ನ್ಯಾಯ ಬೆಲೆ ಅಂಗಡಿ ತೆರೆಯಲು ಸ್ಥಳ ಗುರುತಿಸಲು ಸೂಕ್ತ ಮಾರ್ಗಸೂಚಿ ರೂಪಿಸಲು ಕೋರ್ಟ್ ಸೂಚನೆ

Published : Apr 07, 2025, 11:32 AM IST
annabhagya

ಸಾರಾಂಶ

ಮಹಾನಗರ (ಮೆಟ್ರೋಪಾಲಿಟನ್‌), ನಗರ ಪಾಲಿಕೆ ಮತ್ತು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಪಂ ಸೇರಿ ಇತರೆ ಪ್ರದೇಶಗಳಲ್ಲಿ ನ್ಯಾಯ ಬೆಲೆ ಅಂಗಡಿ ತೆರೆಯಲು ಯಾವುದು ‘ಸೂಕ್ತ ವ್ಯಾಪಾರ ಸ್ಥಳ’ ಎಂಬ ಬಗ್ಗೆ ಮಾರ್ಗಸೂಚಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

  ಬೆಂಗಳೂರು : ಮಹಾನಗರ (ಮೆಟ್ರೋಪಾಲಿಟನ್‌), ನಗರ ಪಾಲಿಕೆ ಮತ್ತು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಪಂ ಸೇರಿ ಇತರೆ ಪ್ರದೇಶಗಳಲ್ಲಿ ನ್ಯಾಯ ಬೆಲೆ ಅಂಗಡಿ ತೆರೆಯಲು ಯಾವುದು ‘ಸೂಕ್ತ ವ್ಯಾಪಾರ ಸ್ಥಳ’ ಎಂಬ ಬಗ್ಗೆ ಮಾರ್ಗಸೂಚಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

23 ವರ್ಷಗಳ ಹಿಂದೆ ತಮಗೆ ಮಂಜೂರು ಮಾಡಿದ್ದ ನ್ಯಾಯ ಬೆಲೆ ಅಂಗಡಿ ಪರವಾನಗಿ ರದ್ದುಪಡಿಸಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಮೈಸೂರು ನಿವಾಸಿ ಮಂಜುನಾಥ್‌ ಎಂಬವರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದ ರಾಜ್‌ ಅವರ ಪೀಠ ಈ ಆದೇಶ ಮಾಡಿದೆ.

ಕರ್ನಾಟಕ ಅಗತ್ಯ ವಸ್ತುಗಳ (ಸಾರ್ವಜನಿಕ ವಿತರಣಾ ವ್ಯವಸ್ಥೆ) ನಿಯಂತ್ರಣ ಆದೇಶ-1992 ಅಡಿ ನ್ಯಾಯ ಬೆಲೆ ಅಂಗಡಿ ಪರವಾನಗಿ ನೀಡಲಾಗುತ್ತದೆ. ಈ ನಿಯಂತ್ರಣ ಆದೇಶದ ನಿಯಮ 5(ಬಿ) ಅನ್ವಯ ನ್ಯಾಯ ಬೆಲೆ ಅಂಗಡಿ ಪರವಾನಗಿ ಕೋರಿ ಅರ್ಜಿ ಸಲ್ಲಿಸಿದವರು ವ್ಯಾಪಾರ ನಡೆಸಲು ಸೂಕ್ತ ಸ್ಥಳ ಹೊಂದಿರಬೇಕು. ಸಗಟು ವ್ಯಾಪಾರಿಯಾದರೆ ಆಹಾರ ಧಾನ್ಯ ಸೇರಿ ಇತರೆ ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಲು ಸೂಕ್ತ ಸ್ಥಳಾವಕಾಶದೊಂದಿಗೆ ಗೋದಾಮು ಹೊಂದಿರಬೇಕು. ಆಗ ಮಾತ್ರ ಪರವಾನಗಿ ಪಡೆಯಲು ಅರ್ಹತೆ ಹೊಂದಿರುತ್ತಾರೆ ಎಂದು ಪೀಠ ಹೇಳಿದೆ.

ನಿಯಂತ್ರಣ ಆದೇಶದ ಉಪ ನಿಯಮ 5 (1)(ಬಿ) ಅನ್ವಯ ಪರವಾನಗಿ ಮಂಜೂರು ಮಾಡಬೇಕಾದರೆ ಸೂಕ್ತ ವ್ಯಾಪಾರ ಸ್ಥಳ ಇರಬೇಕು ಎಂದು ಹೇಳುತ್ತದೆ. ಆದರೆ, ಆ ಬಗ್ಗೆ ನಿರ್ದಿಷ್ಟ ವ್ಯಾಖ್ಯಾನವೂ ಇಲ್ಲ. ಇದರಿಂದ ಪರವಾನಗಿ ಮಂಜೂರಾತಿ ಕೋರಿದ ಅರ್ಜಿಗಳ ಪರಿಗಣನೆಯಲ್ಲಿ ಇದು ಸಂಬಂಧಪಟ್ಟ ಅಧಿಕಾರಿಗಳು ಪಾರದರ್ಶಕತೆ ಕಾಯ್ದುಕೊಳ್ಳದಿರಲು ಮತ್ತು ಅನಗತ್ಯ ವ್ಯಾಜ್ಯಗಳು ಉದ್ಭವಿಸಲು ಕಾರಣವಾಗಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಸೂಕ್ತ ವ್ಯಾಪಾರ ಸ್ಥಳ ಯಾವುದು? ಅದಕ್ಕೆ ಯಾವ ಮಾನದಂಡ ಪೂರೈಸಬೇಕು ಎಂಬ ಬಗ್ಗೆ ಅರ್ಜಿದಾರರಿಗೆ ಮಾಹಿತಿ ಇಲ್ಲ. ಆದ್ದರಿಂದ ಪರವಾನಗಿ ಮಂಜೂರು ಮಾಡಲು ಯಾವುದು ಸೂಕ್ತ ವ್ಯಾಪಾರ ಸ್ಥಳ ಎಂಬ ಬಗ್ಗೆ ಸೂಕ್ತ ಮಾರ್ಗಸೂಚಿ ರಚನೆ ಮಾಡಬೇಕಿದೆ. ಅದರಂತೆ ಮಹಾನಗರ, ನಗರ ಪಾಲಿಕೆ ಮತ್ತು ನಗರಸಭೆ, ಪುರಸಭೆ, ಪಟ್ಟಣ ಮತ್ತು ಗ್ರಾಪಂ ಸೇರಿ ಇತರೆ ಪ್ರದೇಶಗಳಲ್ಲಿ ನ್ಯಾಯ ಬೆಲೆ ಅಂಗಡಿ ತೆರೆಯಲು ‘ಸೂಕ್ತ ವ್ಯಾಪಾರ ಸ್ಥಳ’ ಯಾವುದು ಎಂಬ ಬಗ್ಗೆ 60 ದಿನಗಳಲ್ಲಿ ಮಾರ್ಗಸೂಚಿ ರಚಿಸಬೇಕು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ನಿರ್ದೇಶನ ನೀಡಿದೆ.

ಆಹಾರ ಧಾನ್ಯಗಳ ಸಂಗ್ರಹ ಸ್ಥಳ ಅನಿವಾರ್ಯ

ಒಂದು ನ್ಯಾಯ ಬೆಲೆ ಅಂಗಡಿಗೆ ಹಲವು ಪಡಿತರ ಕಾರ್ಡ್‌ಗಳನ್ನು ಲಗತ್ತಿಸಿದ ಆಧಾರದ ಮೇಲೆ ಎಷ್ಟು ಆಹಾರ ಧಾನ್ಯಗಳನ್ನು ಆ ಅಂಗಡಿಗೆ ಸರಬರಾಜು ಮಾಡಬೇಕು ಎಂಬುದು ವರದಿಯಾಗುತ್ತದೆ. ಪರವಾನಗಿ ಪಡೆದವರು ಆಹಾರ ಮತ್ತು ಇತರೆ ವಸ್ತುಗಳನ್ನು ದಾಸ್ತಾನು ಮಾಡಲು ಸಂಗ್ರಹ ಸ್ಥಳ ಅಗತ್ಯವಾಗಿರುತ್ತದೆ. ಗಾಳಿ-ಬೆಳಕು (ವೆಂಟಿಲೇಷನ್‌) ವ್ಯವಸ್ಥೆ ಸೇರಿ ಇತರೆ ಎಲ್ಲ ಸುರಕ್ಷತಾ ಕ್ರಮಗಳನ್ನು ಏರ್ಪಾಟು ಮಾಡಬೇಕಾಗುತ್ತದೆ. ಇದರ ಆಧಾರದ ಮೇಲೆ ಪರವಾನಗಿ ಮಂಜೂರಾತಿ ಅರ್ಹತೆ ನಿರ್ಧರಿಸಬೇಕಾಗುತ್ತದೆ ಎಂದು ಪೀಠ ಹೇಳಿದೆ.

ಹೊಸದಾಗಿ ವಿಚಾರಣೆ: ಅಂತಿಮವಾಗಿ ಮಂಜುನಾಥ್‌ ಅವರಿಗೆ 2002ರಲ್ಲಿ ಮಂಜೂರು ಮಾಡಲಾಗಿದ್ದ ನ್ಯಾಯ ಬೆಲೆ ಅಂಗಡಿ ಪರವಾನಗಿಯನ್ನು ರದ್ದುಪಡಿಸಿರುವ ಸರ್ಕಾರದ ಕ್ರಮ ವಜಾಗೊಳಿಸಿರುವ ಹೈಕೋರ್ಟ್‌, ನಿಯಂತ್ರಣ ಆದೇಶ ಸೆಕ್ಷನ್‌ 5(1) ಆಧಾರದಲ್ಲಿ ಪ್ರಕರಣವನ್ನು ಹೊಸದಾಗಿ ಪರಿಗಣಿಸಿ 30 ದಿನಗಳಲ್ಲಿ ವಿಲೇವಾರಿ ಮಾಡಬೇಕು ಎಂದು ಆದೇಶಿಸಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ