ದೇವನಹಳ್ಳಿ: ಬಿಜೆಪಿ ಎಸ್ಸಿ ಮೋರ್ಚಾಗೆ ಆಯ್ಕೆಯಾಗಿರುವ ಪದಾಧಿಕಾರಿಗಳು ತಾಲೂಕಾದ್ಯಂತ ಸಂಚರಿಸಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಶ್ರಮಿಸಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಎಲ್.ಎನ್.ಅಂಬರೀಶ್‌ಗೌಡ ತಿಳಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಆದೇಶಪತ್ರ ವಿತರಿಸಿ ಮಾತನಾಡಿದ ಅವರು, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕದಿರಪ್ಪನವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಸಜ್ಜಾಗಬೇಕು. ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ದೇವನಹಳ್ಳಿ 2ನೇ ಸ್ಥಾನದಲ್ಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ೩೫ ಸಾವಿರಕ್ಕೂ ಹೆಚ್ಚು ಮತ ಪಡೆದು ತಾಲೂಕಿನಲ್ಲಿ ಬಿಜೆಪಿ ಪಕ್ಷ ಗಟ್ಟಿಗೊಳಿಸುತ್ತಿದ್ದೇವೆ. ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಿದರೆ ಪಕ್ಷ ಅವರನ್ನು ಗುರುತಿಸಿ ಉತ್ತಮ ಸ್ಥಾನಮಾನ ನೀಡಲಿದೆ. ರಾಜ್ಯದಲ್ಲಿ ಎಸ್ಐಆರ್ ಪಕ್ರಿಯೆ ನಡೆಯುತ್ತಿದ್ದು ನಮ್ಮ ಬಿಎಲ್ಎಗಳು ೧೫ ದಿನ ಸಕ್ರಿಯವಾಗಿ ಕೆಲಸ ಮಾಡಿ ಅರ್ಹ ಮತದಾರರನ್ನು ಗುರುತಿಸಬೇಕು. ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಅನೇಕ ಯುವಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿಯಿಂದ ಬಿಜೆಪಿ ಶಾಸಕರನ್ನು ಆರಿಸಿ ಕಳುಹಿಸಲಿದ್ದೇವೆ ಎಂದರು.

ಬಿಜೆಪಿ ಎಸ್ಸಿ ಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬುಳ್ಳಳ್ಳಿ ರಾಜಪ್ಪ ಮಾತನಾಡಿ, ನರೇಂದ್ರ ಮೋದಿಯವರಿಗೆ ಪರಿಶಿಷ್ಠ ಜಾತಿಯವರ ಮೇಲೆ ಅಪಾರ ಗೌರವವಿದೆ. ಅವರನ್ನು ಗುರುತಿಸಿ ಉತ್ತಮ ಸ್ಥಾನಮಾನ ನೀಡುತ್ತಿದ್ದಾರೆ. ಅಂಬರೀಶ್‌ಗೌಡರು ತಾಲೂಕು ಅಧ್ಯಕ್ಷರಾದ ಮೇಲೆ ತಾಲೂಕಿನಲ್ಲಿ ಪಕ್ಷ ಬಲಿಷ್ಠಗೊಳ್ಳುತ್ತಿದೆ. ೪೦ ಸಾವಿರಕ್ಕು ಹೆಚ್ಚು ಸದಸ್ಯತ್ವ ಮಾಡಿಸಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ ಎಂದರು.

ಈ ವೇಳೆ ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಕದಿರಪ್ಪ, ಎಸ್ಸಿ ಮೋರ್ಚಾ ಜಿಲ್ಲಾದ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗವೇಣಿ, ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ವಿಜಯ, ಓಬಿಸಿ ಮೋರ್ಚಾ ತಾಲೂಕು ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

೧೪:ದೇವನಹಳ್ಳಿ ಚಿತ್ರಸುದ್ದಿ:


ದೇವನಹಳ್ಳಿ ಬಿಜೆಪಿ ಕಚೇರಿಯಲ್ಲಿ ಎಸ್ಸಿ ಮೋರ್ಚಾ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಅಂಬರೀಶ್‌ಗೌಡ ಆದೇಶ ಪತ್ರಗಳನ್ನು ವಿತರಿಸಿ ಅಭಿನಂದಿಸಿದರು.