ಬೆಂಗಳೂರು : ಕೋಲಾರ ಜಿಲ್ಲೆಯಿಂದ ಬೇರ್ಪಟ್ಟು ಚಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆಯಾಗಿ 18 ವರ್ಷ ಕಳೆದರೂ ಚಿಕ್ಕಬಳ್ಳಾಪುರ ಜಿಲ್ಲೆಯ ಸಾರಿಗೆ ಇಲಾಖೆಯ ನೌಕರರು ಕೋಲಾರ ಜಿಲ್ಲೆಯಿಂದಲೇ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಲ್ಲಿ ಆರ್‌ಟಿಒ ಕಚೇರಿ ಇದೆ. ಈ ಕಚೇರಿಯ ವ್ಯಾಪ್ತಿಗೆ ಬರುವ ಗೌರಿಬಿದನೂರು ಹಾಗೂ ಬಾಗೇಪಲ್ಲಿಯ ಆರ್‌ಟಿಒ ತನಿಖಾ ಠಾಣೆಗಳು ಚಿಕ್ಕಬಳ್ಳಾಪುರಕ್ಕೆ ಹತ್ತಿರದಲ್ಲಿವೆ. ಅಲ್ಲದೇ, ಈ ಎಲ್ಲ ಸಿಬ್ಬಂದಿ ಚಿಕ್ಕಬಳ್ಳಾಪುರದಿಂದಲೇ ಕೆಲಸ ಮಾಡಬೇಕು ಎಂಬುದು ನಿಯಮವಾಗಿದೆ. ಇಲ್ಲಿಯೇ ಕೆಲಸ ಮಾಡುವುದರಿಂದ ಓಡಾಟ ಕಡಿಮೆಯಾಗುತ್ತದೆ. ಕೆಲಸದ ಮೇಲೆ 20 ಸಿಬ್ಬಂದಿ 130 ಕಿ.ಮೀ ಪ್ರಯಾಣಿಸುವ ಭತ್ಯೆ ವೆಚ್ಚ ಸರ್ಕಾರಕ್ಕೆ ಉಳಿತಾಯವಾಗುತ್ತದೆ ಎಂಬ ಮನವಿ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಗೌರಿಬಿದನೂರು ಹಾಗೂ ಬಾಗೇಪಲ್ಲಿ ತನಿಖಾ ಠಾಣೆಗಳ 20ಕ್ಕೂ ಹೆಚ್ಚು ಸಿಬ್ಬಂದಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಆರ್‌ಟಿಒ ಕಚೇರಿಗೆ ವರ್ಗಾವಣೆ ಮಾಡುವಂತೆ ಆದೇಶ ಮಾಡಿದ್ದರು. ಆದರೆ, ಕಾಣದ ಕೈಗಳು ಈ ವರ್ಗಾವಣೆ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ಸಾರಿಗೆ ಇಲಾಖೆ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಚಾರವನ್ನು ಸಂಸದರು, ಸಚಿವರು, ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೆ ಗಮನಕ್ಕೆ ತಂದು ಅನೇಕ ಬಾರಿ ಮನವಿ ಮಾಡಲಾಗಿದೆ. ಇತ್ತೀಚೆಗೆ ಮತ್ತೊಮ್ಮೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಲಾಗಿತ್ತು. ಚಿಕ್ಕಬಳ್ಳಾಪುರ ಸಾರಿಗೆ ಇಲಾಖೆಯ ಸಿಬ್ಬಂದಿ, ತಮ್ಮ ಜಿಲ್ಲೆಯಿಂದಲೇ ಕೆಲಸ ಮಾಡುವ ಬಗ್ಗೆ ಪರಿಶೀಲಿಸುವಂತೆ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ. ಆದರೆ, ಕೆಲವು ವ್ಯಕ್ತಿಗಳ ಒತ್ತಡದಿಂದ ವರ್ಗಾವಣೆ ಮಾಡದೇ ತಡೆ ಹಿಡಿಯಲಾಗುತ್ತಿದೆ ಎಂದು ಸಾರಿಗೆ ಸಿಬ್ಬಂದಿ ಆರೋಪಿಸಿದ್ದಾರೆ.
ನಿಯಮಾನುಸಾರ ಸಾರಿಗೆ ನೌಕರರು ಕೆಲಸ ನಿರ್ವಹಿಸಲು ಸಾರಿಗೆ ಸಚಿವರು ನೀಡಿದ ಆದೇಶಗಳು ಪಾಲನೆಯಾಗುತ್ತಿಲ್ಲ. ಹೀಗಾಗಿ, ನಂದಿ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆ ವೇಳೆ ಈ ಕುರಿತು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸುತ್ತೇವೆ ಎಂದು ಗೌರಿಬಿದನೂರು ಹಾಗೂ ಬಾಗೇಪಲ್ಲಿ ಆರ್‌ಟಿಒ ತನಿಖಾ ಠಾಣೆ ಸಿಬ್ಬಂದಿ ಹೇಳಿದ್ದಾರೆ.