ಎತ್ತಿನ ಹೊಳೆ ಕುಡಿವ ನೀರು ಕಾಮಗಾರಿ ಮುಗಿಸಿ : ಸಿದ್ದು

Published : Jun 21, 2025, 08:42 AM IST
Siddaramaiah action About Stampede Case

ಸಾರಾಂಶ

ಪ್ರಾರಂಭಿಕ ಹಂತದಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಲ್ಲಾ ಏಳು ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 ಬೆಂಗಳೂರು :  ಎತ್ತಿನ ಹೊಳೆ ಯೋಜನೆಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಪೂರೈಕೆಗೆ ಬೇಕಾದಷ್ಟು ನೀರಿನ ಸರಾಸರಿ (18.08) ಲಭ್ಯವಿದ್ದು, ಪ್ರಾರಂಭಿಕ ಹಂತದಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಲ್ಲಾ ಏಳು ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶುಕ್ರವಾರ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆಸಿದ ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಈ ನಿರ್ದೇಶನ ನೀಡಿದ್ದಾರೆ.

ಎತ್ತಿನ ಹೊಳೆ ಯೋಜನೆಯಿಂದ 24.1 ಟಿಎಂಸಿ ನೀರು ನಿರೀಕ್ಷಿಸಲಾಗಿತ್ತು. ಕಳೆದ ಏಳು ವರ್ಷಗಳಲ್ಲಿ ಸರಾಸರಿ 18.08 ಟಿಎಂಸಿ ನೀರು ಲಭ್ಯತೆ ಖಾತ್ರಿಯಾಗಿದ್ದು, ಉಳಿದ 6 ಟಿಎಂಸಿ ನೀರಿನ ಕೊರತೆ ನೀಗಿಸಲು ಹೆಚ್ಚುವರಿ ನೀರು ತಿರುವುಗೊಳಿಸುವ ಕುರಿತು ಕಾರ್ಯಸಾಧ್ಯತಾ ವರದಿ ತಯಾರಿಸಲು ಸಮಾಲೋಚಕರನ್ನು ನೇಮಕ ಮಾಡಲಾಗಿದೆ. ಮೊದಲು ಕುಡಿಯುವ ನೀರು ಪೂರೈಕೆ ಮಾಡುವುದು ನಮ್ಮ ಸರ್ಕಾರದ ಆದ್ಯತೆ. ಬಳಿಕ ಕೆರೆಗಳನ್ನು ತುಂಬಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಯೋಜನಾ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಖಾತ್ರಿಪಡಿಸಬೇಕು. ಕುಡಿಯುವ ನೀರು ಕಾಮಗಾರಿ ಪೂರ್ಣಗೊಳಿಸಲು ಇರುವ ಎಲ್ಲಾ ತಾಂತ್ರಿಕ ಅಡಚಣೆಗಳನ್ನು ನಿವಾರಿಸಬೇಕು ಎಂದು ಸಿದ್ದರಾಮಯ್ಯ ಸ್ಪಷ್ಟ ಸೂಚನೆ ನೀಡಿದರು.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ 14.056 ಟಿಎಂಸಿ ಕುಡಿಯುವ ನೀರು, 9.953 ಟಿಎಂಸಿ ನೀರು ಕೆರೆಯನ್ನು ತುಂಬಿಸಲು ಡಿಪಿಆರ್‌ ಮಾಡಲಾಗಿದೆ. ಯೋಜನೆಗೆ 23,251.66 ಕೋಟಿ ರು. ಪರಿಷ್ಕೃತ ಅಂದಾಜು ಮಾಡಲಾಗಿದ್ದು, ಈವರೆಗೆ 17,147 ಕೋಟಿ ರು. ವೆಚ್ಚವಾಗಿದೆ. ಒಂದನೇ ಹಂತದಲ್ಲಿ ನದಿ ಪಾತ್ರದ ಏತ ನೀರಾವರಿ ಕಾಮಗಾರಿಗಳಲ್ಲಿ 7ಪ್ಯಾಕೇಜ್‌ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಹಂತ 2ರಲ್ಲಿ ಗುರುತ್ವ ಮುಖ್ಯ ಕಾಲುವೆ ಕಾಮಗಾರಿಗಳಲ್ಲಿ 33 ಪ್ಯಾಕೇಜ್‌ಗಳ ಪೈಕಿ 11 ಪ್ಯಾಕೇಜ್ ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ವಿವರಣೆ ನೀಡಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 16 ಕಿ.ಮೀ. ವ್ಯಾಪ್ತಿಯ ಕಾಮಗಾರಿ ಇನ್ನೂ ಆರಂಭಿಸಬೇಕಿದೆ. ಇದರಲ್ಲಿ 6 ಎಕರೆ ಅರಣ್ಯ ಪ್ರದೇಶ ಹಾಗೂ 10 ಕಿ.ಮೀ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬೇಕಾಗಿದೆ. ಯೋಜನೆಯನ್ನು 2027ರ ಮಾರ್ಚ್‌ ಒಳಗಾಗಿ ಪೂರ್ಣಗೊಳಿಸಲು ಕಾಲಾವಧಿ ನಿಗದಿಪಡಿಸಲಾಗಿದ್ದು, ಅದಕ್ಕೂ ಮೊದಲೇ ಯೋಜನೆ ಕಾರ್ಯಗತಗೊಳ್ಳಬೇಕು. ಮೊದಲ ಹಂತದಲ್ಲಿ ಶೀಘ್ರವಾಗಿ ಕುಡಿಯುವ ನೀರೊದಗಿಸಲು ಕ್ರಮ ಕೈಗೊಳ್ಳಲು ಎಂದು ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಕೃಷ್ಣ ಬೈರೇಗೌಡ, ಡಾ.ಎಂ.ಸಿ.ಸುಧಾಕರ್, ಬೈರತಿ ಸುರೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅಂಜುಂ ಪರ್ವೇಜ್‌ ಸೇರಿ ಹಿರಿಯ ಅಧಿಕಾರಿಗಳು ಹಾಜರಿದ್ದರು.

PREV
Read more Articles on

Recommended Stories

ಮಂಗ್ಳೂರು ಕುಕ್ಕರ್‌ ಬಾಂಬ್‌ : ಆರೋಪಿ ಖಾತೆಯಲ್ಲಿದ್ದ ₹29000 ಹಣ ಜಪ್ತಿ
ನಟಿ ರಮ್ಯಾಗೆ ಕೆಟ್ಟ ಮೆಸೇಜ್‌ ಕಳಿಸಿದ್ದ ಮತ್ತೊಬ್ಬನ ಬಂಧನ