ದುಬಾರಿ ದುನಿಯಾ - ಯುಗಾದಿ ಹಬ್ಬದ ವೇಳೆ ಹೊಸ ಶಾಕ್‌ : ಹಾಲು, ಮೊಸರು ಬೆಲೆ ದುಬಾರಿ

Published : Mar 28, 2025, 04:46 AM IST
Nandini

ಸಾರಾಂಶ

ಈಗಾಗಲೇ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಯುಗಾದಿ ಹಬ್ಬದ ವೇಳೆ ಹೊಸ ಶಾಕ್‌ ನೀಡಿದೆ. ಎಲ್ಲಾ ಮಾದರಿಯ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್‌ಗೆ ನಾಲ್ಕು ರು. ಹೆಚ್ಚಳ ಮಾಡಿದೆ. ಈ ದರ ಹೆಚ್ಚಳ ಏ.1ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ.

  ಬೆಂಗಳೂರು :  ಈಗಾಗಲೇ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಯುಗಾದಿ ಹಬ್ಬದ ವೇಳೆ ಹೊಸ ಶಾಕ್‌ ನೀಡಿದೆ. ಎಲ್ಲಾ ಮಾದರಿಯ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್‌ಗೆ ನಾಲ್ಕು ರು. ಹೆಚ್ಚಳ ಮಾಡಿದೆ. ಈ ದರ ಹೆಚ್ಚಳ ಏ.1ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ.

ಕಳೆದ ವರ್ಷದ ಜುಲೈ ತಿಂಗಳಿಂದ ಪ್ರತಿ ಲೀಟರ್‌ ಹಾಲಿಗೆ 50 ಮಿ.ಲೀ. ಹೆಚ್ಚುವರಿ ನೀಡಿ 2 ರು. ಹೆಚ್ಚಿಗೆ ವಸೂಲಿ ಮಾಡುತ್ತಿದ್ದ ನಿರ್ಧಾರ ಹಿಂಪಡೆದು ಇದೀಗ ಒಂದು ಲೀಟರ್‌ಗೆ 4 ರು. ದರ ಪರಿಷ್ಕರಣೆ ಮಾಡಲಾಗಿದೆ. ಅಂದರೆ ಇನ್ನು ಮುಂದೆ ಹಾಲಿನ ಪ್ಯಾಕೆಟ್‌ಗಳಲ್ಲಿ 50 ಮಿ.ಲೀ. ಹೆಚ್ಚು ಹಾಲು ಸಿಗುವುದಿಲ್ಲ, ಅದಕ್ಕೆ 2 ರು. ಅಧಿಕವಾಗಿಯೂ ನೀಡಬೇಕಿಲ್ಲ. ಒಂದು ಲೀಟರ್‌ಗೆ 4 ರು. ಹೆಚ್ಚುವರಿ ನೀಡಬೇಕು. ತಾಂತ್ರಿಕವಾಗಿ ದರ 4 ರು. ಹೆಚ್ಚಳವಾಗಿದೆಯಂತೆ ಕಂಡುಬಂದರೂ, 50 ಎಂಎಲ್‌ ಬದಿಗಿಟ್ಟರೆ ಜನರು ಒಂದು ಲೀಟರ್‌ ಹಾಲಿಗೆ 2 ರು. ಹೆಚ್ಚು ಪಾವತಿಸಬೇಕಾಗುತ್ತದೆ.

ಗುರುವಾರ ವಿಕಾಸಸೌಧದಲ್ಲಿ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಎಲ್ಲಾ ಮಾದರಿಯ ನಂದಿನಿ ಹಾಲಿನ ದರ ಹೆಚ್ಚಳ ಕುರಿತು ಮಾಹಿತಿ ನೀಡಿದರು.

ಸಚಿವ ವೆಂಕಟೇಶ್‌ ಮಾತನಾಡಿ, ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಹಾಲಿನ ದರ ಹೆಚ್ಚಿಸುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಬೇಡಿಕೆ ಸಲ್ಲಿಸಿದ್ದವು. ಆ ಬೇಡಿಕೆ ಪರಿಶೀಲಿಸಿ ದರ ಪರಿಷ್ಕರಿಸಲಾಗಿದೆ. ಹೆಚ್ಚಳವಾಗಿರುವ ಹಾಲಿನ ದರ ರೈತರಿಗೆ ತಲುಪಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ವೆಚ್ಚಗಳನ್ನು ಪರಿಗಣಿಸಿ ರಾಜ್ಯದಲ್ಲಿ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 4 ರು. ಹೆಚ್ಚಿಸಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.

ಟೋನ್ಡ್‌ ಹಾಲಿನ (ನೀಲಿ ಪೊಟ್ಟಣ) ದರ ಪ್ರಸ್ತುತ 42 ರು. (50 ಎಂಎಲ್‌ ಹೊರತುಪಡಿಸಿ) ಇದ್ದು, ಈಗ 46 ರು.ಗೆ ಹೆಚ್ಚಳ ಮಾಡಲಾಗಿದೆ. ಹೋಮೋಜಿನೈಸ್ಡ್‌ ಟೋನ್ಡ್‌ ಹಾಲಿನ ದರ ಪ್ರಸ್ತುತ 43 ರು. ಇದ್ದು, 47 ರು.ಗೆ ಹೆಚ್ಚಿಸಲಾಗಿದೆ. ಹಸುವಿನ ಹಾಲು (ಹಸಿರು ಪೊಟ್ಟಣ) ದರ ಪ್ರಸ್ತುತ 46 ರು. ಇದ್ದು, 50 ರು.ಗೆ ಏರಿಸಲಾಗಿದೆ. ಶುಭಂ(ಕೇಸರಿ ಪೊಟ್ಟಣ)/ಸ್ಪೆಷಲ್‌ ಹಾಲು ಪ್ರಸ್ತುತ 48 ರು. ಇದ್ದು, 52 ರು.ಗೆ ಹೆಚ್ಚಿಸಲಾಗಿದೆ. ಮೊಸರು ದರ 50 ರು. ಇದ್ದು, ಅದನ್ನು 54 ರು.ಗೆ ಏರಿಕೆ ಮಾಡಲಾಗಿದೆ ಎಂದು ವಿವರಿಸಿದರು.

ಹಾಲಿನ ದರ ರಾಜ್ಯದಲ್ಲಿ ಪ್ರತಿ ಲೀಟರ್‌ಗೆ 46 ರು. ಇದ್ದರೆ, ಕೇರಳದಲ್ಲಿ 52 ರು., ಗುಜರಾತ್‌ನಲ್ಲಿ 53 ರು., ದೆಹಲಿಯಲ್ಲಿ 55 ರು., ಮಹಾರಾಷ್ಟ್ರದಲ್ಲಿ 52 ರು., ಮತ್ತು ತೆಲಂಗಾಣದಲ್ಲಿ 58 ರು. ಇದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಹಾಲಿನ ದರ ಕಡಿಮೆ ಇದೆ. ಪರಿಷ್ಕೃತ ದರದೊಂದಿಗೆ ಹೋಲಿಕೆ ಮಾಡಿದರೂ ನಂದಿನಿ ಹಾಲಿನ ದರ ಇತರೆ ಪ್ರಮುಖ ರಾಜ್ಯಗಳ ಹಾಲು ಮಾರಾಟ ದರಗಳಿಗಿಂತ ಸ್ಪರ್ಧಾತ್ಮಕವಾಗಿದ್ದು, ಗ್ರಾಹಕರಿಗೆ ಇನ್ನೂ ಅಗ್ಗದ ಬೆಲೆಯಲ್ಲಿ ಲಭ್ಯ ಇದೆ ಎಂದು ತಿಳಿಸಿದರು.

ಸಹಕಾರ ಸಚಿವ ಕೆ.ಎಚ್‌.ರಾಜಣ್ಣ ಮಾತನಾಡಿ, ರಾಜ್ಯದಲ್ಲಿ 16 ಹಾಲು ಉತ್ಪಾದಕರ ಒಕ್ಕೂಟಗಳಿದ್ದು, ಈ ಪೈಕಿ 13 ಒಕ್ಕೂಟಗಳು ಲಾಭದಲ್ಲಿವೆ. ಇನ್ನು ಮೂರು ಒಕ್ಕೂಟಗಳು ನಷ್ಟದಲ್ಲಿವೆ. ವಿಜಯಪುರ ಹಾಲು ಉತ್ಪಾದಕರ ಒಕ್ಕೂಟ ಹೆಚ್ಚು ನಷ್ಟದಲ್ಲಿದ್ದು, ಸುಮಾರು 20.48 ಕೋಟಿ ರು.ನಷ್ಟ ಅನುಭವಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವಧಿಯಲ್ಲಿ ರೈತರ ಪ್ರೋತ್ಸಾಹ ಧನವನ್ನು ಎರಡು ರು. ಹೆಚ್ಚಳ ಮಾಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಐದು ರು.ಗೆ ಹೆಚ್ಚಳ ಮಾಡಿದ್ದಾರೆ ಎಂದರು

ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರೋತ್ಸಾಹ ಧನದ ಬಾಕಿ ಮೊತ್ತ 700 ಕೋಟಿ ರು.ಗೂ ಅಧಿಕ ಇತ್ತು. ಅದನ್ನು ಕಾಂಗ್ರೆಸ್‌ ಸರ್ಕಾರ ಬಿಡುಗಡೆ ಮಾಡಿದೆ. ಅಲ್ಲದೆ, ಇನ್ನೂ 690 ಕೋಟಿ ರು.ನಷ್ಟು ಬಾಕಿ ಇದೆ ಎಂಬುದಾಗಿ ಹೇಳಲಾಗಿದ್ದು, ಇತ್ತೀಚೆಗಷ್ಟೇ ಸರ್ಕಾರ 200 ಕೋಟಿ ರು. ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ರಾಜ್ಯದ 26.84 ಲಕ್ಷ ಹೈನುಗಾರ ರೈತರ ಪೈಕಿ ಸರಾಸರಿ 8.90 ಲಕ್ಷ ರೈತರು ಪ್ರತಿದಿನ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಪೂರೈಸುತ್ತಿದ್ದಾರೆ. ದೇಶದ ಎರಡನೇ ಅತಿದೊಡ್ಡ ಸಹಕಾರ ಹೈನೋದ್ಯಮವಾಗಿರುವ ಕೆಎಂಎಫ್‌, ಗ್ರಾಹಕರಿಗೆ ಬರುವ ಪ್ರತಿಯೊಂದು ರುಪಾಯಿಯಲ್ಲಿ 80 ಪೈಸೆಗಿಂತ ಹೆಚ್ಚು ಹಣ ರೈತರಿಗೆ ನೇರವಾಗಿ ನೀಡುತ್ತಿದೆ. ಪ್ರತಿದಿನ ರಾಜ್ಯದ ಹಾಲು ಉತ್ಪಾದಕರಿಗೆ ಸರಾಸರಿ 28.60 ಕೋಟಿ ರು. ನೇರವಾಗಿ ಪಾವತಿ ಮಾಡಲಾಗುತ್ತಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ್‌ ಉಪಸ್ಥಿತರಿದ್ದರು.

ಹೋಟೆಲ್‌ ಕಾಫಿ, ಟೀ ದರ

ಶೇ.10-15ರಷ್ಟು ಏರಿಕೆ? 

ನಂದಿನಿ ಹಾಲಿನ ದರ ₹4 ಹೆಚ್ಚಳ ಆಗಿರುವ ಹಿನ್ನೆಲೆಯಲ್ಲಿ ಹೊಟೇಲುಗಳಲ್ಲಿ ಕಾಫಿ-ಟೀ ದರದಲ್ಲಿ ಶೇಕಡ 10ರಿಂದ 15ರಷ್ಟು ಹೆಚ್ಚಳವಾಗಲಿದೆ ಎಂದು ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.

ಕಳೆದ ತಿಂಗಳು ಕಾಫೀ ಪುಡಿ ದರ ಹೆಚ್ಚಳವಾದಾಗ ಕೆಲವು ಹೋಟೆಲುಗಳಲ್ಲಿ ಕಾಫೀ ದರ ಹೆಚ್ಚಾಗಿದೆ. ಆದರೂ, ಅನೇಕ ಕಡೆ ಏರಿಕೆ ಆಗಿರಲಿಲ್ಲ. ಈಗ ಹಾಲಿನ ದರವೂ ಹೆಚ್ಚಾಗಿರುವುದರಿಂದ ಎಲ್ಲಾ ಹೋಟೆಲುಗಳು ದರ ಹೆಚ್ಚಳ ಅನಿವಾರ್ಯವಾಗಲಿದೆ. ಇದರ ಹೊರೆ ಗ್ರಾಹಕರ ಮೇಲೆ ಬೀಳುತ್ತದೆ. ಇದರ ಜೊತೆಗೆ ಹಾಲಿನ ಉತ್ಪನ್ನಗಳ ದರವೂ ಹೆಚ್ಚಳವಾಗಬಹುದು ಎಂದು ರಾವ್ ಹೇಳಿದರು.

ಹಾಲಿನ ದರ ಹೆಚ್ಚಿಸಿರುವುದರಿಂದ ನಂದಿನಿಯ ಇತರ ಉತ್ಪನ್ನಗಳ ಬೆಲೆಯು ಹೆಚ್ಚಳವಾಗಬಹುದು. ಹೋಟೆಲುಗಳಲ್ಲಿ ಅನೇಕ ಖಾದ್ಯಗಳಿಗೆ ತುಪ್ಪ, ಮೊಸರು ಬಳಸಲಾಗುತ್ತದೆ. ಇನ್ನು ಪನೀರ್ ಸೇರಿದಂತೆ ಅನೇಕ ಮಾದರಿಯ ಸಿಹಿ ತಿನಿಸುಗಳನ್ನು ಹಾಲು ಮತ್ತು ಹಾಲಿನ ಉತ್ಪನ್ನಗಳಿಂದಲೇ ತಯಾರಿಸಲಾಗುತ್ತದೆ. ಅವುಗಳಿಗೂ ತುಪ್ಪ ಪ್ರಮುಖವಾಗಿದೆ. ಹೀಗಾಗಿ, ಹಾಲಿನ ದರ ಹೆಚ್ಚಳದಿಂದ ಹಾಲಿನ ಉತ್ಪನ್ನಗಳು, ಸಿಹಿ ತಿನಿಸುಗಳು, ಖಾದ್ಯಗಳ ದರದಲ್ಲೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ರಾವ್ ತಿಳಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ
ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ