ಕನ್ನಡಪ್ರಭ ವಾರ್ತೆ ಮಂಡ್ಯ

ಕೆಆರ್‌ಎಸ್‌ನಿಂದ ಜಿಲ್ಲೆಯಲ್ಲಿ ಒಣಗುತ್ತಿರುವ ಬೆಳೆ ರಕ್ಷಿಸಲು ಎರಡು ದಿನಗಳೊಳಗೆ ನೀರು ಹರಿಸದಿದ್ದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದರ ಜೊತೆಗೆ ದಯಾಮರಣಕ್ಕೆ ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನವೀನ್‌ಕುಮಾರ್ ಎಚ್ಚರಿಕೆ ನೀಡಿದರು.

ತಾಲೂಕಿನ ಚಂದಗಾಲು ಗ್ರಾಮದಲ್ಲಿ ರೈತರ ಜಮೀನಿನಲ್ಲಿ ಒಣಗಿನಿಂತರುವ ಕಬ್ಬು, ತೆಂಗು, ಅಡಿಕೆ ಬೆಳೆಗಳನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಟಿ ಮತ್ತೊಂದು ಕಡೆ ಅನಾವೃಷ್ಟಿ ಇದೆ. ಹಳೇ ಮೈಸೂರು ಭಾಗದಲ್ಲಿ ತೀವ್ರವಾದ ಬರ ಪರಿಸ್ಥಿತಿ ಎದುರಾಗಿದ್ದು, ಬೆಳೆ ಒಣಗಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಆದರೂ, ಸರ್ಕಾರ ನೀರು ಹರಿಸದೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಕಾಲ ಕಾಲಕ್ಕೆ ತಕ್ಕಂತೆ ನೀರು ಹರಿಸುತ್ತಾರೆ. ಆದರೆ, ಇಲ್ಲಿನ ರೈತರ ಜಮೀನಿಗೆ ನೀರು ಹರಿಸಲು ಉದಾಸೀನ ತೋರುತ್ತಾರೆ. ಅವರಿಗೆ ರೈತರ ಹಿತ ಬೇಕಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಎಚ್ಚರಿಸಲು ನಾವು ಬೀದಿಗಿಳಿದು ಹೋರಾಟ ನಡೆಸಲು ನಿರ್ಧರಿಸಿದ್ದೇವೆ. ನ್ಯಾಯಾಲಯಕ್ಕೂ ಸಹ ನಮಗೆ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ಕೊಡಿ ಎಂದು ಅರ್ಜಿ ಹಾಕಲು ಚಿಂತನೆ ನಡೆಸಿದ್ದೇವೆ ಎಂದರು.

ಕೆಆರ್‌ಎಸ್‌ನಲ್ಲಿರುವ ನೀರನ್ನು ಒಂದು ಕಟ್ಟು ಹರಿಸಿದರೆ ಕೋಟ್ಯಂತರ ರು. ಮೌಲ್ಯದ ಬೆಳೆ ಉಳಿಯುತ್ತಿತ್ತು. ಇಂದಿನ ಪರಿಸ್ಥಿತಿ ಬಗ್ಗೆ ರೈತರ ಸಭೆ ಕರೆದು ಚರ್ಚೆ ಮಾಡಬೇಕಿತ್ತು. ಸರ್ವ ಪಕ್ಷ ಸಭೆ ಇಲ್ಲವೇ ವಿಶೇಷ ಅಧಿವೇಶನ ಕರೆದು ಚರ್ಚಿಸಬೇಕಿತ್ತು. ಇದಾವುದನ್ನೂ ಸರ್ಕಾರ ಮಾಡಿಲ್ಲ. ಒಂದು ಎಕರೆ ಕಬ್ಬು ಬೆಳೆಯಲು 1 ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡುತ್ತಾರೆ. ಒಂದು ಎಕರೆಯಲ್ಲಿ 21 ಟನ್ ಕಬ್ಬು ಬರುತ್ತಿರುವ ಕಡೆ ಕೇವಲ 10-12 ಟನ್ ಬರುತ್ತಿದೆ. ತೆಂಗು, ಅಡಿಕೆ ಎಲ್ಲವೂ ಒಣಗುತ್ತಿದೆ. ಕನಿಷ್ಠ 2 ಲಕ್ಷ ಎಕರೆ ಹಾಗೂ ಒಂದು ತೆಂಗಿನ ಮರಕ್ಕೆ ಒಂದು ಲಕ್ಷ ಪರಿಹಾರ ಘೋಷಿಸಬೇಕು. ಎರಡು ದಿನಗಳಲ್ಲಿ ಘೋಷಣೆ ಮಾಡದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜೋಗೀಗೌಡ, ಜವರೇಗೌಡ, ಮಹೇಂದ್ರ, ಹೆಮ್ಮಿಗೆ ಕೃಷ್ಣ, ಬೇಲೂರು ಬೊಮ್ಮೇಶ್, ಕನ್ನಲಿ ಸುರೇಶ್, ಭರತ್, ವೈರಮುಡಿ ಇತರರಿದ್ದರು.