ಬೆಂಗಳೂರು : ಹಿಂದುಳಿದ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಶಾಶ್ವತ ಆಯೋಗ ಸ್ಥಾಪಿಸಿ ಪ್ರತೀ ವರ್ಷ ವಿಶೇಷ ಪ್ಯಾಕೇಜ್ ನೀಡಬೇಕು, ಅಲೆಮಾರಿಗಳ ವಿಮೋಚನಾ ದಿನಾಚರಣೆಯನ್ನು ಸರ್ಕಾರ ಘೋಷಿಸಿ ಆಚರಿಸಬೇಕು ಎಂದು ಸಮುದಾಯದ ಮುಖಂಡರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಅಲೆಮಾರಿಗಳ ವಿಮೋಚನಾ ದಿನಾಚರಣೆ’ ಕಾರ್ಯಕ್ರಮವನ್ನು ಉಪಸಭಾಪತಿ ರುದ್ರಪ್ಪ ಲಮಾಣಿ ಉದ್ಘಾಟಿಸಿದರು. ಅಲೆಮಾರಿ ಸಮುದಾಯಗಳ ಅನೇಕ ಮುಖಂಡರು, ಸಂಘಟನೆಗಳ ನಾಯಕರು ಪಾಲ್ಗೊಂಡು ಮಾತನಾಡಿದರು. ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಪ್ರಮುಖ ಆರು ನಿರ್ಣಯಗಳನ್ನು ಕೈಗೊಂಡು ಅವುಗಳ ಜಾರಿಗೆ ಸರ್ಕಾರದ ಮೇಲೆ ನಿರಂತರ ಒತ್ತಡ ಹಾಕಲು ತೀರ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ರುದ್ರಪ್ಪ ಲಮಾಣಿ ಅವರು, ರಾಜ್ಯ ಸರ್ಕಾರ ಆ.31 ಅನ್ನು ‘ಅಲೆಮಾರಿಗಳ ವಿಮೋಚನಾ ದಿನಾಚರಣೆ’ ಯಾಗಿ ಘೋಷಣೆ ಮಾಡಬೇಕು. ಇದರಿಂದ ಅಲೆಮಾರಿ ಸಮುದಾಯಗಳ ಇತಿಹಾಸ, ಅಸ್ಮಿತೆ, ಘನತೆ ಮತ್ತು ಪ್ರಗತಿಗೆ ನೆರವಾಗಲಿದೆ. ಅದೇ ರೀತಿ ಈ ಸಮುದಾಯಗಳ ಶಿಕ್ಷಣ, ಉದ್ಯೋಗ ಮತ್ತು ಅರ್ಥಿಕ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಶಾಶ್ವತ ಆಯೋಗ ಸ್ಥಾಪನೆ ಮಾಡಬೇಕು. ಕೇಂದ್ರ ರಾಜ್ಯ ಸರ್ಕಾರಗಳು ವಿಷೇಶ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಿದರು.
ವಕೀಲ ಎನ್.ಅನಂತನಾಯ್ಕ ಮಾತನಾಡಿ, ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಿದೆ. ಬಂಜಾರ, ಬೋವಿ, ಕೊರಮ ಜಾತಿಗಳ ಪ್ರವರ್ಗ-ಸಿ ಗುಂಪಿನಲ್ಲಿ ಕೊರಚ ಸೇರಿ 50ಕ್ಕೂ ಹೆಚ್ಚು ಸೂಕ್ಷ್ಮ, ಅತಿ ಸೂಕ್ಷ್ಮ ಜಾತಿಗಳನ್ನು ಸೇರಿಸಿ ಶೇ.5ರಷ್ಟು ಈ ಗುಂಪಿನ ಮೀಸಲಾತಿ ಹಂಚಿಕೆ ಮಾಡಿದೆ. ಸೂಕ್ಷ್ಮ ಸಮುದಾಯಗಳು ಸಿ ಗುಂಪಿನಲ್ಲಿ ಇರಲು ಇಚ್ಛಿಸದಿದ್ದರೆ ಅವರಿಗ ಪ್ರತ್ಯೇಕ ಗುಂಪು ಮಾಡಿ ಹೆಚ್ಚುವರಿ ಮೀಸಲಾತಿ ಹಂಚಿಕೆ ಮಾಡಬೇಕು. ವೀರಶೈವ ಲಿಂಗಾಯತ ಜಂಗಮರು ಪರಿಶಿಷ್ಟ ಜಾತಿಯ ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಡಾ ಬಿ.ಟಿ ಲಲಿತನಾಯಕ್, ನಿವೃತ್ತ ನ್ಯಾಯಾಧೀಶ ವೆಂಕಟೇಶ ವೊರ್ಸೆ, ನ್ಯಾಯವಾದಿ ಸುಭಾಷ್ ರಾಠೋಡ್, ಶಿವರುದ್ರಸ್ವಾಮಿ, ಕೃಷ್ಣಪ್ಪ ಕೊರಚ, ಹನುಮಂತ ದೊಂಬರ, ಬಸವರಾಜ್ ರಾಠೋಡ್, ಕುಬೇರ ನಾಯ್ಕ, ಗೋಪಾಲ ನಾಯ್ಕ, ಶಾಂತನಾಯ್ಕ ಚನ್ನಗಿರಿ, ಚಂದ್ರಿಕಾ, ಕೊಟ್ರಮ್ಮ ಮತ್ತಿತರರು ಭಾಗವಹಿಸಿ ಮಾತನಾಡಿದರು.
ಪ್ರಮುಖ ನಿರ್ಣಯಗಳೇನು?:
- ಆ.31 ರಂದು ‘ಅಲೆಮಾರಿಗಳ ವಿಮೋಚನಾ ದಿನಾಚರಣೆ’ ಘೋಷಿಸಬೇಕು
- ಅಲೆಮಾರಿಗಳ ಹಕ್ಕುಗಳ ಧಮನಕ್ಕೆ ದುರ್ಬಳಕೆ ಆಗುತ್ತಿರುವ ರೂಢಿಗತ ಅಪರಾಧಿಗಳ ಕಾಯ್ದೆ-1952ಕ್ಕೆ ತಿದ್ದುಪಡಿ ತರಬೇಕು
- ವಿಮುಕ್ತ ಅಲೆಮಾರಿ ಸಮುದಾಯಗಳ ಕಲ್ಯಾಣಕ್ಕಾಗಿ ಶಾಶ್ವತ ಆಯೋಗ ಸ್ಥಾಪಿಸಿಬೇಕು
- ವಿಮುಕ್ತ ಅಲೆಮಾರಿ ಸಮುದಾಯಗಳ ಸಂಘಟನೆಗೆಯೋಜನೆ ರೂಪಿಸಲಾಗುವುದು
- ಎಸ್ಸಿ ಒಳಮೀಸಲಾತಿಯ ‘ಸಿ’ ಗುಂಪಿನಲ್ಲಿ ಇರಲಿಚ್ಛಿಸದ ಸೂಕ್ಷ್ಮ ಸಮುದಾಯಗಳಿಗೆ ಪ್ರತ್ಯೇಕ ಗುಂಪು ಮಾಡಿ ಹೆಚ್ಚುವರಿ ಮೀಸಲು ನೀಡಬೇಕು