ವಿಷ್ಣುವರ್ಧನ್‌ ಪುಣ್ಯಸ್ಮರಣೆ : ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋದಲ್ಲಿ ಸಮಾಧಿ ಪೂಜೆಗೆ ತಡೆ, ಅಭಿಮಾನಿಗಳ ಧರಣಿ

ಸಾರಾಂಶ

  ಸಾಹಸ ಸಿಂಹ ಡಾ। ವಿಷ್ಣುವರ್ಧನ್ ಅವರ 15ನೇ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋದಲ್ಲಿರುವ ವಿಷ್ಣು ಅವರ ಸಮಾಧಿಗೆ ಪೂಜೆ ಸಲ್ಲಿಸಲು ಬಂದ ಅಭಿಮಾನಿಗಳಿಗೆ ಸಮಾಧಿಗೆ ಪೂಜೆ ಮಾಡುವ ಅವಕಾಶ, ಸಮಾಧಿಗೆ ಅಲಂಕಾರ ಮಾಡುವ ಅವಕಾಶ ನಿರಾಕರಿಸಲಾಗಿದೆ.

ಬೆಂಗಳೂರು :  ಸಾಹಸ ಸಿಂಹ ಡಾ। ವಿಷ್ಣುವರ್ಧನ್ ಅವರ 15ನೇ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋದಲ್ಲಿರುವ ವಿಷ್ಣು ಅವರ ಸಮಾಧಿಗೆ ಪೂಜೆ ಸಲ್ಲಿಸಲು ಬಂದ ಅಭಿಮಾನಿಗಳಿಗೆ ಸಮಾಧಿಗೆ ಪೂಜೆ ಮಾಡುವ ಅವಕಾಶ, ಸಮಾಧಿಗೆ ಅಲಂಕಾರ ಮಾಡುವ ಅವಕಾಶ ನಿರಾಕರಿಸಲಾಗಿದೆ. ಇದರಿಂದ ಕೋಪಗೊಂಡ ವಿಷ್ಣು ಅಭಿಮಾನಿಗಳು ಅಭಿಮಾನ್ ಸ್ಟುಡಿಯೋ ಮಾಲೀಕರ ವಿರುದ್ಧ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.

ಹುಬ್ಬಳ್ಳಿ, ಧಾರವಾಡ, ಮೈಸೂರು, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಮುಂಜಾನೆಯಿಂದಲೇ ಅಭಿಮಾನ್ ಸ್ಟುಡಿಯೋಗೆ ಆಗಮಿಸಿದ ಅಭಿಮಾನಿಗಳಿಗೆ ಸಮಾಧಿಯ ಪೂಜೆ ಮಾಡಲು, ಅಲಂಕಾರ ಮಾಡಲು ಅವಕಾಶ ನಿರಾಕರಿಸಲಾಗಿತ್ತು. ಅಭಿಮಾನಿ ಸಂಘಗಳಿಗೆ ಸಮಾಧಿ ಸ್ಥಳಕ್ಕೆ ಪ್ರವೇಶ ಮಾಡುವುದಕ್ಕೂ ಅವಕಾಶ ಇರಲಿಲ್ಲ. ಇದರಿಂದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಭಿಮಾನಿಗಳು, ‘ವಿಷ್ಣು ಸರ್‌ ಸಮಾಧಿಗೆ ಅಲಂಕಾರ ಮಾಡಬೇಕು ಎಂಬ ಉದ್ದೇಶದಿಂದ ಬೆಳಗ್ಗೆ 6 ಗಂಟೆಗೆ ಬಂದಿದ್ದೇವೆ. ಆದರೆ ಅವಕಾಶ ನೀಡುತ್ತಿಲ್ಲ. ಹೂವನ್ನು ದೂರದಿಂದ ಸಮಾಧಿ ಮೇಲೆ ಎಸೆಯಬೇಕು. ಸಮಾಧಿ ಮುಟ್ಟಿ ನಮಸ್ಕರಿಸಲೂ ಅವಕಾಶ ಇಲ್ಲ. ಸಮಾಧಿ ಮುಂದೆ ಸ್ವಲ್ಪ ಹೊತ್ತು ನಿಂತರೂ ಹೊರಡಿ ಅಂತ ಹೊರದಬ್ಬುತ್ತಾರೆ. ವಿಷ್ಣು ಸರ್‌ ಬದುಕಿದ್ದಾಗಲೂ ನೋವೇ ಕೊಟ್ಟಿರಿ. ಅವರು ದೇಹ ತ್ಯಜಿಸಿದ ಮೇಲೆ ಅವರ ಅಭಿಮಾನಿಗಳನ್ನು ನೋಯಿಸುತ್ತಿದ್ದೀರಿ’ ಎಂದು ಕಣ್ಣೀರು ಹಾಕಿದರು.

ಆರಂಭದಿಂದಲೂ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳ ವಿವಾದದಲ್ಲಿದೆ. ತಮ್ಮ ನೆಚ್ಚಿನ ನಟನ ಅಂತ್ಯಸಂಸ್ಕಾರ ನಡೆದ ಜಾಗದಲ್ಲೇ ಅವರ ಸ್ಮಾರಕ ಇರಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಈ ವಿಚಾರವಾಗಿ ಬಾಲಣ್ಣ ಕುಟುಂಬ ಹಾಗೂ ವಿಷ್ಣು ಅಭಿಮಾನಿಗಳ ನಡುವೆ ಜಟಾಪಟಿ ನಡೆದು ಪ್ರಕರಣ ಕೋರ್ಟ್‌ ಮೆಟ್ಟಿಲೇರಿದೆ.

ಸದ್ಯ ವಿಷ್ಣು ಅವರ ಅಂತ್ಯಸಂಸ್ಕಾರ ನಡೆದ 10 ಗುಂಟೆ ಭೂಮಿಯನ್ನು ವಿಷ್ಣು ಸಮಾಧಿಗೆ ನೀಡಬೇಕು, ಆ ಹಣವನ್ನು ವಿಷ್ಣು ಅಭಿಮಾನಿ ಸಂಘ ನೀಡುತ್ತದೆ ಎಂಬುದು ವಿಷ್ಣುವರ್ಧನ್‌ ಅಭಿಮಾನಿಗಳ ಹಠ. ಇದಕ್ಕೆ ಒಪ್ಪದ ಬಾಲಣ್ಣ ಕುಟುಂಬದವರು ವಿಷ್ಣು ಸಮಾಧಿ ಜಾಗದಲ್ಲಿ ಪೂಜೆ ನಡೆಸದಂತೆ ಕೋರ್ಟ್‌ನಿಂದ ಸ್ಟೇ ತಂದಿದ್ದರು. ಈ ಹಿನ್ನೆಲೆಯಲ್ಲಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

Share this article