ ಅವರಿಗೆ ಒಕ್ಕಲಿಗ ಸಮುದಾಯದ ಸಚಿವರು ಹಾಗೂ ಶಾಸಕರು ಬೆನ್ನಿಗೆ ನಿಂತಿದ್ದಾರೆ. ಆದರೆ ಬಿಎಂಟಿಎಫ್‌ ಮುಖ್ಯಸ್ಥ ಸೀಮಂತ್ ಕುಮಾರ್ ಅವರಿಗೆ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ‘ಪ್ರಭಾವಿ’ ನಾಯಕರು ಕೃಪೆ ತೋರಿದ್ದಾರೆ. ಗೃಹ ಮಂಡಳಿ ಎಂಡಿ ಶರತ್ ಚಂದ್ರ ಅವರಿಗೆ ಆಡಳಿತ ನಿರ್ವಹಣೆಯ ಅನುಭವ ಪರಿಗಣಿಸುವಂತೆ ಕೆಲ ನಾಯಕರು ಕೋರಿದ್ದಾರೆ ಎಂದು ತಿಳಿದು ಬಂದಿದೆ.

ಟ್ರಾಫಿಕ್‌ಗೆ ಕಾರ್ತಿಕ್ ರೆಡ್ಡಿ?

ಸಂಚಾರ ವಿಭಾಗದ ಮುಖ್ಯಸ್ಥ ಹುದ್ದೆಗೆ ಡಿಐಜಿ ಕಾರ್ತಿಕ್ ರೆಡ್ಡಿ ಹಾಗೂ ವಂಶಿ ಕೃಷ್ಣ ಅವರ ಹೆಸರು ಕೇಳಿ ಬಂದಿದ್ದು, ಕಾರ್ತಿಕ್ ಅವರಿಗೆ ಹುದ್ದೆ ಸಿಗಬಹುದು ಎನ್ನಲಾಗಿದೆ. ಪ್ರಸುತ್ತ ಸಂಚಾರ ವಿಭಾಗದ ಜಂಟಿ ಆಯುಕ್ತರಾಗಿ ಎಂ.ಎನ್‌.ಅನುಚೇತ್ ಇದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ