ಸಿಎಂರಿಂದ ರೈತರ ಆತ್ಮಸ್ಥೈರ್‍ಯ ಕುಗ್ಗಿಸುವ ಹೇಳಿಕೆ : ವಿಜಯೇಂದ್ರ

Published : Jul 04, 2026, 10:35 AM IST
Vijayendra

ಸಾರಾಂಶ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಜಲಾಶಯಗಳಲ್ಲಿ ನೀರಿಲ್ಲದ ಕಾರಣ ರೈತರು ಬೆಳೆ ಹಾಕಬೇಡಿ ಎನ್ನುವ ಮೂಲಕ ರಾಜ್ಯದ ರೈತರ ಆತ್ಮಸ್ಥೈರ್ಯ ಕುಗ್ಗಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

  ಬೆಂಗಳೂರು :  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಜಲಾಶಯಗಳಲ್ಲಿ ನೀರಿಲ್ಲದ ಕಾರಣ ರೈತರು ಬೆಳೆ ಹಾಕಬೇಡಿ ಎನ್ನುವ ಮೂಲಕ ರಾಜ್ಯದ ರೈತರ ಆತ್ಮಸ್ಥೈರ್ಯ ಕುಗ್ಗಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

 ಶುಕ್ರವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಈ ನಾಡಿನ ದೊರೆಯಾದ ಮುಖ್ಯಮಂತ್ರಿ ಅವರು ಭೀಕರ ಬರಗಾಲದ ಮುನ್ಸೂಚನೆ ವಿಚಾರವನ್ನು ಸಂಪುಟದಲ್ಲಿ ಚರ್ಚಿಸಿ ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲದ ಕಾರಣ ರೈತರು ಬೆಳೆ ಬೆಳೆಯದಿರಿ ಎಂದು ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಅಚ್ಚರಿ ಜೊತೆಗೆ ಅತ್ಯಂತ ನೋವು ತಂದಿದೆ ಎಂದರು.

ನಾವೇನೇ ಹೇಳಿಕೆ ನೀಡಿದರೂ ಪ್ರಬುದ್ಧತೆಯಿಂದ ಮಾತನಾಡುವಂತೆ ಸಿಎಂ ಹೇಳುತ್ತಾರೆ. ಇಡೀ ದೇಶದಲ್ಲಿ ಬರಗಾಲದ ಛಾಯೆ ಮೂಡಿದೆ. ಪ್ರಕೃತಿ ಮುನಿಸಿಕೊಂಡ ಸಂದರ್ಭದಲ್ಲಿ ಸರ್ಕಾರ ರಾಜ್ಯದ ರೈತರಿಗೆ ಅಭಯ, ಭರವಸೆ ನೀಡಬೇಕಿತ್ತು. ಮುಂದಿನ 15-20 ದಿನ ಮಳೆ ಬೀಳುವ ಆಶಾಭಾವ ಇದೆ. ಮುಖ್ಯಮಂತ್ರಿಗಳು ಹೇಳಿದರೆಂದು ರೈತರು ಬಿತ್ತನೆ ಮಾಡದಿದ್ದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಈ ಕಪಟ ನಾಟಕ ಏಕೆ?:

ಶೇ.50-60ರಷ್ಟು ಮಳೆ ಕಡಿಮೆ ಇರುವಾಗ ರಾಜ್ಯ ಸರ್ಕಾರದ ಆದ್ಯತೆ ಏನು? ಇವರೇನಾದರೂ ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಿದ್ದಾರಾ? ರೈತರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಾನುವಾರುಗಳಿಗೆ ಸಂಬಂಧಿಸಿ ಅನುದಾನ ಬಿಡುಗಡೆ ಮಾಡಿದ್ದಾರಾ? ಬರಗಾಲದ ಮುನ್ಸೂಚನೆ ವಿಚಾರ ರಾತ್ರೋರಾತ್ರಿ ಜ್ಞಾನೋದಯ ಆಗಿದೆಯೇ? ಯಾಕೆ ಈ ರೀತಿ ಕಪಟ ನಾಟಕ ಆಡುತ್ತಿದ್ದೀರಿ ಎಂದು ಕೇಳಿದರು.

ಸಿಎಂ ರಿಯಲ್‌ ಎಸ್ಟೇಟ್‌ ಪರ:

ರೈತರ ಪರ ಇರಬೇಕಾದ ಮುಖ್ಯಮಂತ್ರಿ ಅವರು ರಿಯಲ್ ಎಸ್ಟೇಟ್ ಪರ ಇದ್ದಾಗ ರಾಜ್ಯದ ಹಣೆಬರಹ ಇದೇ ಆಗುತ್ತದೆ. ನಮ್ಮ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುವ ದುಸ್ಸಾಹಸಕ್ಕೆ ಕೈ ಹಾಕಿದ್ದು ಏಕೆ? ಮುಖ್ಯಮಂತ್ರಿ ಅವರು ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ರೈತರಿಗೆ ಕೊಡಬೇಕಾದ ಯೋಜನೆ, ಆಡಳಿತ ಸನ್ನದ್ಧತೆ ಕಡೆಗೆ ಗಮನಿಸದೇ ಕೈಚೆಲ್ಲಿ ಕೂತರೆ ಹೇಗೆ? ಎಂದು ವಿಜಯೇಂದ್ರ ಟೀಕಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕರಾವಳಿ-ಮಲೆನಾಡು ಟೂರಿಸಂಗೆ ಹೊಸ ನೀತಿ : ಸಚಿವ ಕೆ.ಜೆ.ಜಾರ್ಜ್‌
ಹೈಸ್ಕೂಲ್‌ ಮಕ್ಕಳ ಜೀವಾಳ ರಾವ್ಸ್‌ ಅಕಾಡೆಮಿ ‘ಅಭ್ಯಾಸ ಪುಸ್ತಕ’