ಕಡೆಗೂ ಕುರ್ಚಿ ಬಿಟ್ಟ ಸಹಕಾರ ಮಹಾಮಂಡಳದ ಎಂಡಿ ಆಶಾ

Published : Aug 02, 2026, 08:12 AM IST
KM Asha

ಸಾರಾಂಶ

ಅಧಿಕಾರಾವಧಿ ಮುಗಿದಿದ್ದರೂ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಾರಾಟ ಮಹಾಮಂಡಳದ ಎಂಡಿ ಹುದ್ದೆಯಲ್ಲಿ ಮುಂದುವರೆದಿದ್ದ ಕೆ.ಎಂ.ಆಶಾ ಅವರು ಕೊನೆಗೂ ಕುರ್ಚಿ ಬಿಟ್ಟಿದ್ದಾರೆ. ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾಗಿ ಸಹಕಾರ ಸಂಘಗಳ ಅಪರ ನಿಬಂಧಕ ಎಂ.ಡಿ.ಮಲ್ಲೂರ ಅವರು ಅಧಿಕಾರ ಸ್ವೀಕರಿಸಿದ್ದಾರೆ.

 ಬೆಂಗಳೂರು :  ಅಧಿಕಾರಾವಧಿ ಮುಗಿದಿದ್ದರೂ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಾರಾಟ ಮಹಾಮಂಡಳದ ಎಂಡಿ ಹುದ್ದೆಯಲ್ಲಿ ಮುಂದುವರೆದಿದ್ದ ಕೆ.ಎಂ.ಆಶಾ ಅವರು ಕೊನೆಗೂ ಕುರ್ಚಿ ಬಿಟ್ಟಿದ್ದಾರೆ. ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾಗಿ ಸಹಕಾರ ಸಂಘಗಳ ಅಪರ ನಿಬಂಧಕ ಎಂ.ಡಿ.ಮಲ್ಲೂರ ಅವರು ಅಧಿಕಾರ ಸ್ವೀಕರಿಸಿದ್ದಾರೆ.

‘ಕನ್ನಡಪ್ರಭ’ ಜು.30 ಹಾಗೂ ಜು.31ರಂದು ಪ್ರಕಟಿಸಿದ್ದ ವಿಶೇಷ ವರದಿಗಳ ಬೆನ್ನಲ್ಲೇ ಅವರು ಅಧಿಕಾರ ತ್ಯಜಿಸಿದ್ದಾರೆ.

ಸಹಕಾರ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದ ಡಾ.ಕೆ.ಎಂ.ಆಶಾ ಅವರನ್ನು ಎರಡು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಮಹಾಮಂಡಳದ ಎಂಡಿಯಾಗಿ ಸರ್ಕಾರ ನೇಮಿಸಿತ್ತು. ಈ ಅವಧಿ ಇದೇ ಜು.7ಕ್ಕೆ ಅಂತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಜು.13ಕ್ಕೆ ಈ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ಸಹಕಾರ ಸಂಘಗಳ ಜಂಟಿ ನಿಬಂಧಕ ಶಶಿಧರ್ ಅವರಿಗೆ ವಹಿಸಿ ಸರ್ಕಾರ ಆದೇಶಿಸಿತ್ತು.

ಆದರೆ, ಕೆ.ಎಂ.ಆಶಾ ಅವರು ಅಧಿಕಾರ ಹಸ್ತಾಂತರಿಸದೆ ಅನಧಿಕೃತವಾಗಿ ಮುಂದುವರೆದಿದ್ದರು. ಇವರ ಅವಧಿ ವಿಸ್ತರಣೆಗಾಗಿ ಮುಖ್ಯಮಂತ್ರಿ ಕಚೇರಿಗೆ ಫೈಲ್ ಕಳುಹಿಸಿದ್ದೇವೆ. ಅದು ಸಹಿಯಾಗಿ ಬರುತ್ತದೆ ಎಂದು ಸಹಕಾರ ಇಲಾಖೆ ಕಾರ್ಯದರ್ಶಿ ಸಂಜಯ್ ಶೆಟ್ಟಣ್ಣವರ್ ಕೂಡ ಸಮರ್ಥಿಸಿಕೊಂಡಿದ್ದರು. ಆದರೆ, ಜು. 31ರಂದು ಶಶಿಧರ್ ಬದಲಿಗೆ ಎಂ.ಡಿ. ಮಲ್ಲೂರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ನೇಮಕಾತಿಗಾಗಿ ನಿಯಮ ಉಲ್ಲಂಘನೆ:

ಮಹಾಮಂಡಳದ 34 ಹುದ್ದೆಗಳ ನೇಮಕಾತಿಗಾಗಿ ಸರ್ಕಾರದ ನಿಯಮ ಉಲ್ಲಂಘಿಸಿ ಅಧಿಸೂಚನೆ ಹೊರಡಿಸಿರುವ ಕುರಿತು ‘ಕನ್ನಡಪ್ರಭ’ ಜು.31ರಂದು ವರದಿ ಪ್ರಕಟಿಸಿತ್ತು. ಒಳಮೀಸಲಾತಿ ಹಂಚಿಕೆ ಗೊಂದಲದ ಹಿನ್ನೆಲೆಯಲ್ಲಿ ಸರ್ಕಾರ 2024ರ ಅ. 28ರ ನಂತರ ಯಾವುದೇ ನೇರ ನೇಮಕಾತಿ ಅಧಿಸೂಚನೆ ಹೊರಡಿಸಬಾರದು ಎಂದು ಆದೇಶಿಸಿತ್ತು. ಈ ಆದೇಶ ಇದ್ದರೂ ಎಂಡಿಯಾಗಿದ್ದ ಕೆ.ಎಂ.ಆಶಾ ಅವರು 2025 ಆಗಸ್ಟ್ 14ರಂದು ನಿಯಮ ಉಲ್ಲಂಘಿಸಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದರು. ಈಗ ಅಂತಿಮ ಹಂತ ತಲುಪಿರುವ ಈ ನೇಮಕಾತಿ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ. ಈ ನೇಮಕಾತಿ ಅಂತಿಮ ಪಟ್ಟಿ ಸೇರಲು ಪ್ರಭಾವಿ ಅಧಿಕಾರಿಗಳ ಮಕ್ಕಳು, ಬಂಧುಗಳು ಲಾಬಿ ನಡೆಸಿದ್ದಾರೆ. ನೇಮಕಾತಿಗಳನ್ನು ಪಾರದರ್ಶಕವಾಗಿಸಲು ಸರ್ಕಾರ ತನ್ನ ನಿರ್ಧಾರ ಪ್ರಕಟಿಸಿರುವುದು ಇದಕ್ಕೂ ಅನ್ವಯ ಆಗುತ್ತಾ? ಎಂಬ ಕುತೂಹಲವಿದೆ.

ಜಿ.ಪಿ.ಪಾಟೀಲ್, ಹೊಸ ಎಂಡಿ

ಈ ಕುರಿತು ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ ಮಹಾಮಂಡಳದ ಅಧ್ಯಕ್ಷರಾದ ಜಿ.ಪಿ.ಪಾಟೀಲ್, ಹೊಸ ಎಂಡಿ ಶನಿವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಿದ್ದಾರೆ. ಸರ್ಕಾರದ ಸುತ್ತೋಲೆಗೆ ಮೊದಲೇ ನಾವು ಪ್ರಕ್ರಿಯೆ ಆರಂಭಿಸಿದ್ದೆವು. ಇದು ನಮಗೆ ಅನ್ವಯ ಆಗಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ. ಈ ಕುರಿತು ಇನ್ನಷ್ಟು ಪರಿಶೀಲಿಸಿ ಕಾನೂನು ಪ್ರಕಾರ ನಡೆದುಕೊಳ್ಳುತ್ತೇವೆ ಎಂದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನದಿಗೆ ಇಳೀಬೇಡಿ ಕೊಚ್ಚಿ ಹೋಗ್ತೀರ : ಹೋರಾಟಗಾರರಿಗೆ ಸಿಎಂ ಎಚ್ಚರಿಕೆ
ಕಾವೇರಿ ‘ವರಿ’ ಚರ್ಚೆಗೆ ಇಂದು ಸರ್ವ ಪಕ್ಷ ಸಭೆ