;Resize=(412,232))
ಬೆಂಗಳೂರು: ರಾಜ್ಯದಲ್ಲಿ ಭಾನುವಾರ ನಡೆದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ವೇಳೆ ರಾಜ್ಯದ ಕೆಲವೆಡೆ ಗೊಂದಲಗಳು ಉಂಟಾಗಿದ್ದು, ಕೆಲವೆಡೆ ಪರೀಕ್ಷಾರ್ಥಿಗಳು ಪ್ರತಿಭಟನೆ ನಡೆದ ಬಗ್ಗೆ ವರದಿಯಾಗಿದೆ.
ವಿಜಯಪುರ ಜಿಲ್ಲೆ ತಿಕೋಟಾದ ಶಾರದಾಂಬ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಒಎಂಆರ್ ಶೀಟ್, ಪ್ರಶ್ನೆಪತ್ರಿಕೆ ನಂಬರ್ ಹೊಂದಾಣಿಕೆ ಇಲ್ಲದ್ದರಿಂದ ಗೊಂದಲ ಉಂಟಾಗಿದ್ದು, ಪರೀಕ್ಷೆ ಬರೆಯಲ್ಲ ಎಂದು ಕೇಂದ್ರದಿಂದ ಹೊರ ಬಂದು ಪರೀಕ್ಷಾರ್ಥಿಗಳು ಪ್ರತಿಭಟನೆ ನಡೆಸಿದರು. ನಂತರ, ಪರೀಕ್ಷಾ ಕೇಂದ್ರದ ಗೇಟ್ ಕ್ಲೋಸ್ ಮಾಡಿದ ಕಾರಣ ಕೆಲ ಅಭ್ಯರ್ಥಿಗಳು ಗೇಟ್ ತಳ್ಳಿ ನೂಕಾಟ-ತಳ್ಳಾಟ ನಡೆಸಿದ್ದಾರೆ. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.
ಕಲಬುರಗಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿ ಹಲವೆಡೆ ಬಯೋಮೆಟ್ರಿಕ್, ಹಾಲ್ ಟಿಕೆಟ್, ಬಾರ್ ಕೋಡ್ ಸ್ಕ್ಯಾನಿಂಗ್ ಇಲ್ಲದೆ ಪರೀಕ್ಷಾ ಕೇಂದ್ರದೊಳಗೆ ಎಂಟ್ರಿ ನೀಡಲಾಗಿತ್ತು. ಪರೀಕ್ಷೆ ಮುಗಿದ ಬಳಿಕ ಮರಳಿ ಬರುವಾಗ ಅಭ್ಯರ್ಥಿಗಳ ತಪಾಸಣೆ ನಡೆಸಲಾಗಿದ್ದು, ಇದು ಗೊಂದಲಕ್ಕೆ ಕಾರಣವಾಯಿತು.
ಈ ಮಧ್ಯೆ, ಹಿಂದಿನ ಪಿಎಸ್‌ಐ ಹಾಗೂ ಕೆಇಎ ಪರೀಕ್ಷೆಗಳಲ್ಲಿನ ಅಕ್ರಮದಲ್ಲಿ ಪಾಲ್ಗೊಂಡು ಸಿಕ್ಕಿ ಬಿದ್ದಿದ್ದ 37 ಆರೋಪಿಗಳನ್ನು ಪರೀಕ್ಷೆ ಮುಗಿಯುವವರೆಗೆ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲೇ ಇರಿಸಲಾಗಿತ್ತು. ಪಿಎಸ್‌ಐ ನೇಮಕಾತಿ ಅಕ್ರಮ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸೇರಿ 37 ಆರೋಪಿಗಳು ಇದರಲ್ಲಿ ಸೇರಿದ್ದರು.
ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಬಸ್ ಸಿಗದಿದ್ದರಿಂದ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಬರೆಯಲು ದಾವಣಗೆರೆ ಹೋಗುವವರು ಪರದಾಟ ನಡೆಸುವಂತಾಯಿತು. ಕಡೆಗೆ, ಖಾಸಗಿ ಬಸ್‌ಗಳ ಮಾಲೀಕರ ಮನವೊಲಿಸಿ, ಗ್ರಾಮೀಣ ರೂಟ್‌ನ ಕೆಲ ಬಸ್‌ಗಳನ್ನೇ ನೇರವಾಗಿ ದಾವಣಗೆರೆ ನಗರಕ್ಕೆ ಸಂಚರಿಸುವ ವ್ಯವಸ್ಥೆ ಮಾಡಿ, ಪರೀಕ್ಷಾರ್ಥಿಗಳಿಗೆ ನೆರವು ಕಲ್ಪಿಸಲಾಯಿತು.
ಸಕಲೇಶಪುರ ಸಮೀಪ ಎಡಕುಮೇರಿಯಲ್ಲಿ ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಗುಡ್ಡ ಕುಸಿತ ಉಂಟಾದ ಕಾರಣ ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್ ಸೇರಿ ಹಲವು ರೈಲುಗಳ ಸಂಚಾರ ರದ್ದಾಗಿದೆ. ಹೀಗಾಗಿ, ಬೆಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಬರೆಯಲು ಮಂಗಳೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳುತ್ತಿದ್ದ ಅಭ್ಯರ್ಥಿಗಳ ರೈಲು ಸುಬ್ರಹ್ಮಣ್ಯ ರೋಡ್‌ನಲ್ಲಿ ರದ್ದುಗೊಂಡಿದ್ದು, ಅವರಿಗೆ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಿಲ್ಲ.
ಹಾಸನದ ಆರ್.ಸಿ.ರಸ್ತೆಯ ಪ್ರಧಾನ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಎರಡು ಕೊಠಡಿಗಳ ಪ್ರಶ್ನೆಪತ್ರಿಕೆ ಹಾಗೂ ಒಎಂಆರ್ ಶೀಟ್ ಅದಲು ಬದಲಾದ ಕಾರಣ ಅಭ್ಯರ್ಥಿಗಳು ಸತತ ಒಂದು ಗಂಟೆ ಕೂಗಾಟ-ಚೀರಾಟ ನಡೆಸಿದರು.
ರಾಜ್ಯದಲ್ಲಿ ಭಾನುವಾರ ನಡೆದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ವೇಳೆ, ವಿಜಯಪುರ ಜಿಲ್ಲೆಯ ತಿಕೋಟಾದ ಪರೀಕ್ಷಾ ಕೇಂದ್ರವೊಂದರಲ್ಲಿ ಕ್ರಮ ಸಂಖ್ಯೆಗಳು ಹೊಂದಾಣಿಕೆ ಆಗುತ್ತಿಲ್ಲ ಎಂದು ಗೊಂದಲ ಸೃಷ್ಟಿಸಿದ ಕೆಲ ಅಭ್ಯರ್ಥಿಗಳು ಒಎಂಆರ್ ಮತ್ತು ಪ್ರಶ್ನೆ ಪತ್ರಿಕೆ ಸಮೇತ ಕಾಂಪೌಂಡ್ ಹಾರಿ ಹೋದ ಘಟನೆ ನಡೆದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಕೇಳಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಹಣಾ ನಿರ್ದೇಶಕ ಪ್ರಸನ್ನ ತಿಳಿಸಿದ್ದಾರೆ.
ಕೆಇಎ ನಿಯಮ ಪ್ರಕಾರ ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್ ಉತ್ತರ ಪತ್ರಿಕೆಗಳ ಕ್ರಮ ಸಂಖ್ಯೆ ಹೊಂದಾಣಿಕೆ ಆಗಬೇಕೆಂದೇನೂ ಇಲ್ಲ. ಈ ಬಗ್ಗೆ ಸ್ಥಳೀಯ ಸಿಬ್ಬಂದಿಗೆ ಮನದಟ್ಟು ಮಾಡಿದರೂ ತಿಕೋಟಾದ ಶಾರದಾಂಬಾ ಪಿಯು ಕಾಲೇಜಿನ ಕೇಂದ್ರದಲ್ಲಿ ಕೆಲ ಅಭ್ಯರ್ಥಿಗಳು ಗೊಂದಲ ಸೃಷ್ಟಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ನಿಯಮದ ಪ್ರಕಾರ ಪರೀಕ್ಷೆ ಮುಗಿದ ನಂತರವೇ ಅಭ್ಯರ್ಥಿಗಳು ಕೇಂದ್ರದಿಂದ ಹೊರ ಹೋಗಬೇಕು. ಆದರೆ ಈ ಕೇಂದ್ರದಲ್ಲಿ ಕೆಲವರು ಪರೀಕ್ಷೆ ಆರಂಭವಾದ ಅರ್ಧ ಗಂಟೆಯಲ್ಲೇ ಒಎಂಆರ್ ಉತ್ತರ ಪತ್ರಿಕೆ ಹಾಗೂ ಪ್ರಶ್ನೆ ಪತ್ರಿಕೆಯೊಂದಿಗೆ ಪರೀಕ್ಷಾ ಕೇಂದ್ರದಿಂದ ಹೊರ ನಡೆದಿದ್ದಾರೆ. ಅದೂ ಕಾಂಪೌಂಡ್ ಹಾರಿ ಓಡಿ ಹೋಗಿದ್ದು, ಇದು ಕಾನೂನು ಪ್ರಕಾರ ಅಪರಾಧ ಎಂದು ಅವರು ಹೇಳಿದ್ದಾರೆ.
ಏನೇ ತಕರಾರು ಇದ್ದರೂ ಪರೀಕ್ಷಾ ಕೇಂದ್ರದೊಳಗೆ ಇದ್ದೇ ಅಭ್ಯರ್ಥಿಗಳು ಅಲ್ಲಿನ ಪ್ರಾಂಶುಪಾಲರು ಅಥವಾ ಮೇಲಧಿಕಾರಿಗಳನ್ನು ಕೇಳಬೇಕಿತ್ತು. ಪ್ರಶ್ನೆ ಪತ್ರಿಕೆ ಕೊಡುವುದು ತಡ ಆಗಿದ್ದರೆ ಹೆಚ್ಚುವರಿ ಸಮಯಕ್ಕೆ ಬೇಡಿಕೆ ಸಲ್ಲಿಸಬೇಕಿತ್ತು. ಅದು ಬಿಟ್ಟು ಪರೀಕ್ಷಾ ಸಾಮಾಗ್ರಿ ತೆಗೆದುಕೊಂಡು ಕಾಂಪೌಂಡ್ ಹಾರಿ ಓಡಿಹೋಗಿದ್ದು ಯಾವ ಉದ್ದೇಶಕ್ಕೆ ಎಂದು ಪ್ರಸನ್ನ ಅವರು ಪ್ರಶ್ನಿಸಿದ್ದಾರೆ. ಇಷ್ಟರ ನಡುವೆಯೂ ತಿಕೋಟಾ ಕೇಂದ್ರದಲ್ಲಿ 120 ಅಭ್ಯರ್ಥಿಗಳು ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದಾರೆ ಎಂದು ಅವರು ವಿವರಿಸಿದರು.
ಬೆಂಗಳೂರಿನ 149 ಕೇಂದ್ರಗಳು ಸೇರಿ ರಾಜ್ಯದ 884 ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ನಡೆದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯು ಎಲ್ಲೆಡೆ ಸುಗಮವಾಗಿ ನಡೆದಿದೆ ಎಂದು ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಉಳಿಕೆ ಮೂಲ ವೃಂದದ 3,77,861 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅವರಲ್ಲಿ ಶೇ 92.52 ರಷ್ಟು ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಕಲ್ಯಾಣ ಕರ್ನಾಟಕ ವೃಂದದ 76,676 ಅಭ್ಯರ್ಥಿಗಳ ಪೈಕಿ ಶೇ. 94 ರಷ್ಟು ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶವಾಗದಂತೆ ತಂತ್ರಜ್ಞಾನದ ಗರಿಷ್ಠ ಬಳಕೆ ಮಾಡಿಕೊಳ್ಳಲಾಯಿತು. ಎಲ್ಲ ಪರೀಕ್ಷಾ ಕೇಂದ್ರಗಳು ಹಾಗೂ ಪರೀಕ್ಷಾ ಕೊಠಡಿಗಳ ಮೇಲೆ ವೆಬ್ ಕಾಸ್ಟಿಂಗ್ ಮೂಲಕ ನಿರಂತರ ನಿಗಾ ವಹಿಸುವ ವ್ಯವಸ್ಥೆ ಮಾಡಲಾಗಿತ್ತು ಎಂದು ಅವರು ವಿವರಿದ್ದಾರೆ.
ಒಎಂಆರ್ ಪ್ರತಿ ಸ್ಕ್ಯಾನ್:
ಪಾರದರ್ಶಕತೆಯ ಭಾಗವಾಗಿ ಪರೀಕ್ಷೆ ಮುಕ್ತಾಯವಾದ ತಕ್ಷಣವೇ ಒಎಂಆರ್ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಕೆಇಎ ವೆಬ್‌ಸೈಟ್‌ಗೆ ಅಪ್ ಲೋಡ್ ಮಾಡುವ ಕೆಲಸ ಆರಂಭಿಸಲಾಗಿದೆ.
ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ, ಮೈಸೂರು, ದಾವಣಗೆರೆ, ವಿಜಯಪುರ ಹಾಗೂ ರಾಯಚೂರು ನಗರಗಳಲ್ಲಿ ಒಎಂಆರ್ ಸ್ಕ್ಯಾನಿಂಗ್‌ಗೆ ವಿಶೇಷ ವ್ಯವಸ್ಥೆ ಮಾಡಿದ್ದು, ಸಂಜೆ 7 ಗಂಟೆವರೆಗೆ ಬೆಳಗಿನ ಪರೀಕ್ಷೆಯ 20 ಜಿಲ್ಲೆಗಳ ಒಎಂಅರ್ ಪ್ರತಿಗಳನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡುವ ಕೆಲಸ ಪೂರ್ಣಗೊಳಿಸಲಾಗಿದೆ. ಉಳಿದ ಜಿಲ್ಲೆಗಳ ಒಎಂಆರ್ ಪ್ರತಿಗಳನ್ನು ಸ್ಕ್ಯಾನ್ ಮಾಡುವ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.