ನಕ್ಸಲರು ಶರಣಾಗಿ, ಹಿಂಸೆಗಿಳಿದರೆ ಕಠಿಣ ಕ್ರಮ’ - ಮುಖ್ಯವಾಹಿನಿಗೆ ಬರಲೆಂಬುದು ಸರ್ಕಾರದ ಬಯಕೆ : ಸಿಎಂ

Published : Dec 31, 2024, 09:57 AM IST
cm siddaramaiah

ಸಾರಾಂಶ

ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿರುವವರು ಮುಖ್ಯವಾಹಿನಿಗೆ ಬರಲು ಮಾತುಕತೆ ನಡೆಸಲು ಸಿದ್ಧರಿದ್ದರೆ ಅದನ್ನು ಸರ್ಕಾರ ಸ್ವಾಗತಿಸಿ, ಸಹಾನುಭೂತಿಯಿಂದ ನಡೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ ನೀಡಿದ್ದಾರೆ.

ಬೆಂಗಳೂರು :  ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿರುವವರು ಮುಖ್ಯವಾಹಿನಿಗೆ ಬರಲು ಮಾತುಕತೆ ನಡೆಸಲು ಸಿದ್ಧರಿದ್ದರೆ ಅದನ್ನು ಸರ್ಕಾರ ಸ್ವಾಗತಿಸಿ, ಸಹಾನುಭೂತಿಯಿಂದ ನಡೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ ನೀಡಿದ್ದಾರೆ.

ಇದೇ ವೇಳೆ ಕಾನೂನು ಉಲ್ಲಂಘಿಸಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೂ ಹಿಂಜರಿಯುವುದಿಲ್ಲ ಎಂದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿರುವವರು ಮುಖ್ಯವಾಹಿನಿಗೆ ಬರಬೇಕು ಎಂದು ಪ್ರತಿಪಾದಿಸುವವರು ತಮ್ಮನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ, ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿರುವವರು ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬುದು ಸರ್ಕಾರದ ಬಯಕೆ. ಅದಕ್ಕಾಗಿ ನಕ್ಸಲರು ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧರಿದ್ದರೆ ಅದನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.

ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಕ್ಸಲೀಯ ಚಟುವಟಿಕೆ ವಿಪರೀತ ಮಟ್ಟಕ್ಕೆ ಹೋಗಿಲ್ಲ. ಆದರೆ, ಮಲೆನಾಡು ಭಾಗದಲ್ಲಿ ಎರಡು ದಶಕಗಳಿಂದ ಆಗಾಗ್ಗೆ ನಕ್ಸಲೀಯ ಚಟುವಟಿಕೆಗಳು ಕಾಣಿಸುತ್ತಿದ್ದು, ಅದರಿಂದ ಹಿಂಸೆ ಹಾಗೂ ಸಾವು-ನೋವು ಸಂಭವಿಸಿವೆ. ಅಮಾಯಕರು, ಪೊಲೀಸರು ಮತ್ತು ನಕ್ಸಲ್‌ ಚಟುವಟಿಕೆಗಳಲ್ಲಿ ಇದ್ದವರ ಪ್ರಾಣಹಾನಿಯಾಗಿದೆ. ಇದು ನೋವಿನ ವಿಚಾರವಾದರೂ ಸಂವಿಧಾನಬದ್ಧವಾಗಿ ಆಡಳಿತ ನಡೆಸುವ ಸರ್ಕಾರ ಸುಮ್ಮನೇ ಕೂರಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿರುವವರು ಸಂಪೂರ್ಣವಾಗಿ ಶರಣಾಗತರಾಗಿ ಮುಖ್ಯವಾಹಿನಿಗೆ ಬರಲು ಸರ್ಕಾರ ಬಯಸುತ್ತದೆ ಎಂದು ತಿಳಿಸಿದ್ದಾರೆ.

ನಕ್ಸಲರು ಶರಣಾಗಲು ಮುಂದಾದರೆ ಶರಣಾಗತಿ ನಿಯಮದಂತೆ ಹಂತ ಹಂತವಾಗಿ ಆರ್ಥಿಕ ನೆರವು ನೀಡಲಾಗುವುದು. ಆಯುಧಗಳನ್ನು ಕೆಳಗಿಡುವ ನಕ್ಸಲರಿಗೆ ಪ್ರೋತ್ಸಾಹ ಧನ, ಕೌಶಲ್ಯ ತರಬೇತಿ ನೀಡುವ ಜತೆಗೆ ಪುನರ್ವಸತಿಗೂ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು. ಅವರ ಮೇಲಿನ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲಾಗುವುದು ಮತ್ತು ಸೂಕ್ತ ಕಾನೂನು ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

PREV

Recommended Stories

ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ
ಧರ್ಮಸ್ಥಳ ಕಾಡಲ್ಲಿ ಅಸ್ಥಿಪಂಜರ: ಇದು ದೂರುದಾರ ತೋರಿಸಿದ್ದಲ್ಲ