ಮಳೆ ದಿನ ಕಳೆದರೂ ನಗರವಿನ್ನೂ ಅಸ್ತವ್ಯಸ್ತ

Published : May 01, 2026, 11:51 AM IST
Bengaluru Rain

ಸಾರಾಂಶ

ಬೇಸಿಗೆ ಕಾಲದ ಒಂದೆರೆಡು ತಾಸಿನ ಮಳೆಗೆ ಉದ್ಯಾನ ನಗರಿ ಬೆಂಗಳೂರು ತತ್ತರಿಸಿ ಹೋಗಿದ್ದು, ಮಳೆ ನಿಂತು 24 ತಾಸುಗಳು ಕಳೆದರೂ ನಗರವನ್ನು ಯಥಾಸ್ಥಿತಿಗೆ ತರಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಗಳು ವಿಫಲರಾಗಿದ್ದಾರೆ.

  ಬೆಂಗಳೂರು :  ಬೇಸಿಗೆ ಕಾಲದ ಒಂದೆರೆಡು ತಾಸಿನ ಮಳೆಗೆ ಉದ್ಯಾನ ನಗರಿ ಬೆಂಗಳೂರು ತತ್ತರಿಸಿ ಹೋಗಿದ್ದು, ಮಳೆ ನಿಂತು 24 ತಾಸುಗಳು ಕಳೆದರೂ ನಗರವನ್ನು ಯಥಾಸ್ಥಿತಿಗೆ ತರಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಗಳು ವಿಫಲರಾಗಿದ್ದಾರೆ.

ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದ ಕಾರಣ ನಗರದ ಬಹುತೇಕ ಕಡೆ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಮಳೆ ನೀರಿಗೆ ಹರಿದು ಬಂದ ಕಸ, ತ್ಯಾಜ್ಯಗಳು ರಸ್ತೆಯಲ್ಲಿ ಎಲ್ಲೆಂದರಲ್ಲೇ ಬಿದ್ದಿದ್ದವು. ಗುರುವಾರ ರಾತ್ರಿಯಾದರೂ ತೆರವು ಕಾರ್ಯಾಚರಣೆ ಮುಗಿದಿರಲಿಲ್ಲ. ಮಳೆ ಅಧ್ವಾನ, ಜಿಬಿಎ ವೈಫಲ್ಯತೆಯಿಂದ ನಗರದ ಜನತೆ ಪರದಾಡುವಂತಾಗಿದ್ದು, ಸಾರ್ವಜನಿಕರು ಪಾಲಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಸಂಜೆ ಬಿರುಗಾಳಿ, ಆಲಿಕಲ್ಲು ಮಳೆಗೆ ನಗರದಲ್ಲಿ 226 ಮರಗಳು ಬುಡಸೇಮತ ಧರೆಗುರುಳಿವೆ. 623 ಮರಗಳ ರೆಂಬೆ ಕೊಂಬೆಗಳು ಬಿದ್ದಿವೆ. 186 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, 36 ಟ್ರಾನ್ಸ್‌ಫರ್ಮರ್‌ಗಳು ಸುಟ್ಟು ಹೋಗಿವೆ. ಮರಗಳು, ಕಂಬಗಳು ಬಿದ್ದಿದ್ದರಿಂದ ನಗರದ ಅನೇಕ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಪರದಾಡುವಂತಾಯಿತು. ಗುರುವಾರ ರಾತ್ರಿಯಾದರೂ ತೆರವು ಕಾರ್ಯಾಚರಣೆ ಮುಗಿದಿರಲಿಲ್ಲ. ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿದ್ದ ಸಂಚಾರ ಪೊಲೀಸರು ಪರ್ಯಾಯ ಮಾರ್ಗ ಕಲ್ಪಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣ ಹಾಗೂ ಕಾವೇರಿ ನಿವಾಸದ ಬಳಿ ಏಳು ಮರಗಳು ಧರೆಗುರುಳಿವೆ. ಕುಮಾರಕೃಪಾ ಅತಿಥಿ ಗೃಹದ ಒಳಗೆ ಹಾಗೂ ರಸ್ತೆಯಲ್ಲಿನ ಮರಗಳು ಉರುಳಿ ಬಿದ್ದಿವೆ. ಗಾಲ್ಫ್ ಮೈದಾನದ ಸುತ್ತ ನೆಟ್ ಕಟ್ಟಲು ಅಳವಡಿಸಿದ್ದ ಎತ್ತರದ ಕಬ್ಬಿಣದ ಕಂಬಗಳು ಸಿಎಂ ನಿವಾಸದ ಕಾಂಪೌಂಡ್ ಮೇಲೆ ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಸ್ತೆಗೆ ಬಿದ್ದಿದ್ದ ಮರಗಳನ್ನು ತೆರವು ಮಾಡಬೇಕಿದ್ದ ಕಾರಣ ಕುಮಾರಕೃಪಾ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಸಂಜೆ ವೇಳೆಗೆ ನಾಲ್ಕು ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು ಎಂದು ಜಿಬಿಎ ವಲಯ ಅರಣ್ಯಾಧಿಕಾರಿ ಶಿವಣ್ಣ ತಿಳಿಸಿದರು.

ಇನ್ನು ರಾಜಾಜಿನಗರ, ಮಲ್ಲೇಶ್ವರ, ಶೇಷಾದ್ರಿಪುರ, ಜೆಪಿ ನಗರ ಮತ್ತು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಪಾರ್ಕಿಂಗ್‌ನಲ್ಲಿ ಮರಗಳು ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಗುರುವಾರ ರಾತ್ರಿಯಾದರೂ ತೆರವು ಕಾರ್ಯಾಚರಣೆಗೆ ಸಿಬ್ಬಂದಿ ಆಗಮಿಸಿರಲಿಲ್ಲ. ನೆರವಿಗಾಗಿ ಸಾರ್ವಜನಿಕರಿಂದ ಪಾಲಿಕೆ ಕಚೇರಿಗೆ ನಿರಂತರವಾಗಿ ಕರೆಗಳು ಬರುತ್ತಿದ್ದವು.

ಶೇಷಾದ್ರಿಪುರ ಮುಖ್ಯ ರಸ್ತೆ, ಜೆಪಿ ನಗರ 24ನೇ ಮುಖ್ಯ ರಸ್ತೆ, ಮಲ್ಲೇಶ್ವರಂ ಮಿಲ್ಕ್ ಕಾಲೋನಿ ಮಾರ್ಗದಲ್ಲೂ ಮರಗಳು ಬಿದ್ದಿದ್ದ ಪರಿಣಾಮ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿವೆ. ಚಾಮರಾಜಪೇಟೆಯ ಮನೆಯೊಂದರ ಮೇಲೆ ಮರ ಬಿದ್ದಿದ್ದು, ಜನರು ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿತ್ತು.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ:

ನಗರದಾದ್ಯಂತ ಮರ ಬಿದ್ದು ಸಂಚಾರ ಅಸ್ತವ್ಯಸ್ತವಾಗಿದ್ದರೂ, ಜಿಬಿಎ ಅರಣ್ಯ ಸಿಬ್ಬಂದಿ, ಬೆಸ್ಕಾಂ ಸಹಾಯವಾಣಿ ಕರೆ ಸ್ವೀಕರಿಸುತ್ತಿಲ್ಲ ಮತ್ತು ಜಿಬಿಎ ಸಿಬ್ಬಂದಿ ಸ್ಥಳಕ್ಕೆ ಬರುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಸಮಯಕ್ಕೆ ಸರಿಯಾಗಿ ನೆರವು ಬಾರದ ಕಾರಣ ಸಾರ್ವಜನಿಕರೇ ಕೆಲವೆಡೆ ಮರಗಳನ್ನು ತೆರವುಗೊಳಿಸುವ ಪ್ರಯತ್ನ ಮಾಡಿದರು.

ಏಕಕಾಲದಲ್ಲಿ ಹಲವು ಕರೆಗಳು

ರೆಂಬೆ ಕೊಂಬೆಗಳು ಮುರಿದಿರುವುದು ಹಾಗೂ ಬುಡಸಮೇತ ಬಿದ್ದಿರುವ ಮರಗಳು ಸೇರಿ ಸುಮಾರು 850 ಮರಗಳು ಬಿದ್ದಿವೆ. ಅದರಲ್ಲೂ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲೇ 107 ಮರಗಳು ಬಿದ್ದಿದ್ದು, 150 ಮರಗಳ ರೆಂಬೆ ಕೊಂಬೆಗಳನ್ನು ಬಿದ್ದಿದ್ದವು. ಇವುಗಳನ್ನು ತೆರವುಗೊಳಿಸಲು ಸೀಮಿತ ಸಂಖ್ಯೆಯ ಸಿಬ್ಬಂದಿ, ಸಲಕರಣಿಗಳಿರುವ ಕಾರಣ ಮರ ತೆರವು ಕಾರ್ಯಾಚರಣೆ ವಿಳಂಬವಾಗಿದೆ ಎಂದು ಜಿಬಿಎ ಅರಣ್ಯಾಧಿಕಾರಿಯೊಬ್ಬರು ತಿಳಿಸಿದರು.

ಬಿದ್ದ ಕಂಬಗಳು, ಕೈಕೊಟ್ಟ ವಿದ್ಯುತ್

186 ವಿದ್ಯುತ್ ಕಂಬಗಳು, 36 ಕಡೆ ಟ್ರಾನ್ಸ್‌ಫರ್ಮರ್ ಸುಟ್ಟಿದ್ದ ಕಾರಣ ನಗರದ ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಗುರುವಾರ ಸಂಜೆವರೆಗೂ 112 ವಿದ್ಯುತ್ ಕಂಬಗಳು ರಿಪೇರಿಯಾಗಿವೆ. 12 ಟ್ರಾನ್ಸ್‌ಫಾರ್ಮರ್‌ಗಳನ್ನು ಸರಿಪಡಿಸಲಾಗಿದೆ ಎಂದು ಜಿಬಿಎ ತಿಳಿಸಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಒಳಮೀಸಲು ಸಂಭ್ರಮೋತ್ಸವ - ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಲು ಶೀಘ್ರ ಆಚರಣೆ
ಜನಿವಾರ, ಹಿಜಾಬ್‌ ಗೊಂದಲ ಮರು ಪರೀಕ್ಷೆಗೆ ಸಿದ್ಧ, ಕೃಪಾಂಕವಿಲ್ಲ : ಸಚಿವ