ಹೋಟೆಲ್‌ ತಿನಿಸಿಗೆ ಗ್ರಾಹಕರಿಗೆ ಸೇವಾ ಶುಲ್ಕ ಕೊಡಬೇಕಿಲ್ಲ : ಕೇಳಿದರೆ ನೀವೇನು ಮಾಡಬೇಕು?

ಸಾರಾಂಶ

‘ಹೋಟೆಲ್‌ಗಳಲ್ಲಿ ತಿಂಡಿ, ತಿನಿಸು, ಊಟದ ಬಿಲ್‌ಗಳ ಮೇಲಿನ ಸೇವಾ ಶುಲ್ಕ (ಸರ್ವೀಸ್‌ ಚಾರ್ಜ್‌) ಪಾವತಿಸುವುದು ಗ್ರಾಹಕರಿಗೆ ಕಡ್ಡಾಯವಲ್ಲ. ಅದು ಸ್ವಯಂಪ್ರೇರಿತ. ಹೋಟೆಲ್‌ಗಳು ಈ ಶುಲ್ಕವನ್ನು ಗ್ರಾಹಕರ ಮೇಲೆ ಕಡ್ಡಾಯವಾಗಿ ವಿಧಿಸುವಂತಿಲ್ಲ’ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.

ನವದೆಹಲಿ: ‘ಹೋಟೆಲ್‌ಗಳಲ್ಲಿ ತಿಂಡಿ, ತಿನಿಸು, ಊಟದ ಬಿಲ್‌ಗಳ ಮೇಲಿನ ಸೇವಾ ಶುಲ್ಕ (ಸರ್ವೀಸ್‌ ಚಾರ್ಜ್‌) ಪಾವತಿಸುವುದು ಗ್ರಾಹಕರಿಗೆ ಕಡ್ಡಾಯವಲ್ಲ. ಅದು ಸ್ವಯಂಪ್ರೇರಿತ. ಹೋಟೆಲ್‌ಗಳು ಈ ಶುಲ್ಕವನ್ನು ಗ್ರಾಹಕರ ಮೇಲೆ ಕಡ್ಡಾಯವಾಗಿ ವಿಧಿಸುವಂತಿಲ್ಲ’ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.

ಇದಕ್ಕೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿ, ‘ಇದು ಗ್ರಾಹಕರಿಗೆ ಸಂದ ಜಯ’ ಎಂದಿದ್ದಾರೆ. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಬಿಲ್‌ಗಳ ಮೇಲೆ ಕಡ್ಡಾಯವಾಗಿ ಸೇವಾ ಶುಲ್ಕ ವಿಧಿಸುವುದನ್ನು ನಿರ್ಬಂಧಿಸಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಮಾರ್ಗಸೂಚಿ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಹೋಟೆಲ್‌ ಸಂಘಗಳು ಅರ್ಜಿ ಸಲ್ಲಿಸಿದ್ದವು.

ಈ ಅರ್ಜಿ ವಜಾಗೊಳಿಸಿದ ನ್ಯಾ. ಪ್ರತಿಭಾ ಎಂ. ಸಿಂಗ್ ಅವರಿದ್ದ ಪೀಠ, ‘ಕಡ್ಡಾಯವಾಗಿ ಸೇವಾ ಶುಲ್ಕ ಪಡೆಯುವುದು ಗ್ರಾಹಕರ ಹಕ್ಕಿಗೆ ಮತ್ತು ಕಾನೂನಿಗೆ ವಿರುದ್ಧವಾದದ್ದು. ಗ್ರಾಹಕರು ಸ್ವಇಚ್ಛೆಯಿಂದ ಪಾವತಿಸಬಹುದು. ಆದರೆ ಅವರ ಮೇಲೆ ಸೇವಾ ಶುಲ್ಕವನ್ನು ಹೇರಿಕೆ ಮಾಡುವಂತಿಲ್ಲ. ಅದು ಗ್ರಾಹಕರ ದಾರಿತಪ್ಪಿಸುವ, ಮೋಸದ ಹಾಗೂ ಅನ್ಯಾಯಯುತ ವ್ಯಾಪಾರ ಪದ್ಧತಿ’ ಎಂದು ಹೇಳಿದೆ. ಅಲ್ಲದೆ, ಸಿಸಿಪಿಎ ನಿರ್ಧಾರ ಪ್ರಶ್ನಿಸಿದ್ದ ಇಬ್ಬರು ಅರ್ಜಿದಾರರಿಗೆ ತಲಾ 1 ಲಕ್ಷ ರು. ದಂಡ ವಿಧಿಸಿದೆ.

‘ಹೇಗೂ ಹೋಟೆಲ್‌ಗಳು ಊಟ-ತಿಂಡಿಯನ್ನು ಲಾಭ ಇಟ್ಟುಕೊಂಡೇ ಮಾರುತ್ತವೆ. ಅದರಲ್ಲೇ ಅವು ನೌಕರರ ವೇತನದ ಖರ್ಚನ್ನೂ ಸೇರಿಸಿರುತ್ತವೆ. ಆದಾಗ್ಯೂ ಸೇವಾ ಶುಲ್ಕ ಎಂದು ಹೇಳಿ ಮುಖ್ಯ ಬಿಲ್‌ ಜತೆಗೇ ಸೇರಿಸಿಕೊಂಡು ಬಿಲ್‌ ಚೀಟಿಯನ್ನು ಗ್ರಾಹಕರಿಗೆ ನೀಡುತ್ತವೆ. ಸೇವಾ ಶುಲ್ಕವನ್ನು ‘ಸೇವಾ ತೆರಿಗೆ’ ಎಂಬ ರೀತಿಯಲ್ಲಿ ಮರೆಮಾಚಿ ನೀಡುವ ಪರಿಪಾಠವಿದೆ. ಇದು ಸಲ್ಲದು. ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ಸೆಕ್ಷನ್ 2(47) ರ ಅಡಿಯಲ್ಲಿ ಇಂತಹ ಪರಿಪಾಠವು ಅನ್ಯಾಯದ ವ್ಯಾಪಾರ ಕ್ರಮವಾಗಿದೆ. ಇದನ್ನು ಅನುಸರಿಸಿ, ಸೇವಾ ಶುಲ್ಕವನ್ನು ಐಚ್ಛಿಕ ಎಂದು 2022ರಲ್ಲಿ ಸಿಸಿಪಿಎ ಹೇಳಿದೆ. ಸಿಸಿಪಿಎ ಎಂಬುದು ಕೇವಲ ಸಲಹಾ ಮಂಡಳಿಯಲ್ಲ. ಅದಕ್ಕೆ ಆದೇಶ ಹೊರಡಿಸುವ ಅಧಿಕಾರವಿದೆ’ ಎಂದು ಕೋರ್ಟ್‌ ಹೇಳಿದೆ. ಆದರೆ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗುವ ಇಂಗಿತವನ್ನು ಅರ್ಜಿದಾರರು ವ್ಯಕ್ತಪಡಿಸಿದ್ದಾರೆ.

-- ಹೋಟೆಲ್‌ಗಳ ವಾದವೇನು?

‘ಗ್ರಾಹಕರಿಗೆ ಊಟ-ತಿಂಡಿಯನ್ನು ಬಡಿಸುವ (ಸರ್ವ್‌ ಮಾಡುವವರ) ಹಿತದೃಷ್ಟಿಯಿಂದ ಸೇವಾ ಶುಲ್ಕ ವಿಧಿಸುವುದು ಅನಿವಾರ್ಯ ಎಂಬುದು ಅರ್ಜಿದಾರರ ವಾದವಾಗಿತ್ತು. ಆದರೆ ಇದನ್ನು ವಿರೋಧಿಸಿದ್ದ ಕೇಂದ್ರ ಸರ್ಕಾರ, ‘ಸೇವಾ ಶುಲ್ಕವನ್ನು ಹೋಟೆಲ್‌ ಸಿಬ್ಬಂದಿಗೇ ನೀಡಲಾಗುತ್ತದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ’ ಎಂದಿತ್ತು. ---

ಸಿಸಿಪಿಎ ಮಾರ್ಗಸೂಚಿ ಏನು? 2022ರಲ್ಲಿ ಸಿಸಿಪಿಎ ಮಾರ್ಗಸೂಚಿ ಹೊರಡಿಸಿ, ‘ಕಾನೂನುಬಾಹಿರವಾಗಿ ಮರೆಮಾಚಿ ಸೇವಾ ಶುಲ್ಕವನ್ನು ಮೂಲ ಬಿಲ್‌ನಲ್ಲೇ ಸೇರಿಸಿ ನೀಡಲಾಗುತ್ತದೆ. ಇದು ಕಾನೂನುಬಾಹಿರ. ಸೇವಾ ಶುಲ್ಕವನ್ನು ಪ್ರತ್ಯೇಕವಾಗಿ ನಮೂದಿಸಿ ನೀಡಬೇಕು. ಸೇವಾ ಶುಲ್ಕ ಪಾವತಿಸುವುದು ಗ್ರಾಹಕರಿಗೆ ಐಚ್ಛಿಕ’ ಎಂದು ಹೇಳಿತ್ತು.

ಸೇವಾ ಶುಲ್ಕ ಕೇಳಿದರೆ ನೀವೇನು ಮಾಡಬೇಕು?

‘ಯಾವುದೇ ಗ್ರಾಹಕರಿಗೆ ಸೇವಾ ಶುಲ್ಕವನ್ನು ನೀಡಲೇಬೇಕು ಎಂದು ಇನ್ನು ಮುಂದೆ ಹೋಟೆಲ್‌ಗಳು ಬಲವಂತ ಮಾಡಿದರೆ ಗ್ರಾಹಕರು ತಮ್ಮ ದೂರುಗಳನ್ನು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ 1915 ರಲ್ಲಿ ನೋಂದಾಯಿಸಬಹುದು’ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರಾಹಕರಿಗೆ ಸಂದ ಜಯ ಇದು: ಜೋಶಿ

ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಕಡ್ಡಾಯವಾಗಿ ವಿಧಿಸುವ ಸೇವಾ ಶುಲ್ಕ ನಿಷೇಧಿಸುವ ಸಿಸಿಪಿಎ ಮಾರ್ಗಸೂಚಿಯನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ. ಇದು ಗ್ರಾಹಕರಿಗೆ ಸಂದ ಜಯ. ಆಹಾರ ಮತ್ತು ಪಾನೀಯ ಬಿಲ್ ಮೇಲಿನ ಸೇವಾ ಶುಲ್ಕಗಳು ಸ್ವಯಂಪ್ರೇರಿತವಾಗಿದೆ.

- ಪ್ರಹ್ಲಾದ ಜೋಶಿ, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ

Share this article