ಪೊಲೀಸರ ವಿರುದ್ಧ ಸಿ.ಟಿ.ರವಿ ಗವರ್ನರ್‌ಗೆ ದೂರು ಹೆಬ್ಬಾಳ್ಕರ್‌ ಕೇಸಲ್ಲಿ ಪೊಲೀಸರಿಂದ ಅಮಾನವೀಯ ನಡೆ

Published : Dec 31, 2024, 11:30 AM IST
ct ravi

ಸಾರಾಂಶ

ಅಧಿವೇಶನ ಬಳಿಕ ತಮ್ಮನ್ನು ಇಡೀ ರಾತ್ರಿ ಪೊಲೀಸರು ಅಮಾನವೀಯವಾಗಿ ನಡೆಸಿಕೊಂಡಿದ್ದು, ತಮ್ಮ ಹಕ್ಕುಚ್ಯುತಿಯಾಗಿದೆ. ಹೀಗಾಗಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರು : ಅಧಿವೇಶನ ಬಳಿಕ ತಮ್ಮನ್ನು ಇಡೀ ರಾತ್ರಿ ಪೊಲೀಸರು ಅಮಾನವೀಯವಾಗಿ ನಡೆಸಿಕೊಂಡಿದ್ದು, ತಮ್ಮ ಹಕ್ಕುಚ್ಯುತಿಯಾಗಿದೆ. ಹೀಗಾಗಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ಸೋಮವಾರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಆಪೇಕ್ಷಾರ್ಹ ಹೇಳಿಕೆ ಸಂಬಂಧ ನಡೆದ ಬೆಳವಣಿಗೆ ಕುರಿತು ವಿಧಾನಪರಿಷತ್‌ ಕಾರ್ಯದರ್ಶಿ ಮಹಾಲಕ್ಷ್ಮೀ ಅವರನ್ನು ವೈಯಕ್ತಿಕವಾಗಿ ಮತ್ತು ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರನ್ನು ಪಕ್ಷದ ಮುಖಂಡರ ನಿಯೋಗದೊಂದಿಗೆ ಭೇಟಿ ಮಾಡಿ ಘಟನೆ ಕುರಿತು ವಿವರಣೆ ನೀಡಿದರು.

ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿ.ಟಿ.ರವಿ, ಡಿ.19ರಂದು ಇಡೀ ರಾತ್ರಿ ನಡೆದ ಪೊಲೀಸರ ಅಮಾನವೀಯ ವರ್ತನೆ ತೋರಿದ್ದಾರೆ. ಬೆಳಗಾವಿ ನಗರ ಪೊಲೀಸ್ ಆಯುಕ್ತ ​ ಯಡಾ ಮಾರ್ಟಿನ್​, ಪೊಲೀಸ್‌ ವರಿಷ್ಠಾಧಿಕಾರಿ ಗುಳೇದ್ ಮತ್ತು ಇತರೆ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು. ತಮಗೆ ಪ್ರಾಣಾಪಾಯ ಇದ್ದು, ಸೂಕ್ತ ಭದ್ರತೆ ಕೊಡಬೇಕು ಎಂಬುದಾಗಿ ಮನವಿ ಮಾಡಿದರು ಎಂದರು.

ಘಟನೆ ಕುರಿತು ರಾಷ್ಟ್ರಪತಿ, ಕೇಂದ್ರ ಗೃಹ ಇಲಾಖೆ ಗಮನಕ್ಕೂ ತರುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ದೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧವೂ ಆರೋಪ ಮಾಡಲಾಗಿದೆ. ನನ್ನ ವಿರುದ್ಧ ದೂರು ದಾಖಲಾದ ತಕ್ಷಣ ಬಂಧಿಸಲಾಯಿತು. ಇಡೀ ರಾತ್ರಿ ಓಡಾಡಿಸಿ ನಿರ್ಜನ ಪ್ರದೇಶದಲ್ಲಿ ಎನ್‌ಕೌಂಟರ್‌ ಮಾಡಿ ಮುಗಿಸುವ ದುರುದ್ದೇಶವೂ ಸರ್ಕಾರಕ್ಕಿತ್ತು. ಆದರೆ, ಪೊಲೀಸ್ ವ್ಯಾನ್‌ಗಳನ್ನು ಮಾಧ್ಯಮಗಳ ವಾಹನಗಳು ಹಿಂಬಾಲಿಸುತ್ತಿದ್ದ ಕಾರಣ ಅದು ಸಫಲವಾಗಲಿಲ್ಲ. ಸದನದ ವ್ಯಾಪ್ತಿಯಲ್ಲಿ ನಡೆದ ಘಟನೆ ಬಗ್ಗೆ ತನಿಖೆ ನಡೆಸುವ ಅಧಿಕಾರ ಸಿಐಡಿಗೆ ಇಲ್ಲ. ಘಟನೆ ನಡೆದ ಸ್ಥಳ ಸಿಐಡಿ ವ್ಯಾಪ್ತಿಗೂ ಬರುವುದಿಲ್ಲ. ನನ್ನ ಬಂಧನ ಅಕ್ರಮ, ಕಾನೂನು ವಿರೋಧಿ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿರುವ ಬಗ್ಗೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಪರಿಷತ್‌ ಕಾರ್ಯದರ್ಶಿ ಭೇಟಿ: ಇದಕ್ಕೂ ಮುನ್ನ ಮೊದಲು ವಿಧಾನಸೌಧಕ್ಕೆ ತೆರಳಿದ ಸಿ.ಟಿ.ರವಿ ಅವರು, ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅವರನ್ನು ಭೇಟಿಯಾಗಿ ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಪ್ರಕರಣದ ಕುರಿತು ಚರ್ಚೆ ನಡೆಸಿದರು.

ಬಳಿಕ ಮಾತನಾಡಿ, ಸದನದೊಳಗೆ ಘಟನೆ ನಡೆದಿರುವುದರಿಂದ ಪ್ರಕರಣ ಸಭಾಪತಿ ವ್ಯಾಪ್ತಿಗೆ ಬರುತ್ತದೆ. ಅನುಮತಿ ಇಲ್ಲದೆ ಮೊಕದ್ದಮೆ ದಾಖಲು ಮಾಡಿದ್ದು ತಪ್ಪು. ಈಗ ಎಫ್ಎಸ್ಎಲ್‌ಗೆ ವಿಡಿಯೋ ಕಳಿಸುವುದಾಗಿ ಹೇಳಲಾಗುತ್ತಿದೆ. ನನ್ನ ಮೇಲೆ ದಾಳಿ ನಡೆಸಿದವರ ವಿರುದ್ಧ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.

ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳುವುದಕ್ಕೆ ಹೋಗುತ್ತೇನೆ. ನನ್ನ ಬಂಧನ ಮಾಡಿದ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಆಗಬೇಕು. ಈ ಬಗ್ಗೆ ಡಿಜಿಪಿ ಅವರಿಗೂ ದೂರು ಕೊಡುತ್ತೇನೆ ಎಂದು ಹೇಳಿದರು.

ನನ್ನನ್ನು ಅಪಹರಿಸಿ ನಿಗೂಢ ಸ್ಥಳಗಳಿಗೆ ಕರೆದೊಯ್ದು ನಕಲಿ ಎನ್‌ಕೌಂಟರ್‌ ಮಾಡುವ ಪ್ರಯತ್ನ ಮಾಡಲಾಗಿತ್ತು. ಸಭಾಪತಿಗೆ ಹಕ್ಕುಚ್ಯುತಿ ಬಗ್ಗೆ ದೂರು ನೀಡಿದ್ದೇನೆ. ಸಚಿವರೇ ಆರೋಪಿತ ಸ್ಥಾನದಲ್ಲಿದ್ದಾರೆ. ಬೆಳಗಾವಿ ಚಲೋ ಬಗ್ಗೆ ಪಕ್ಷ ನಿರ್ಧರಿಸಲಿದೆ. ನಾನು ಬೆಳಗಾವಿಗೆ ಹೋಗುತ್ತೇನೆ. ಅದೇನು ನಿಷೇಧಿತ ಪ್ರದೇಶ ಅಲ್ಲವಲ್ಲ?

-ಸಿ.ಟಿ.ರವಿ, ಪರಿಷತ್‌ ಸದಸ್ಯ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ
ದ್ವೇಷ ಭಾಷಣ ತಡೆ ಬಿಲ್‌ ತಮ್ಮ ಬಳಿಯೇ ಇಟ್ಟುಕೊಂಡ ಗೌರ್‍ನರ್‌