ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ

Published : Dec 06, 2025, 05:55 AM IST
Siddaramaiah

ಸಾರಾಂಶ

ಜಿಎಸ್‌ಟಿ ದರ ಬದಲಾವಣೆಯಿಂದ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಕುಸಿತ ಕಂಡಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ಐದು ತಿಂಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಕಳೆದ ವರ್ಷಕ್ಕಿಂತ ಶೇ.12ರಷ್ಟು ಬೆಳವಣಿಗೆ ದರವಿದ್ದರೆ, ಜಿಎಸ್‌ಟಿ ದರ ಬದಲಾವಣೆ ನಂತರದ ಮೂರು ತಿಂಗಳಲ್ಲಿ ತೆರಿಗೆ ಸಂಗ್ರಹ ಶೇ.3ರಷ್ಟು ಬೆಳವಣಿಗೆ ದರ 

  ಬೆಂಗಳೂರು :  ಜಿಎಸ್‌ಟಿ ದರ ಬದಲಾವಣೆಯಿಂದಾಗಿ ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಕುಸಿತ ಕಂಡಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ಐದು ತಿಂಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಕಳೆದ ವರ್ಷಕ್ಕಿಂತ ಶೇ.12ರಷ್ಟು ಬೆಳವಣಿಗೆ ದರವಿದ್ದರೆ, ಜಿಎಸ್‌ಟಿ ದರ ಬದಲಾವಣೆ ನಂತರದ ಮೂರು ತಿಂಗಳಲ್ಲಿ ತೆರಿಗೆ ಸಂಗ್ರಹ ಶೇ.3ರಷ್ಟು ಬೆಳವಣಿಗೆ ದರ ಇದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.

ತೆರಿಗೆ ಸಂಗ್ರಹದ ಕುರಿತು ವಿಧಾನಸೌಧದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಎಸ್‌ಟಿ ದರ ಬದಲಾವಣೆಯಿಂದ ತೆರಿಗೆ ಸಂಗ್ರಹ ಬೆಳವಣಿಗೆ ಕುಸಿತ, ತೆರಿಗೆ ಸಂಗ್ರಹ ಗುರಿ ತಲುಪದಿರುವ ಅಂಶಗಳ ಮಾಹಿತಿ ನೀಡಲಾಗಿದೆ.

2025-26ನೇ ಸಾಲಿಗೆ 1.20 ಲಕ್ಷ ಕೋಟಿ ರು. ತೆರಿಗೆ ಸಂಗ್ರಹದ ಗುರಿ ನಿಗದಿ

2025-26ನೇ ಸಾಲಿಗೆ 1.20 ಲಕ್ಷ ಕೋಟಿ ರು. ತೆರಿಗೆ ಸಂಗ್ರಹದ ಗುರಿ ನಿಗದಿ ಮಾಡಲಾಗಿತ್ತು. ನವೆಂಬರ್‌ ಅಂತ್ಯಕ್ಕೆ 80 ಸಾವಿರ ಕೋಟಿ ರು. ಗುರಿ ನಿಗದಿ ಮಾಡಲಾಗಿತ್ತು. ಅದರಲ್ಲಿ ನಿವ್ವಳ 72,131 ಕೋಟಿ ರು. ಸಂಗ್ರಹಿಸಲಾಗಿದ್ದು, ಶೇ. 90ರಷ್ಟು ಸಾಧನೆ ಮಾಡಲಾಗಿದೆ. ಅದರಲ್ಲಿ ಜಿಎಸ್‌ಟಿ 53,522 ಕೋಟಿ ರು, ಕೆಎಸ್‌ಟಿ 17,595 ಕೋಟಿ ರು. ಮತ್ತು ವೃತ್ತಿ ತೆರಿಗೆ 1,014 ಕೋಟಿ ರು. ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಆರ್ಥಿಕ ವರ್ಷದ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ತೆರಿಗೆ ಸಂಗ್ರಹ ಬೆಳವಣಿಗೆ ದರ ಕಳೆದ ವರ್ಷಕ್ಕಿಂತ ಶೇ.12ರಷ್ಟು ಹೆಚ್ಚಿಗೆ ಸಾಧಿಸಲಾಗಿದೆ. ಆದರೆ, ಜಿಎಸ್‌ಟಿ ದರ ಬದಲಾವಣೆ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ತೆರಿಗೆ ಸಂಗ್ರಹದ ಬೆಳವಣಿಗೆ ದರ ಶೇ.3ರಷ್ಟು ಮಾತ್ರ ಸಾಧ್ಯವಾಗಿದೆ. ವಾಣಿಜ್ಯ ವಿಚಕ್ಷಣಾ ದಳ ನವೆಂಬರ್‌ ಅಂತ್ಯದವರೆಗೆ 13 ಸಾವಿರ ತಪಾಸಣೆ ನಡೆಸಿ 3,183 ಕೋಟಿ ರು. ತೆರಿಗೆ ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.

ಅಧಿಕಾರಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಿಗದಿತ ಗುರಿ ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ವಾಣಿಜ್ಯ ವಿಚಕ್ಷಣಾ ದಳ ತೆರಿಗೆ ಕಳ್ಳತನ ತಪ್ಪಿಸಲು ನಿರಂತರ ತಪಾಸಣೆ ಕೈಗೊಳ್ಳಬೇಕು. ತೆರಿಗೆ ತಪ್ಪಿಸಲು ಯಾವುದೇ ಅವಕಾಶ ಇಲ್ಲದಂತೆ ಕಟ್ಟೆಚ್ಚರ ವಹಿಸಬೇಕು. ಹಿಂದಿನ ವರ್ಷಗಳ ಅಂಕಿ-ಅಂಶ ಬಳಸಿಕೊಂಡು, ತಂತ್ರಜ್ಞಾನ ಬಳಸಿ ಕೆಲಸ ಮಾಡಬೇಕು. ಅದರಲ್ಲೂ ದತ್ತಾಂಶ ಪರಿಶೀಲನಾ ವಿಭಾಗ ಬಲಪಡಿಸಬೇಕು. ಬೋಗಸ್‌ ಇನ್ಪುಟ್‌ ಟ್ಯಾಕ್ಸ್‌ ಕ್ರೆಡಿಟ್ ಪ್ರಕರಣಗಳ ಮೇಲೆ ನಿಗಾ ಇರಿಸಿ ಅಂತಹ ಪ್ರಕರಣಗಳಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಬಕಾರಿ ತೆರಿಗೆ ಸಂಗ್ರಹದಲ್ಲಿ ಏರಿಕೆ

2025-26ನೇ ಸಾಲಿನಲ್ಲಿ 43 ಸಾವಿರ ಕೋಟಿ ರು. ಅಬಕಾರಿ ತೆರಿಗೆ ಸಂಗ್ರಹದ ಗುರಿ ನೀಡಲಾಗಿದ್ದು, ನವೆಂಬರ್‌ ಅಂತ್ಯಕ್ಕೆ 26,215 ಕೋಟಿ ರು. ಅಬಕಾರಿ ತೆರಿಗೆ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಗೆ ಅಬಕಾರಿ ತೆರಿಗೆ ಸಂಗ್ರಹದಲ್ಲಿ ಶೇ. 10.46ರಷ್ಟು ಬೆಳವಣಿಗೆ ದರ ಸಾಧಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ದೊಡ್ಡಬಳ್ಳಾಪುರ ಸೀರೆಗಳಿಗೆ ಜಿಐ ಟ್ಯಾಗ್‌: ಸಚಿವ ಶಿವಾನಂದ ಪಾಟೀಲ
ರೈತರ ಕಣ್ಣೀರಿಗೆ ರಾಜ್ಯ ಸರ್ಕಾವೇ ಕಾರಣ