;Resize=(412,232))
ಬೆಂಗಳೂರು : ಪಶುವೈದ್ಯಾಧಿಕಾರಿ ಹುದ್ದೆಯನ್ನು ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆ ಲಕ್ಷ ಲಕ್ಷಕ್ಕೆ ಮಾರಾಟ ಮಾಡಿದ್ದ ‘ಡೀಲ್’ ಅನ್ನು ಎಳೆ ಎಳೆಯಾಗಿ ಅಪರಾಧ ತನಿಖಾ ಇಲಾಖೆ (ಸಿಐಡಿ) ಬಿಡಿಸಿಟ್ಟಿದೆ.
ಕೆಪಿಎಸ್ಸಿ(ಕರ್ನಾಟಕ ಲೋಕಸೇವಾ ಆಯೋಗ)ದ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ ಸಂಬಂಧ 40 ಅಭ್ಯರ್ಥಿಗಳನ್ನು ವಿಚಾರಣೆ ನಡೆಸಲಾಗಿದ್ದು, 29 ಅಭ್ಯರ್ಥಿಗಳ ಹೆಸರನ್ನು ಎಫ್‌ಐಆರ್‌ನಲ್ಲಿ ಆರೋಪಿಗಳಾಗಿ ಉಲ್ಲೇಖಿಸಲಾಗಿತ್ತು. ಇವರಲ್ಲಿ ಸಿದ್ಧಾರ್ಥ್, ರಾಜ್ ಮೊಹಮ್ಮದ್, ಬಸವರಾಜ್, ಮಹೇಂದ್ರ ಹಾಗೂ ನಿರಂಜನ್ ಸೇರಿ ಐವರು ಅಭ್ಯರ್ಥಿಗಳನ್ನು ಮಧ್ಯವರ್ತಿ ಪವನ್ ಮತ್ತು ಅಭ್ಯರ್ಥಿ ಮೊಹಮ್ಮದ್ ಸೊಹೈಲ್‌ನನ್ನು ಮಧ್ಯವರ್ತಿ ಮಾರುತಿ ಮೂಲಕ ಬಸವರಾಜ್ ಕನ್ನಾಳೆ ಸಂಪರ್ಕಿಸಿ ವ್ಯವಹಾರ ನಡೆಸಿದ್ದ. ಆದರೆ, ಕಿರಣ್ ಗೌಡ ಹಾಗೂ ಚೈತ್ರಾ ಅವರೊಂದಿಗೆ ನೇರವಾಗಿ ಕನ್ನಾಳೆಯೇ ಡೀಲ್ ನಡೆಸಿದ್ದ ಎಂದು ಸಿಐಡಿ ಮೂಲಗಳು ಹೇಳಿವೆ.
ಬೀದರ್ ಜಿಲ್ಲೆ ಭಾಲ್ಕಿ ಪಟ್ಟಣದ ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಬ್ಯಾಂಕ್ ಮತ್ತು ಬಾಲು ರೆಡ್ಡಿ ಅವರ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಗಳಿಗೆ 92 ಲಕ್ಷ ರು. ಅನ್ನು ಕನ್ನಾಳೆ ಸೂಚನೆ ಮೇರೆಗೆ ಐವರು ಅಭ್ಯರ್ಥಿಗಳು ವರ್ಗಾಯಿಸಿದ್ದರು. ಆ ಪೈಕಿ ಸಿದ್ಧಾರ್ಥ್-20 ಲಕ್ಷ ರು., ವಿ.ಬಸವರಾಜ್-27 ಲಕ್ಷ ರು., ಮಹೇಂದ್ರ-25 ಲಕ್ಷ ರು. ಹಾಗೂ ನಿರಂಜನ್- 14 ಲಕ್ಷ ರು. ಜಮೆ ಮಾಡಿದ್ದರು. ಇನ್ನುಳಿದ ಕಿರಣ್ ಗೌಡ-10 ಲಕ್ಷ ರು., ಮೊಹಮ್ಮದ್ ಸೂಹೈಲ್- 20 ಲಕ್ಷ ರು. ಹಾಗೂ ಸಲೀಂ ಒಂಟಿ- 30 ಲಕ್ಷ ರು. ಸೇರಿ 60 ಲಕ್ಷ ರು. ಅನ್ನು ನಗದು ರೂಪದಲ್ಲಿ ನೀಡಿದ್ದರು ಎಂದು ಮೂಲಗಳು ವಿವರಿಸಿವೆ.
ಅಭ್ಯರ್ಥಿಗಳು ಹಣ ಪಾವತಿಸಿದ್ದ ಬ್ಯಾಂಕ್ ಖಾತೆಗಳಲ್ಲಿ ಹಣ ಹಿಂಪಡೆಯುವಿಕೆ ಸ್ಥಗಿತಗೊಳಿಸಲಾಗಿದೆ. ಓಂ ಲಕ್ಷ್ಮೀ ಸೌಹಾರ್ದ ಬ್ಯಾಂಕ್ ಖಾತೆಯಲ್ಲಿದ್ದ 64 ಲಕ್ಷ ರು. ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಯಲ್ಲಿದ್ದ 5.20 ಲಕ್ಷ ರು. ಸೇರಿ ಒಟ್ಟು 69.20 ಲಕ್ಷ ರು. ಮೊತ್ತವನ್ನು ಮುಟ್ಟುಗೋಲು ಹಾಕಲಾಗಿದೆ. ಇನ್ನು ಕನ್ನಾಳೆಯಿಂದ 5.76 ಲಕ್ಷ ರು ನಗದು ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಸ್ನೇಹಿತ ಖರೀದಿಸಿದ್ದ 22 ಲಕ್ಷ ರು. ಮೌಲ್ಯದ ವಜ್ರದ ಸರವನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ದಂಪತಿಗೆ ಸಿಐಡಿ ತನಿಖೆ ಬಿಸಿ:
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಸಹಕಾರ ಬ್ಯಾಂಕ್‌ವೊಂದರ ಅಧ್ಯಕ್ಷರ ದಂಪತಿಗೆ ಸಿಐಡಿ ತನಿಖೆ ಬಿಸಿ ತಟ್ಟಿದೆ. ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಲಕ್ಷ್ಮೀ ನಾಗ್ರೆ ಹಾಗೂ ಅವರ ಪತಿ ಮತ್ತು ಸಂಘದ ಉಪಾಧ್ಯಕ್ಷ ಓಂಕಾರ್ ಶೆಟ್ಟಿ ತನಿಖೆ ಎದುರಿಸಿದ್ದಾರೆ. ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದ ದಂಪತಿ ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಯಿತು. ನಂತರ ಓಂಕಾರ್ ವಿಚಾರಣೆಗೆ ಹಾಜರಾದರು ಎಂದು ಮೂಲಗಳು ತಿಳಿಸಿದೆ.
ಈ ದಂಪತಿ ಹಿಡಿತದಲ್ಲಿರುವ ಸಹಕಾರಿ ಬ್ಯಾಂಕ್‌ನಲ್ಲೇ ಕನ್ನಾಳೆ ಹಣ ವರ್ಗಾವಣೆ ನಡೆಸಿದ್ದಾನೆ. ಹೀಗಾಗಿ ನೇಮಕಾತಿ ಹಗರಣದಲ್ಲಿ ಸಂಪಾದಿಸಿದ ಹಣ ವರ್ಗಾವಣೆಯಲ್ಲಿ ಓಂಕಾರ್ ದಂಪತಿ ಪಾತ್ರ ಬಗ್ಗೆ ಶಂಕೆ ವ್ಯಕ್ತವಾಯಿತು. ಕೊನೆಗೆ ಓಂಕಾರ್ ವಿಚಾರಣೆಯಲ್ಲಿ ಕನ್ನಾಳೆ ಜತೆ ಹಣಕಾಸು ವ್ಯವಹಾರದ ಬಗ್ಗೆ ಮಾಹಿತಿ ಸಿಕ್ಕಿತು ಎಂದು ಸಿಐಡಿ ಮೂಲಗಳು ಹೇಳಿವೆ.
ಅಲ್ಲದೆ ಮಧ್ಯವರ್ತಿಗಳಾದ ಪ್ರೇಮ್ ಕುಮಾರ್, ಪವನ್ ಹಾಗೂ ಓಂಪ್ರಕಾಶ್ ಮನೆಗಳನ್ನು ಪರಿಶೀಲಿಸಲಾಯಿತು. ಇದರಲ್ಲಿ ಓಂಪ್ರಕಾಶ್ ಮನೆಯಲ್ಲಿ ಒಂದು ಒಎಂಆರ್ ಶೀಟ್ ಹಾಗೂ ಎರಡು ಮೊಬೈಲ್‌ಗಳು ಜಪ್ತಿಯಾಗಿವೆ ಎಂದು ಸಿಐಡಿ ತಿಳಿಸಿದೆ.