ಅಂಗನವಾಡಿ ಆರಂಭವಾಗಿ 50 ವರ್ಷ ಸುವರ್ಣ ಮಹೋತ್ಸವಕ್ಕೆ ತೀರ್ಮಾನ

Follow Us

ಸಾರಾಂಶ

ಅಕ್ಟೋಬರ್ ತಿಂಗಳಿಗೆ ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳು ಆರಂಭಗೊಂಡು 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಸುವರ್ಣ ಮಹೋತ್ಸವ ಆಯೋಜಿಸಲು ತೀರ್ಮಾನ

ಬೆಂಗಳೂರು: ಮುಂಬರುವ ಅಕ್ಟೋಬರ್ ತಿಂಗಳಿಗೆ ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳು ಆರಂಭಗೊಂಡು 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಸುವರ್ಣ ಮಹೋತ್ಸವ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.

 ಸೋಮವಾರ ವಿಕಾಸಸೌಧದಲ್ಲಿ ಬೆಂಗಳೂರು ಮತ್ತು ಮೈಸೂರು ವಿಭಾಗದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಸುವರ್ಣ ಮಹೋತ್ಸವವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗುವುದು. ಎಲ್ಲಾ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು ಸೇರಿ ಒಂದು ಲಕ್ಷಕ್ಕೂ ಅಧಿಕ ಜನರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಸುವ ಉದ್ದೇಶ ಇದೆ ಎಂದು ಹೇಳಿದರು.

ಇಲಾಖೆಯ ಯೋಜನೆಗಳನ್ನು ಸಮರ್ಪಕವಾಗಿ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಈ ಮೂಲಕ ಇಲಾಖೆಯ ಪ್ರಗತಿಗೆ ಶ್ರಮಿಸಬೇಕು. ಕಳೆದ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವಧನವನ್ನು ಒಂದು ಸಾವಿರ ರುಪಾಯಿ ಹೆಚ್ಚಿಸಲಾಗಿದೆ. ರಾಜ್ಯಕ್ಕೆ 3,800 ಮಿನಿ ಅಂಗನವಾಡಿಗಳಿಗೆ ಕೇಂದ್ರ ಸರ್ಕಾರ ಮಾನ್ಯತೆ ಕೊಟ್ಟಿದ್ದು, ಇದು ಇಡೀ ದೇಶದಲ್ಲಿ ಅತಿ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಮನವೊಲಿಸಿದ ಪರಿಣಾಮ ಇಷ್ಟೊಂದು ಮಿನಿ ಅಂಗನವಾಡಿ ಕೇಂದ್ರಗಳು ಲಭ್ಯವಾಗಿವೆ ಎಂದರು.