ಮಾವನ ತಿಥಿ ಮಾಡಲು ಅಳಿಯಗೆ ಕೋರ್ಟ್‌ ಪೆರೋಲ್‌

Published : Oct 13, 2025, 08:03 AM IST
Karnataka Highcourt

ಸಾರಾಂಶ

ಮಾವನ ಮರಣಕ್ಕೆ ಪೆರೋಲ್‌ ನೀಡಲು ಜೈಲಿನ ಕೈಪಿಡಿಯಲ್ಲಿ ಅವಕಾಶ ಇಲ್ಲದಿದ್ದರೂ, ತಂದೆಯನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಅನಾರೋಗ್ಯಪೀಡಿತ ಪತ್ನಿಗೆ ನೆರವಾಗಲುತಿಥಿ ಹಾಗೂ ಅಂತಿಮ ವಿಧಿ-ವಿಧಾನ ಪೂರೈಸಲು  ವ್ಯಕ್ತಿಗೆ 15 ದಿನಗಳ ಪೆರೋಲ್‌ ನೀಡುವಂತೆ   ಆದೇಶಿಸಿ ಹೈಕೋರ್ಟ್‌ ಮಾನವೀಯತೆ ಮೆರೆದಿದೆ.

ವೆಂಕಟೇಶ್‌ ಕಲಿಪಿ

  ಬೆಂಗಳೂರು :  ಮಾವನ ಮರಣಕ್ಕೆ ಪೆರೋಲ್‌ ನೀಡಲು ಜೈಲಿನ ಕೈಪಿಡಿಯಲ್ಲಿ ಅವಕಾಶ ಇಲ್ಲದಿದ್ದರೂ, ತಂದೆಯನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಅನಾರೋಗ್ಯಪೀಡಿತ ಪತ್ನಿಗೆ ನೆರವಾಗಲು, ಹೆಣ್ಣು ಕೊಟ್ಟ ತಂದೆಯ ತಿಥಿ ಹಾಗೂ ಅಂತಿಮ ವಿಧಿ-ವಿಧಾನ ಪೂರೈಸಲು ಕೊಲೆ ಕೇಸಲ್ಲಿ ಸಜಾ ಬಂಧಿಯಾಗಿರುವ ವ್ಯಕ್ತಿಗೆ 15 ದಿನಗಳ ಪೆರೋಲ್‌ ನೀಡುವಂತೆ ಜೈಲಧಿಕಾರಿಗಳಿಗೆ ಆದೇಶಿಸಿ ಹೈಕೋರ್ಟ್‌ ಮಾನವೀಯತೆ ಮೆರೆದಿದೆ.

ಜೈಲು ಕೈಪಿಡಿಯ ಕಾರಣ ನೀಡಿ ಪತ್ನಿಯ ತಂದೆಯ (ಮಾವ) ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೊಲೆ ಪ್ರಕರಣದಲ್ಲಿ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ನವೀನ್‌ಗೆ ತುರ್ತು ಪೆರೋಲ್‌ ನೀಡಲು ಜೈಲಧಿಕಾರಿಗಳು ನಿರಾಕರಿಸಿದ್ದರು. ಇದರಿಂದ ತಂದೆಯ ಅಂತಿಮ ವಿಧಿ-ವಿಧಾನ ಮಾಡಲು ಪತಿಯನ್ನು ಪೆರೋಲ್‌ ಮೇಲೆ ಬಿಡುಗಡೆಗೊಳಿಸಲು ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶಿಸುವಂತೆ ಕೋರಿ ಹಾಸನದ ಚನ್ನರಾಯಪಟ್ಟಣದ ನಿವಾಸಿ ಚೈತ್ರಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್‌ ಗೋವಿಂದ ರಾಜ್‌ ಅವರ ಪೀಠ, ನವೀನ್‌ಗೆ ಅ.10ರಿಂದ ಅನ್ವಯವಾಗುವಂತೆ ತುರ್ತು ಪೆರೋಲ್‌ ಮೇಲೆ 15 ದಿನಗಳ ಕಾಲ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಮೈಸೂರು ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶಿಸಿದೆ.

ಅಲ್ಲದೆ, ಪೆರೋಲ್‌ ಅವಧಿಯಲ್ಲಿ ವಾರಕ್ಕೊಮ್ಮೆ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಬೇಕು. ಪೆರೋಲ್‌ ಅವಧಿಯಲ್ಲಿ ಯಾವುದೇ ಕ್ರಿಮಿನಲ್‌ ಅಪರಾಧದಲ್ಲಿ ಭಾಗಿಯಾಗಬಾರದು ಎಂದು ನವೀನ್‌ಗೆ ಹೈಕೋರ್ಟ್‌ ಷರತ್ತನ್ನೂ ವಿಧಿಸಿದೆ.

ಪತ್ರ ಬರೆದರೂ ಪರಿಗಣಿಸಿಲ್ಲ:

ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಡಿ.ಮೋಹನ್‌ ಕುಮಾರ್‌ ವಾದ ಮಂಡಿಸಿ, ಸೆ.27ರಂದು ಚೈತ್ರಾ ತಂದೆ ಅಂದರೆ ನವೀನ್‌ ಮಾವ ಸಾವಿಗೀಡಾಗಿದ್ದರು. ಮಾವನನ್ನು ಕೊನೆಯ ಬಾರಿ ನೋಡಲು, ಅಂತಿಮ ವಿಧಿ-ವಿಧಾನ ನೆರವೇರಿಸಲು ತುರ್ತು ಪೆರೋಲ್‌ ಮೇಲೆ ನವೀನ್‌ನನ್ನು 15 ದಿನಗಳ ಕಾಲ ಬಿಡುಗಡೆ ಮಾಡಬೇಕು ಎಂದು ಕೋರಿ ಜೈಲು ಅಧೀಕ್ಷಕರಿಗೆ ಚೈತ್ರಾ ಮನವಿ ಪತ್ರ ಸಲ್ಲಿಸಿದ್ದರು. ಆದರೆ ಅದನ್ನು ಪರಿಗಣಿಸಿಲ್ಲ ಮತ್ತು ನವೀನ್‌ನನ್ನು ಜೈಲಿನಿಂದ ಬಿಡುಗಡೆ ಮಾಡಿಲ್ಲ. ಕರ್ನಾಟಕ ಕಾರಾಗೃಹಗಳ ಅಧಿನಿಯಮಗಳು-1974ರ ನಿಯಮ 191(1) ಅನ್ವಯ ಕೈದಿಯ ಕುಟುಂಬದ ಯಾವುದೇ ಸದಸ್ಯರು, ಹತ್ತಿರದ ಸಂಬಂಧಿ ಅನಾರೋಗ್ಯದಿಂದ ನರಳುತ್ತಿದ್ದರೆ ಅಥವಾ ಸಾವು ಸಂಭವಿಸಿದರೆ. ಸಜಾ ಕೈದಿಯನ್ನು ತುರ್ತು ಪೆರೋಲ್‌ ಮೇಲೆ ಬಿಡುಗಡೆ ಮಾಡಬೇಕಾಗುತ್ತದೆ ಎಂದು ವಿವರಿಸಿದರು.

ಅಲ್ಲದೆ, ಮಾವ ಮೃತರಾದರೆ ಅಳಿಯನಾದ ಸಜಾಬಂಧಿಗೆ ಪೆರೋಲ್‌ ನೀಡುವ ಅವಕಾಶ ಜೈಲಿನ ಕೈಪಿಡಿಯಲ್ಲಿಲ್ಲ ಎಂಬುದಾಗಿ ಜೈಲಾಧಿಕಾರಿಗಳು ಹೇಳುತ್ತಿದ್ದಾರೆ. ಚೈತ್ರಾ ಅವರು ತಂದೆಯನ್ನು ಕಳೆದುಕೊಂಡಿದ್ದಾರೆ. ಅವರ ಕುಟುಂಬ ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ಆಕೆಗೆ ಪತಿಯ ಬೆಂಬಲ, ನೆರವಿನ ಅಗತ್ಯವಿದೆ. ಚೈತ್ರಾ ಸಹ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಪತ್ನಿಯನ್ನು ಸಂತೈಸಲು, ಆರೈಕೆ ಮಾಡಲು ಮತ್ತು ಆಕೆಯ ವೈದ್ಯಕೀಯ ಖರ್ಚು-ವೆಚ್ಚ ಭರಿಸಲು ಮತ್ತು ಮಾವನ ತಿಥಿ ಸೇರಿ ಇತರೆ ಅಂತಿಮ ವಿಧಿ-ವಿಧಾನ ಪೂರೈಸಲು ನವೀನ್‌ ಮನೆಯಲ್ಲಿರುವುದು ಅನಿವಾರ್ಯ. ಹೀಗಾಗಿ, ಆತನನ್ನು 30 ದಿನಗಳ ಕಾಲ ಪೆರೋಲ್‌ ಮೇಲೆ ಬಿಡುಗಡೆ ಮಾಡುವಂತೆ ಜೈಲು ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ವಕೀಲರು, ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಕೈಪಿಡಿ-2021ರ ನಿಯಮ ಪ್ರಕಾರ ಕೈದಿಯ ಅಜ್ಜ-ಅಜ್ಜಿ, ತಂದೆ-ತಾಯಿ, ಪತ್ನಿ, ಸ್ವಂತ ಮಗ-ಮಗಳು, ಮೊಮ್ಮಗ-ಮೊಮ್ಮಗಳು, ಸಹೋದರ-ಸಹೋದರಿ ಸಾವಿಗೀಡಾದರೆ, ಗಂಭೀರ ಆರೋಗ್ಯ ಸಮಸ್ಯೆಗಳಿಂದ ನರಳುತ್ತಿದ್ದರೆ ಪೆರೋಲ್‌ ಮೇಲೆ ಬಿಡುಗಡೆ ಮಾಡಬಹುದು. ಪ್ರಕರಣದಲ್ಲಿ ಪತ್ನಿಯ ತಂದೆ ಸಾವಿಗೀಡಾಗಿದ್ದು, ಪೆರೋಲ್‌ ಕೋರಲಾಗುತ್ತಿದೆ ಎಂದು ಪೀಠಕ್ಕೆ ವಿವರಿಸಿದರು.

ಈ ವಾದ ಒಪ್ಪದ ನ್ಯಾಯಪೀಠ, ನವೀನ್‌ ಅವರ ಮಾವ ಅಂದರೆ ಹತ್ತಿರದ ಸಂಬಂಧಿ ಸಾವಿಗೀಡಾಗಿದ್ದಾರೆ. ಅದನ್ನು ಪರಿಗಣಿಸಿ ಪೆರೋಲ್‌ ಮೇಲೆ ತುರ್ತಾಗಿ ನವೀನ್‌ ನನ್ನು ಜೈಲಿನಿಂದ ಬಿಡುಗಡೆ ಮಾಡಬೇಕಿದೆ ಎಂದು ಜೈಲಧಿಕಾರಿಗಳಿಗೆ ನಿರ್ದೇಶಿಸಿದೆ.

PREV
Read more Articles on

Recommended Stories

ಸರ್ಕಾರಿ ಸ್ಥಳದಲ್ಲಿ ಆರೆಸ್ಸೆಸ್‌ ನಿರ್ಬಂಧಕ್ಕೆ ಪ್ರಿಯಾಂಕ್‌ ಪತ್ರ
ಋತು ರಜೆ ಕೊಡದಿದ್ದರೆ ಕ್ರಮ : ಲಾಡ್‌