ಇಬ್ಬರು ಮಹಿಳಾ ಐಪಿಎಸ್ ಅಧಿಕಾರಿಗಳ ನಡುವಿನ ತಿಕ್ಕಾಟ ಮುಂದುವರೆದಿದ್ದು, ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿರುವ ಡಿಐಜಿ ವರ್ತಿಕಾ ಕಟಿಯಾರ್ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಐಜಿಪಿ ಡಿ.ರೂಪಾ ಲಿಖಿತ ದೂರು ನೀಡಿದ್ದಾರೆ.
ಬೆಂಗಳೂರು : ಇಬ್ಬರು ಮಹಿಳಾ ಐಪಿಎಸ್ ಅಧಿಕಾರಿಗಳ ನಡುವಿನ ತಿಕ್ಕಾಟ ಮುಂದುವರೆದಿದ್ದು, ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿರುವ ಡಿಐಜಿ ವರ್ತಿಕಾ ಕಟಿಯಾರ್ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಐಜಿಪಿ ಡಿ.ರೂಪಾ ಲಿಖಿತ ದೂರು ನೀಡಿದ್ದಾರೆ.
ನನ್ನ ಮೇಲೆ ರಾಜ್ಯ ಆಂತರಿಕ ಭದ್ರತಾ ವಿಭಾಗದಲ್ಲಿ ಡಿಐಜಿ ವರ್ತಿಕಾ ಕಟಿಯಾರ್ ಅವರ ಕಚೇರಿಗೆ ಅನಧಿಕೃತವಾಗಿ ಸಿಬ್ಬಂದಿ ಕಳುಹಿಸಿ ಕಡತಗಳನ್ನು ಇರಿಸಿದ್ದೆ ಎಂದು ಆರೋಪಿಸಲಾಗಿದೆ. ಆದರೆ ಡಿಐಜಿ ಆರೋಪಕ್ಕೆ ಯಾವುದೇ ಪುರಾವೆ ಇಲ್ಲ. ಇದೊಂದು ಅಸಂಬದ್ಧ ಹಾಗೂ ಆಧಾರ ರಹಿತ ಆಪಾದನೆ ಎಂದು ರೂಪ ಕಿಡಿಕಾರಿದ್ದಾರೆ.
2024ರ ಸೆಪ್ಟೆಂಬರ್‌ನಲ್ಲಿ ಡಿಐಜಿ ವರ್ತಿಕಾ ಅವರ ಕೊಠಡಿಗೆ ತೆರಳಿ ಕಡತಗಳನ್ನು ಇಟ್ಟು ಕಾನ್‌ಸ್ಟೇಬಲ್‌ಗಳು ಪೋಟೋ ತೆಗೆದಿದ್ದರು ಎಂದು ಹೇಳಲಾಗಿದೆ. ಆದರೆ ಘಟನೆ ನಡೆದು ಆರು ತಿಂಗಳ ಬಳಿಕ ಈ ಬಗ್ಗೆ ಡಿಐಜಿ ದೂರು ನೀಡಿದ್ದಾರೆ. ನನ್ನ ಹಾಗೂ ಅವರ ಕೊಠಡಿ ಮತ್ತು ಕಾರಿಡಾರ್‌ನಲ್ಲಿ ಸುಮಾರು ಐದಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳಿವೆ. ಆದರೆ ದೂರಿನ ಜತೆಗೆ ಪೂರಕವಾಗಿ ಯಾವುದೇ ದೃಶ್ಯಾವಳಿಯನ್ನು ಡಿಐಜಿ ಲಗತ್ತಿಸಿಲ್ಲ ಎಂದಿದ್ದಾರೆ.
ಒಂದು ವೇಳೆ ಘಟನೆ ನಡೆದಿದ್ದರೆ ಅಂದೇ ಆ ಕುರಿತು ವಿಚಾರಣೆ ನಡೆಸಲು ನನ್ನ ಮೇಲಾಧಿಕಾರಿಗಳಾಗಿದ್ದ ಐಎಸ್‌ಡಿಯ ಡಿಜಿಪಿ ಹಾಗೂ ಎಡಿಜಿಪಿರವರ ಗಮನಕ್ಕೆ ಡಿಐಜಿ ಯಾಕೆ ತಂದಿಲ್ಲ? ಇನ್ನು ಈ ಘಟನೆ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಪೊಲೀಸ್ ಇಲಾಖೆ ಮುಖ್ಯಸ್ಥರಾದ ಡಿಜಿ-ಐಜಿ ಅವರಿಗೆ ದೂರು ನೀಡದೆ ನೇರವಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಡಿಐಜಿ ದೂರು ನೀಡಿದ್ದಾರೆ. ಬಳಿಕ ಆ ದೂರಿನ ಪ್ರತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವ ಮೂಲಕ ನನ್ನ ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಡಿಐಜಿ ಹುದ್ದೆಗಿಂತ ಮೇಲಾಧಿಕಾರಿಯಾಗಿದ್ದೇನೆ. ನನಗೆ ಯಾವುದೇ ಕಡತ ಪರಿಶೀಲಿಸುವ ಹಾಗೂ ಆ ಕಡತಗಳನ್ನು ವಿಲೇವಾರಿ ಮಾಡುವಂತೆ ಡಿಐಜಿಗೆ ಕಳುಹಿಸುವ ಅಧಿಕಾರವಿದೆ. ಹೀಗಿದ್ದರೂ ನನ್ನ ಮೇಲೆ ಕಡತಗಳ ವಿಚಾರವಾಗಿ ಡಿಐಜಿ ತಲೆಬುಡವಿಲ್ಲದೆ ಆಪಾದಿಸಿದ್ದಾರೆ. ಅಲ್ಲದೆ ಡಿಜಿ-ಐಜಿಪಿ ಹಾಗೂ ಐಎಸ್‌ಡಿ ಡಿಜಿಪಿ ಕಡೆಗಣಿಸಿ ನೇರವಾಗಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ದೂರು ನೀಡುವ ಮೂಲಕ ಡಿಐಜಿ ಅಶಿಸ್ತು ತೋರಿದ್ದಾರೆ. ಕೂಡಲೇ ಈ ಬಗ್ಗೆ ಇಲಾಖಾ ವಿಚಾರಣೆ ನಡೆಸಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ಸಹ ಹಲವು ಹಿರಿಯ ಅಧಿಕಾರಿಗಳ ಮೇಲೂ ಆಧಾರ ರಹಿತ ಆರೋಪಗಳನ್ನು ವರ್ತಿಕಾ ಮಾಡಿದ್ದಾರೆ. ಅಲ್ಲದೆ ತಮ್ಮ ಪತಿ ಹಾಗೂ ಐಎಫ್‌ಎಸ್ ಅಧಿಕಾರಿ ನಿತಿನ್ ಯೆಲೋ ವಿರುದ್ಧ ಸಹ ವಿಧಾನಸೌಧ ಠಾಣೆಯಲ್ಲಿ ಸುಳ್ಳು ಎಫ್‌ಐಆರ್ ದಾಖಲಿಸಿದ್ದರು. ಹೀಗಾಗಿ ಬೇರೆಯವರ ಮೇಲೆ ಸುಳ್ಳು ಆರೋಪ ಮಾಡುವುದು ವರ್ತಿಕಾ ಕಟಿಯಾರ್‌ರವರಿಗೆ ಅಭ್ಯಾಸವಾಗಿದೆ. ಈ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಸುಳ್ಳು ಆರೋಪ ಮಾಡಿರುವ ಡಿಐಜಿ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸುವಂತೆ ಮುಖ್ಯಕಾರ್ಯದರ್ಶಿಗಳನ್ನು ರೂಪಾ ಒತ್ತಾಯಿಸಿದ್ದಾರೆ.