ಅಪಘಾತದಿಂದ ಕೆಲ್ಸ ಕಳ್ಕೊಂಡ ಮಹಿಳೆ ನೆರವಿಗೆ ಕೋರ್ಟ್‌

Published : Feb 16, 2026, 11:45 AM IST
Karnataka High court

ಸಾರಾಂಶ

ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದ ಕಾರಣ ಎರಡೂ ಕೈಗಳು ಊನಗೊಂಡ ಹಿನ್ನೆಲೆಯಲ್ಲಿ ಐಟಿ ಕಂಪನಿ ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿ ಆದಾಯವಿಲ್ಲದೆ ದಿನ ದೂಡುತ್ತಿದ್ದ ಮಹಿಳೆಗೆ ಹೈಕೋರ್ಟ್‌ ಇದೀಗ ಆಸರೆಯಾಗಿದೆ.

 ವೆಂಕಟೇಶ್‌ ಕಲಿಪಿ

 ಬೆಂಗಳೂರು :  ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದ ಕಾರಣ ಎರಡೂ ಕೈಗಳು ಊನಗೊಂಡ ಹಿನ್ನೆಲೆಯಲ್ಲಿ ಐಟಿ ಕಂಪನಿ ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿ ಆದಾಯವಿಲ್ಲದೆ ದಿನ ದೂಡುತ್ತಿದ್ದ ಮಹಿಳೆಗೆ ಹೈಕೋರ್ಟ್‌ ಇದೀಗ ಆಸರೆಯಾಗಿದೆ.

ಪ್ರಕರಣದಲ್ಲಿ ಮಹಿಳೆಗೆ ಕೇವಲ 2.80 ಲಕ್ಷ ರು. ಪರಿಹಾರ ನಿಗದಿಪಡಿಸಿ ಅಪಘಾತ ಪರಿಹಾರ ಕ್ಲೇಮು ನ್ಯಾಯಾಧಿಕರಣ ಹೊರಡಿಸಿದ್ದ ಆದೇಶವನ್ನು ಮಾರ್ಪಡಿಸಿರುವ ಹೈಕೋರ್ಟ್‌, ಪರಿಹಾರ ಮೊತ್ತವನ್ನು 15 ಲಕ್ಷ ರು.ಗೆ ಹೆಚ್ಚಿಸಿದೆ.

ಅಲ್ಲದೆ, ಅಪಘಾತ ಪರಿಹಾರ ಕ್ಲೇಮುಗಳಲ್ಲಿ ಸಂತ್ರಸ್ತರ ದೈಹಿಕ ಅಂಗವೈಕಲ್ಯ ಪ್ರಮಾಣ ಲೆಕ್ಕಹಾಕುವಾಗ ಕಳೆದುಕೊಂಡಿರುವ ‘ಉದ್ಯೋಗ ನಿರ್ವಹಣೆ ಸಾಮರ್ಥ್ಯ ಮತ್ತು ಭವಿಷ್ಯದಲ್ಲಿ ಗಳಿಸಬಹುದಾದ ಆದಾಯ’ವನ್ನು ಪರಿಗಣಿಸಿ ಪರಿಹಾರ ನಿರ್ಧರಿಸಬೇಕು ಎಂದು ಇದೇ ವೇಳೆ ನಿರ್ದೇಶಿಸಿದೆ.

ನಾಲ್ಕು ವಾರದಲ್ಲಿ 12.22 ಲಕ್ಷ ರು. ಮಹಿಳೆಗೆ ಪಾವತಿಸುವಂತೆ ಆದೇಶ

ಅಂತಿಮವಾಗಿ ಪ್ರಕರಣದಲ್ಲಿ ಹೆಚ್ಚುವರಿಯಾಗಿ ನಿಗದಿಪಡಿಸಿರುವ 12.22 ಲಕ್ಷ ರು. ಅನ್ನು ವಾರ್ಷಿಕ ಶೇ.6ರಷ್ಟು ಬಡ್ಡಿದರಲ್ಲಿ ನಾಲ್ಕು ವಾರದಲ್ಲಿ ಮಹಿಳೆಗೆ ಪಾವತಿಸುವಂತೆ ಕೆಎಸ್‌ಆರ್‌ಟಿಸಿಗೆ ಸೂಚಿಸಿ ಇತ್ತೀಚೆಗೆ ಆದೇಶಿಸಿದೆ.

ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ಬೆಂಗಳೂರಿನ ಕೆಂಚೇನಹಳ್ಳಿ ನಿವಾಸಿ ಪಿ.ಅನುಪಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಜೋಷಿ ಅವರ ಪೀಠ ಈ ಆದೇಶ ಮಾಡಿದೆ. ಅನುಪಮಾ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಆಕೆಯ ಎರಡೂ ಕೈಗಳ ಮೂಳೆಗಳು ಮುರಿದಿದ್ದವು. ಚಿಕಿತ್ಸೆ ನಂತರವೂ ಬಲಗೈಯಲ್ಲಿ ಚಲನಶೀಲತೆ ಅಸಹಜವಾಗಿದೆ. ಕೈಗಳ ಮಣಿಕಟ್ಟು ಭಾಗಿಸಲು ಸಾಧ್ಯವಿಲ್ಲ. ನರಗಳಲ್ಲಿ ಸಂವೇದನೆಯೇ ಇಲ್ಲವಾಗಿದೆ ಎಂದು ವೈದ್ಯಕೀಯ ದಾಖಲೆಗಳಿಂದ ದೃಢಪಡುತ್ತವೆ. ಆದರೆ, ಬಲಗೈ ಸಂಪೂರ್ಣವಾಗಿ ನಿಷ್ಕ್ರಿಯವಾಗಿಲ್ಲ ಎಂದು ತಿಳಿದು ಬಂದರೂ ಕೆಲಸ ಮಾಡಲು ಭಾಗಶಃ ಕಷ್ಟವಾಗಿದೆ. ಹಾಗಾಗಿ, ಕ್ರಿಯಾತ್ಮಕ ಅಂಗವೈಕಲ್ಯವನ್ನು (ಕೈಗಳಿಂದ ಕೆಲಸ ಮಾಡುವ ಸಾಮರ್ಥ್ಯದ ಪ್ರಮಾಣ) ನಿರ್ಧರಿಸಲು ಕಷ್ಟವಾದಾಗ, ದೈಹಿಕ ಅಂಗವೈಕಲ್ಯದ ಮೂರನೇ ಒಂದು ಭಾಗವನ್ನು ಗಣನೆಗೆ ತೆಗೆದುಕೊಳ್ಳುವುದು ಸೂಕ್ತ. ಅದರಂತೆ ಕ್ರಿಯಾತ್ಮಕ ಅಂಗವೈಕಲ್ಯವನ್ನು ಶೇ.15ರಷ್ಟು ಎಂದು ಪರಿಗಣಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಅಪಘಾತ ನಡೆದಾಗ ಅನುಪಮಾಗೆ 34 ವರ್ಷವಾಗಿತ್ತು. ಆಕೆ ಐಟಿ ಆ್ಯನಲಿಸ್ಟ್‌ ಆಗಿ ಉದ್ಯೋಗ ಮಾಡುತ್ತಾ, ಮಾಸಿಕ 40 ಸಾವಿರ ರು.ಪಡೆಯುತ್ತಿದ್ದರು ಎಂಬುದು ಸಂಬಳ ಚೀಟಿಯಿಂದ ಸ್ಪಷ್ಟಪಡುತ್ತದೆ. ಈ ಎಲ್ಲವನ್ನೂ ಪರಿಗಣಿಸಿದರೆ ಅನುಪಮಾ 15,02,000 ರು. ಪರಿಹಾರ ಪಡೆಯಲು ಅರ್ಹರಾಗಿದ್ದಾರೆ. ಹಾಗಾಗಿ, ಈಗಾಗಲೇ ನ್ಯಾಯಾಯಧಿಕರಣ 2.80 ಲಕ್ಷ ಪರಿಹಾರ ನಿಗದಿಪಡಿಸಿರುವುದನ್ನು ಬಿಟ್ಟು, ಉಳಿದ ಹೆಚ್ಚುವರಿ 12,22,000 ರು. ಅನ್ನು ವಾರ್ಷಿಕ ಶೇ.6ರಷ್ಟು ಬಡ್ಡಿ ದರಲ್ಲಿ ಆಕೆಗೆ ಪಾವತಿಸಬೇಕು ಎಂದು ಕೆಎಸ್‌ಆರ್‌ಟಿಸಿಗೆ ನ್ಯಾಯಪೀಠ ನಿರ್ದೇಶಿಸಿದೆ.

ಪ್ರಕರಣದ ವಿವರ:

ಅನುಪಮಾ 2013ರ ಫೆ.27ರಂದು ಬೈಕಿನಲ್ಲಿ ತೆರಳುತ್ತಿದ್ದಾಗ ಕೆಎಸ್‌ಆರ್‌ಟಿಸಿ ಬಸ್‌ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಅಪಘಾತದಿಂದ ಅನುಪಮಾ ಅವರ ಎರಡೂ ಕೈಗಳ ಮೂಳೆ ಮುರಿದ ಪರಿಣಾಮ ಉದ್ಯೋಗ ನಿರ್ವಹಿಸಲಾಗದಂತಹ ಪರಿಸ್ಥಿತಿಗೆ ತಲುಪಿದ್ದರು. ಇದರಿಂದ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು. ನಂತರ ಪರಿಹಾರ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಬೆಂಗಳೂರಿನ ಮೋಟಾರು ವಾಹನಗಳ ಅಪಘಾತ ಪರಿಹಾರ ಕ್ಲೇಮು ನ್ಯಾಯಾಧಿಕರಣ, 2.80 ಲಕ್ಷ ರು. ಪರಿಹಾರ ಘೋಷಿಸಿ 2016ರ ಜ.13ರಂದು ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಅನುಪಮಾ, ‘ನಾನು ಶೇ.23ರಷ್ಟು ಅಂಗವೈಕಲ್ಯಕ್ಕೆ ಒಳಗಾಗಿದ್ದೇನೆ’ ಎಂದು ನ್ಯಾಯಾಧಿಕರಣವೇ ನಿರ್ಧರಿಸಿದೆ. ಆದರೆ, ಅಂಗವೈಕಲ್ಯದಿಂದ ಭವಿಷ್ಯದ ಆದಾಯ ನಷ್ಟದ ಪರಿಹಾರ ನೀಡಿಲ್ಲ. ಹಾಗೆಯೇ, ಜೀವನದಲ್ಲಿ ಸೌಲಭ್ಯಗಳ ನಷ್ಟವೆಂದು ಕೇವಲ 10 ಸಾವಿರ ರು. ನಿಗದಿಪಡಿಸಿದೆ. ಇದರಿಂದ ಪರಿಹಾರ ಮೊತ್ತ ಹೆಚ್ಚಿಸಬೇಕು ಎಂದು ಕೋರಿದ್ದರು.

ಕೆಎಸ್‌ಆರ್‌ಟಿಸಿ ಪರ ವಕೀಲರು, ಅಪಘಾತ ಸಂಭವಿಸುವಲ್ಲಿ ಬಸ್‌ ಚಾಲಕನ ಅಜಾಗರೂಕತೆಯಿಲ್ಲ. ಮೇಲಾಗಿ ಅಪಘಾತದಲ್ಲಿ ಬಸ್‌ ಭಾಗಿಯಾಗಿಲ್ಲ. ಇನ್ನು ಭವಿಷ್ಯದ ಆದಾಯ ನಷ್ಟವನ್ನು ಮೇಲ್ಮನವಿದಾರೆ ಕ್ಲೇಮು ಮಾಡಲಾಗದು. ಅಪಘಾತದಿಂದ ಉಂಟಾದ ಗಾಯಗಳಿಂದಲೇ ಅನುಪಮಾ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು ಎಂಬುದನ್ನು ದೃಢಪಡಿಸುವ ದಾಖಲೆಗಳಿಲ್ಲ ಎಂದು ಆಕ್ಷೇಪಿಸಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪರಿಶಿಷ್ಟರಿಗೆ ಬಜೆಟಲ್ಲಿ ಪ್ರತ್ಯೇಕ ಅನುದಾನಕ್ಕೆ ಸಿಎಂಗೆ ಬೇಡಿಕೆ?
ಲಕ್ಷಾಂತರ ಭಕ್ತಸಾಗರದ ನಡುವೆ ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಮಹಾಶಿವರಾತ್ರಿ