ಕೆಎಎಸ್ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಗೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ಕಾರಣ ಕಡಿಮೆ ಅವಧಿಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ, ಮುದ್ರಿಸಿ, ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಗಿದೆ. ಹೀಗಾಗಿ, ಕೆಲ ಲೋಪಗಳು ಆಗಿವೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.
ಬೆಂಗಳೂರು : ಕೆಎಎಸ್ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಗೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ಕಾರಣ ಕಡಿಮೆ ಅವಧಿಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ, ಮುದ್ರಿಸಿ, ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಗಿದೆ. ಹೀಗಾಗಿ, ಕೆಲ ಲೋಪಗಳು ಆಗಿವೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.
ಮರುಪರೀಕ್ಷೆಯ ಕನ್ನಡ ಪ್ರಶ್ನೆಗಳಲ್ಲಿ ಭಾಷಾಂತರ ಲೋಪ, ಕನ್ನಡ ಪದಗಳು ತಪ್ಪು ಮುದ್ರಣ, ಕೆಲವು ಸಾಲುಗಳು ಅರ್ಥವಾಗದಿರುವುದು, ಇಂಗ್ಲಿಷ್ ಮತ್ತು ಕನ್ನಡ ಪ್ರಶ್ನೆಗಳೆರೆಡೂ ಬೇರೆಯದೇ ಅರ್ಥ ಬರುವಂತೆ ಪ್ರಶ್ನೆ ಸಿದ್ಧಪಡಿಸಲಾಗಿದೆ. ಅಲ್ಲದೆ ಪರೀಕ್ಷಾ ಕೇಂದ್ರದಲ್ಲಿ ಪತ್ರಿಕೆಗಳು ಅದಲು ಬದಲು ಆಗಿರುವುದಕ್ಕೆ ಅಭ್ಯರ್ಥಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಕೆಲ ಅಭ್ಯರ್ಥಿಗಳು ಮರುಪರೀಕ್ಷೆಗೆ ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದ ಕಾರಣ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಹೀಗಾಗಿ, ಎಲ್ಲಾ ಚಟುವಟಿಕೆಗಳನ್ನು ತಡೆಹಿಡಿಯಲಾಗಿತ್ತು. ತಡೆಯಾಜ್ಞೆ ತೆರವಾದ ಬಳಿಕ ಸಿಕ್ಕ 8 ದಿನಗಳಲ್ಲಿ ಎಲ್ಲಾ ಚಟುವಟಿಕೆಗಳನ್ನು ಮಾಡಲಾಗಿದೆ. ಸಮಯ ಹೆಚ್ಚು ಇದ್ದಿದ್ದರೆ ಪ್ರಶ್ನೆಗಳ ವಿಚಾರದಲ್ಲಿ ಮತ್ತಷ್ಟು ಎಚ್ಚರಿಕೆ ವಹಿಸಬಹುದಿತ್ತು.
ಇನ್ನು, ಮುಂಚಿತವಾಗಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ಧೀರ್ಘ ಕಾಲದವರೆಗೆ ಇಟ್ಟುಕೊಳ್ಳುವುದು ಪರೀಕ್ಷಾ ಗೌಪ್ಯತೆ ಕಾರಣದಿಂದ ಸೂಕ್ತವಲ್ಲ ಎಂಬ ಕಾರಣಕ್ಕೆ ಕಡಿಮೆ ಅವಧಿಯಲ್ಲಿ ಪ್ರಕ್ರಿಯೆ ಮುಗಿಸಲಾಗಿದೆ ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.
ನುರಿತ ಉಪನ್ಯಾಸಕರಿಂದ ಭಾಷಾಂತರ: ಇಂಗ್ಲಿಷ್‌ನಿಂದ ಕನ್ನಡಕ್ಕೆ ಪ್ರಶ್ನೆಗಳನ್ನು ಭಾಷಾಂತರ ಮಾಡಲು ಅನುಭವಿಗಳ ಸೇವೆ ಪಡೆಯಲಾಗಿದೆ. ಸಾಮಾನ್ಯ ಭಾಷಾಂತರಕಾರರ ಸೇವೆ ಪಡೆದುಕೊಂಡಿಲ್ಲ. ಅಲ್ಲದೇ, ಒಂದು ದಶಕಕ್ಕೂ ಹೆಚ್ಚು ಅನುಭವ ಇರುವ ಉಪನ್ಯಾಸಕರು, ಪ್ರಾಧ್ಯಾಪಕರಿಂದ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲಾಗಿದೆ. ಕನ್ನಡದಲ್ಲಿ ಪ್ರಶ್ನೆಗಳನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನೂ ಅವರಿಗೇ ವಹಿಸಲಾಗಿತ್ತು. ಹಿಂದಿನ ಪರೀಕ್ಷೆಯಲ್ಲಿ ಸಮಸ್ಯೆಗಳು ಉಂಟಾಗಿದ್ದ ಕಾರಣ ಎಚ್ಚರ ವಹಿಸುವಂತೆ ಸೂಚಿಸಲಾಗಿತ್ತು. ಆದರೂ, ಲೋಪಗಳಾಗಿವೆ ಎಂದು ಕೆಪಿಎಸ್‌ಸಿ ಹೇಳಿದೆ.
ಕೀ ಉತ್ತರಕ್ಕೆ ಬೇಕು ಒಂದು ತಿಂಗಳು
ಒಎಂಆರ್ ಪ್ರತಿಗಳ ಸ್ಕ್ಯಾನಿಂಗ್ (ಮೌಲ್ಯಮಾಪನ) ಮುಗಿಸಿಯೇ ಕೀ ಉತ್ತರ ಬಿಡುಗಡೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು 20 ದಿನಗಳೊಳಗೆ ಮುಗಿಸುವ ಗುರಿ ಹೊಂದಲಾಗಿದೆ. ಅದಾದ ನಂತರವೇ ಕೀ ಉತ್ತರ ಬಿಡುಗಡೆ ಮಾಡಲಾಗುತ್ತದೆ. ಹೀಗಾಗಿ, ಕೀ ಉತ್ತರಗಳು ಬಿಡುಗಡೆ ಆಗಲು ಸುಮಾರು ಒಂದು ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎನ್ನಲಾಗಿದೆ.
ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯ ಆಗುತ್ತಾ?
ಪತ್ರಿಕೆ-1ರಲ್ಲಿನ ಪ್ರಶ್ನೆಯೊಂದು ಅರ್ಥಪೂರ್ಣವಾಗಿದ್ದರೂ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಭಿನ್ನ ಅರ್ಥ ನೀಡುತ್ತದೆ. ಹೀಗಾಗಿ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬೇರೆ ಬೇರೆ ಉತ್ತರ ನೀಡಲು ಅವಕಾಶವಿದೆ.
ಪ್ರಶ್ನೆ: ಕರ್ನಾಟಕದಿಂದ ಮಿಜೋರಾಂವರೆಗೆ ನಡಿಗೆ ಮೂಲಕ ಪ್ರಯಾಣಿಸಿದರೆ ಎಷ್ಟು ರಾಜ್ಯಗಳ ಮೂಲಕ ಹಾದು ಹೋಗಬೇಕಾಗುತ್ತದೆ? (ಹೊರಟ ಮತ್ತು ಸೇರುವ ರಾಜ್ಯ ಹೊರತುಪಡಿಸಿ). ಇಂಗ್ಲಿಷ್‌ನಲ್ಲಿನ ಪ್ರಶ್ನೆ: To travel from Karnataka to Mizoram by walking, the minimum number if states you have to pass through would be(Excluding the origin and the destination state).
ಈ ಪ್ರಶ್ನೆಗೆ ನಾಲ್ಕು ಆಯ್ಕೆಗಳಾಗಿ 3, 4, 5 ಅಥವಾ 6 ರಾಜ್ಯಗಳನ್ನು ಹಾದು ಹೋಗಬೇಕು ಎಂದು ಸರಿ ಉತ್ತರಗಳನ್ನು ನೀಡಲಾಗಿದೆ. ಇಂಗ್ಲಿಷ್ ಪ್ರಶ್ನೆಗೆ 4 ರಾಜ್ಯಗಳು ಸರಿ ಉತ್ತರ. ಆದರೆ, ಕನ್ನಡದಲ್ಲಿ ‘ಕನಿಷ್ಠ ಸಂಖ್ಯೆಯ ರಾಜ್ಯಗಳ ಮೂಲಕ ಹಾದು ಹೋಗಬೇಕು’ ಎಂಬುದರ ಉಲ್ಲೇಖವೇ ಇಲ್ಲದ ಕಾರಣ 4, 5 ಮತ್ತು 6 ರಾಜ್ಯಗಳು ಸರಿ ಉತ್ತರ ಆಗುತ್ತವೆ. ಒಂದು ವೇಳೆ ಕೆಪಿಎಸ್‌ಸಿ ಇಂಗ್ಲಿಷ್‌ನಲ್ಲಿರುವ ಪ್ರಶ್ನೆಯೇ ಅಂತಿಮ ಎಂದು ಪರಿಗಣಿಸಿದರೆ ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ.
ಮುಖ್ಯ ಪರೀಕ್ಷೆಗೆ ಅರ್ಹರಾಗಲು ಪರೀಕ್ಷೆಯಲ್ಲಿ 0.25 ಅಂಕ ಕೂಡ ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ಕೆಪಿಎಸ್‌ಸಿ ತೀರ್ಮಾನದ ಬಗ್ಗೆ ಅಭ್ಯರ್ಥಿಗಳು ಕುತೂಹಲ ಹೊಂದಿದ್ದಾರೆ.
ಕೆಪಿಎಸ್‌ಸಿ ನಡೆಸಿದ ಮರುಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸುವ ಕೆಲಸ ಆಗುತ್ತದೆ.
- ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ