ಹರಿಪ್ರಸಾದ್‌ ಮನೆಗೆ ಸಿಎಂ ಭೇಟಿ : ರಾಜಕೀಯ ವಲಯದಲ್ಲಿ ಚರ್ಚೆ!

Published : May 30, 2025, 11:05 AM IST
BK Hariprasad

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಪರಿಷತ್‌ ಸದಸ್ಯ ಹಾಗೂ ಹೈಕಮಾಂಡ್‌ನಲ್ಲಿ ತಮ್ಮದೇ ಆದ ಧ್ವನಿ ಹೊಂದಿರುವ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು ಗುರುವಾರ ಭೇಟಿ ಮಾಡಿ, ಸುದೀರ್ಘ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಪರಿಷತ್‌ ಸದಸ್ಯ ಹಾಗೂ ಹೈಕಮಾಂಡ್‌ನಲ್ಲಿ ತಮ್ಮದೇ ಆದ ಧ್ವನಿ ಹೊಂದಿರುವ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು ಗುರುವಾರ ಭೇಟಿ ಮಾಡಿ, ಸುದೀರ್ಘ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಈ ಭೇಟಿಯ ನಂತರ ಹರಿಪ್ರಸಾದ್‌ ಅವರಿಗೆ ಕೋಮು ಸೌಹಾರ್ದ ಕಾಪಾಡಲು ನಿಯೋಗವನ್ನು ಮಂಗಳೂರಿಗೆ ಕರೆದೊಯ್ಯುವ ತೀರ್ಮಾನವಾಗಿದೆ. ಆದರೆ, ಈ ಭೇಟಿಯ ಉದ್ದೇಶ ಕೇವಲ ನಿಯೋಗಕ್ಕೆ ಸೀಮಿತವಾಗಿರಲಿಲ್ಲ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಮೂಲಗಳ ಪ್ರಕಾರ, ಮುಖ್ಯಮಂತ್ರಿಯವರೇ ಖುದ್ದಾಗಿ ಹರಿಪ್ರಸಾದ್‌ ನಿವಾಸಕ್ಕೆ ಭೇಟಿ ನೀಡಿರುವುದರ ಹಿಂದೆ ಪಕ್ಷದ ಇತರ ಬಣಗಳಿಗೆ ಸ್ಪಷ್ಟ ಸಂದೇಶ ನೀಡುವ ಉದ್ದೇಶವಿದೆ ಎನ್ನಲಾಗುತ್ತಿದೆ. 2ನೇ ಅವಧಿಗೆ ಸಿಎಂ ಆದ ನಂತರ ಹರಿಪ್ರಸಾದ್‌ ಜತೆ ಸಿದ್ದರಾಮಯ್ಯ ತುಸು ಅಂತರ ಕಾಯ್ದುಕೊಂಡಿದ್ದರು. ಆದರೆ, ಕೆಲ ದಿನಗಳಿಂದ ಉಭಯ ನಾಯಕರ ನಡುವೆ ಸಾಮೀಪ್ಯ ಬೆಳೆದಿತ್ತು. ಅದು ಗುರುವಾರದ ಭೇಟಿಯಿಂದ ಮತ್ತಷ್ಟು ಸುಸ್ಪಷ್ಟವಾಗಿದೆ.

ಎರಡೂವರೆ ವರ್ಷಗಳ ನಂತರ ಅಧಿಕಾರ ಹಸ್ತಾಂತರದ ವದಂತಿಗಳು ಜೀವಂತ ಇರುವ ಹಿನ್ನೆಲೆಯಲ್ಲಿ ಈ ಭೇಟಿ ಮೂಲಕ ಸಿದ್ದರಾಮಯ್ಯ ಅವರು ಹರಿಪ್ರಸಾದ್‌ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಬಲ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂದೇ ಕಾಂಗ್ರೆಸ್‌ನಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಇದೇ ವೇಳೆ, ಸಿದ್ದರಾಮಯ್ಯ ಅವರು ಸಂಪುಟ ಪುನರ್‌ ರಚನೆ ವೇಳೆ ಬಿ.ಕೆ. ಹರಿಪ್ರಸಾದ್ ಅವರನ್ನು ತಮ್ಮ ಸಂಪುಟಕ್ಕೆ ತೆಗೆದುಕೊಳ್ಳಲಿದ್ದಾರೆ ಎಂಬ ಚರ್ಚೆಗೂ ಈ ಭೇಟಿ ಪುಷ್ಠಿ ನೀಡಿದೆ.

ನಮ್ಮಿಬ್ಬರ ನಡುವೆ ಅಸಮಾಧಾನ ಇಲ್ಲ: ಬಿ.ಕೆ.ಹರಿಪ್ರಸಾದ್:

ಭೇಟಿ ಬಗ್ಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ನಮ್ಮಿಬ್ಬರ ನಡುವೆ ಅಸಮಾಧಾನ ಇಲ್ಲ. ಅವರು ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ನಾಯಕ. ಮಂಗಳೂರು ವಿಚಾರದ ಚರ್ಚೆಗೆ ನಾನು ಬರುತ್ತೇನೆ ಎಂದಿದ್ದೆ, ಅವರೇ ಬರುತ್ತೇನೆ ಎಂದರು. ಮಂಗಳೂರಿನಲ್ಲಿ ಕೊಲೆಗಳು, ಗಲಭೆಗಳು ಹೆಚ್ಚಾಗಿವೆ. ಈ ಬಗ್ಗೆ ಚರ್ಚಿಸಿದ್ದೇವೆ. ರಾಜಕೀಯ ಏನೂ ಇಲ್ಲ ಎಂದು ಹೇಳಿದರು.

ಈ ಭೇಟಿ, ಪಕ್ಷದ ಒಳಗೆ ಸಂದೇಶ ರವಾನಿಸುವ ಪ್ರಯತ್ನವೇ?, ನಿಮ್ಮಿಬ್ಬರ ಮಧ್ಯೆ ಶಾಂತಿ ನೆಲೆಸಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಅದು ನಿಮ್ಮ ಅನಿಸಿಕೆ ಮಾತ್ರ. ನೀವು ಏನಾದರೂ ತಿಳಿದುಕೊಳ್ಳಿ. ಅದರ ಬಗ್ಗೆ ನಾನೇನೂ ಹೇಳುವುದಿಲ್ಲ. ನಮ್ಮಿಬ್ಬರ ನಡುವೆ ಶಾಂತಿ ಮೊದಲೂ ಇದೆ, ಈಗಲೂ ಇರುತ್ತದೆ ಎಂದಷ್ಟೇ ಹೇಳಿದರು.

PREV
Read more Articles on

Recommended Stories

ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ
ನನ್ನ ಬಗ್ಗೆ ಮಾತನಾಡುವವರಿಗೆ ಸಿಗಂದೂರು ಚೌಡೇಶ್ವರಿ ತಕ್ಕ ಬುದ್ಧಿ ಕಲಿಸಲಿದ್ದಾಳೆ : ಮಧು ಬಂಗಾರಪ್ಪ