ರಾಜ್ಯದ ಮಾವು ಬೆಳೆಗಾರರ ನೆರವಿಗೆ ಬನ್ನಿ: ಕೇಂದ್ರ ಸಚಿವ ಎಚ್‌ಡಿಕೆ ಮನವಿ

Published : Jun 18, 2026, 06:41 AM IST
HDK

ಸಾರಾಂಶ

ಬೆಲೆ ಕುಸಿತದಿಂದ ಕಂಗೆಟ್ಟಿರುವ ರಾಜ್ಯದ ಮಾವು ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಮಾಡಿದ್ದಾರೆ.

  ಬೆಂಗಳೂರು :  ಬೆಲೆ ಕುಸಿತದಿಂದ ಕಂಗೆಟ್ಟಿರುವ ರಾಜ್ಯದ ಮಾವು ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದಿರುವ ಅವರು, 2026-27ರ ಋತುವಿನಲ್ಲಿ ರೈತರು ಎದುರಿಸುತ್ತಿರುವ ಬೆಲೆ ಕುಸಿತ ಸಂಕಷ್ಟ ತಗ್ಗಿಸಲು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ (ಎಂಐಎಸ್) ಮೂಲಕ ನೆರವಾಗಬೇಕು ಮತ್ತು ಬೆಲೆ ಕೊರತೆ ಪಾವತಿ ಯೋಜನೆ (ಪಿಡಿಪಿಎಸ್) ಅಡಿ ಬೆಂಬಲ ಬೆಲೆ ನೀಡುವಂತೆ ವಿನಂತಿಸಿದ್ದಾರೆ.

ಮಾರುಕಟ್ಟೆ ಬೆಲೆ ಕುಸಿತ ಮತ್ತು ಹೆಚ್ಚುತ್ತಿರುವ ಕೃಷಿ ವೆಚ್ಚಗಳಿಂದಾಗಿ ಮಾವು ಬೆಳೆಗಾರರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕರ್ನಾಟಕವು ಅತಿಹೆಚ್ಚು ಮಾವು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಸುಮಾರು 1.45 ಲಕ್ಷ ಹೆಕ್ಟೇರ್‌ಗಳಲ್ಲಿ ಮಾವು ಕೃಷಿ ಮಾಡಲಾಗುತ್ತಿದ್ದು, ಪ್ರಸಕ್ತ ಋತುವಿನಲ್ಲಿ ಸುಮಾರು 10 ಲಕ್ಷ ಮೆಟ್ರಿಕ್ ಟನ್ ಮಾವು ಬೆಳೆಯಲಾಗಿದೆ. ಆದರೆ, ಬೆಲೆ ಕುಸಿತ ಹಾಗೂ ಪ್ರತಿಕೂಲಕರ ಹವಾಮಾನದಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ಕೃಷಿ ಸಚಿವರ ಗಮನ ಸೆಳೆದಿದ್ದಾರೆ.

ಕಡಿಮೆ ಬೆಲೆಗೆ ಮಾರುವ ಸ್ಥಿತಿ:

ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ಧಾರವಾಡ, ತುಮಕೂರು ಮತ್ತು ಹಾವೇರಿಯಂಥ ಜಿಲ್ಲೆಗಳಲ್ಲಿ ಸಾವಿರಾರು ರೈತ ಕುಟುಂಬಗಳು ಮಾವು ಕೃಷಿ ಅವಲಂಬಿಸಿದೆ. ಇದು ಅತ್ಯಂತ ಪ್ರಮುಖ ವಾಣಿಜ್ಯ ತೋಟಗಾರಿಕಾ ಬೆಳೆಯಾಗಿದೆ. ಮಾರುಕಟ್ಟೆಯ ಏರಿಳಿತಗಳು ಮತ್ತು ಅತಿಯಾದ ಪೂರೈಕೆ ಪರಿಸ್ಥಿತಿಗಳಿಂದಾಗಿ ಅನೇಕ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಲಾಭದಾಯಕ ಮಟ್ಟಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆರ್ಥಿಕ ನಷ್ಟದಲ್ಲಿ ರೈತರು:

ಕರ್ನಾಟಕ ಕೃಷಿ ಬೆಲೆ ಆಯೋಗದ ಅಂದಾಜಿನ ಪ್ರಕಾರ ಮಾವಿನ ಕೃಷಿಯ (ಸಿ-3) ವೆಚ್ಚವನ್ನು ಕ್ವಿಂಟಲ್‌ಗೆ 3,951 ರು. ಎಂದು ಅಂದಾಜಿಸಲಾಗಿದೆ. ಆದರೆ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗಳು ಈ ಮಟ್ಟಕ್ಕಿಂತ ಗಣನೀಯವಾಗಿ ಕಡಿಮೆ ಇರುವುದರಿಂದ ನೀರಾವರಿ, ಕಾರ್ಮಿಕರ ವೆಚ್ಚ ಮತ್ತು ಕೊಯ್ಲು ಕಾರ್ಯಾಚರಣೆಗಳಲ್ಲಿ ಗಣನೀಯ ವೆಚ್ಚದ ಹೊರತಾಗಿಯೂ ರೈತರು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.

ಪಿಡಿಪಿಎಸ್ ಕಾರ್ಯವಿಧಾನದ ಮೂಲಕ ಬೆಂಬಲ ಬೆಲೆ ನೀಡುವುದರಿಂದ ಮಾರುಕಟ್ಟೆ ಬೆಲೆಗಳು ಮತ್ತು ಲಾಭದಾಯಕ ಆದಾಯದ ನಡುವಿನ ಅಂತರ ಕಡಿಮೆ ಮಾಡಲು ಸಹಾಯವಾಗುತ್ತದೆ ಮತ್ತು ಮಾವು ಬೆಳೆಗಾರರಿಗೆ ಆದಾಯ ರಕ್ಷಣೆ ಖಚಿತಪಡಿಸುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರೇಣುಕಾಸ್ವಾಮಿ ಹತ್ಯೆ: ಪೆನ್‌ಡ್ರೈವ್‌ ಸಾಕ್ಷ್ಯಕ್ಕೆ ಸಿವಿಲ್‌ ಕೋರ್ಟ್‌ ಒಪ್ಪಿಗೆ
ಜೆಡಿಎಸ್‌, ಬಿಜೆಪಿ ಅಧಿಕಾರದಲ್ಲಿದ್ದಾಗ ಬಿಡದಿ ಟೌನ್‌ಶಿಪ್‌ ಏಕೆ ರದ್ದು ಮಾಡ್ಲಿಲ್ಲ?: ಬಾಲಕೃಷ್ಣ