ಬೆಂಗಳೂರು : ‘ಡೆವಿಲ್’ ಚಿತ್ರದ ಚಿತ್ರೀಕರಣಕ್ಕಾಗಿ ಜು.11ರಿಂದ 30ರವರೆಗೆ ಥಾಯ್ಲೆಂಡ್‌ಗೆ ಹೋಗಲು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ನಟ ದರ್ಶನ್‌ಗೆ ಅನುಮತಿ ನೀಡಿ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಮಂಗಳವಾರ ಆದೇಶಿಸಿದೆ.
ಥಾಯ್ಲೆಂಡ್‌ಗೆ ತೆರಲು ಅನುಮತಿ ನೀಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯ ಈ ಆದೇಶ ಮಾಡಿದೆ.
ಡೆವಿಲ್ ಚಿತ್ರದ ಚಿತ್ರೀಕರಣಕ್ಕಾಗಿ ದರ್ಶನ್ ಜು.11ರಿಂದ 30ರವರೆಗೆ ಥಾಯ್ಲೆಂಡ್‌ಗೆ ಹೋಗಬಹುದು. ವಿದೇಶದಿಂದ ಭಾರತಕ್ಕೆ ಹಿಂದಿರುಗಿದ ನಂತರ, ಯಾವ ದೇಶಕ್ಕೆ ಯಾವಾಗ ಹೋಗಲಾಯಿತು? ಯಾವಾಗ ಭಾರತಕ್ಕೆ ವಾಪಸ್ ಬರಲಾಯಿತು? ಎಷ್ಟು ದಿನ ವಿದೇಶದಲ್ಲಿ ಇರಲಾಯಿತು? ಅಲ್ಲಿ ನಡೆಸಲಾದ ಕಾರ್ಯ ಚಟುವಟಿಕೆಗಳೇನು? ಎಂಬ ಬಗ್ಗೆ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಬೇಕು ಎಂದು ನ್ಯಾಯಾಲಯದ ಇದೇ ವೇಳೆ ಷರತ್ತು ವಿಧಿಸಿದೆ.
ಹಿನ್ನೆಲೆ: ಜುಲೈ 1ರಿಂದ 25ರ ನಡುವೆ ದುಬೈಗೆ ತೆರಳಿ ಡೆವಿಲ್ ಚಿತ್ರದ ಚಿತ್ರೀಕರಣ ನಡೆಸಲು ನಟ ದರ್ಶನ್‌ಗೆ ನ್ಯಾಯಾಲಯ ಈ ಹಿಂದೆ ಅನುಮತಿ ನೀಡಿತ್ತು. ಇಸ್ರೇಲ್ ಯುದ್ಧ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ದುಬೈಗೆ ಪ್ರಯಾಣಿಸುವುದು ಸೂಕ್ತವಲ್ಲ ಎಂದು ಚಿತ್ರ ತಂಡ ತೀರ್ಮಾನಿಸಿತ್ತು. ನಂತರ ಥಾಯ್‌ಲ್ಯಾಂಡ್ ನಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಲಾಗಿತ್ತು. ಹಾಗಾಗಿ, ಜೂ.11ರಿಂದ 30ರವರೆಗೆ ಥಾಯ್ ಲ್ಯಾಂಡ್‌ಗೆ ದರ್ಶನ್‌ಗೆ ತೆರಲು ಅನುಮತಿ ನೀಡುವಂತೆ ಕೋರಿ ಸೋಮವಾರ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.