ಪ್ರಧಾನಿ ಮೋದಿಗೆ ವೇದಿಕೆಯಲ್ಲೇ ಮನವಿ ಪತ್ರ ನೀಡಿ ಗಮನ ಸೆಳೆದ ಶಿವಕುಮಾರ್

Published : Aug 11, 2025, 06:46 AM IST
Modi 1

ಸಾರಾಂಶ

  ಪ್ರಧಾನಿ ಮೋದಿ ಅವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈಲಿನಲ್ಲಿ ಮತ್ತು ವೇದಿಕೆ ಮೇಲೆ ಅತ್ಯಂತ ಆತ್ಮೀಯತೆ, ಹತ್ತಿರದಿಂದ ಮಾತುಕತೆ ನಡೆಸಿ ಚರ್ಚೆ ನಡೆಸುವ ಮೂಲಕ ಗಮನ ಸೆಳೆದರು.

ಬೆಂಗಳೂರು : ಹಳದಿ ಮಾರ್ಗದ ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ನೀಡಲು ಆಗಮಿಸಿದ್ದ ಪ್ರಧಾನಿ ಮೋದಿ ಅವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈಲಿನಲ್ಲಿ ಮತ್ತು ವೇದಿಕೆ ಮೇಲೆ ಅತ್ಯಂತ ಆತ್ಮೀಯತೆ, ಹತ್ತಿರದಿಂದ ಮಾತುಕತೆ ನಡೆಸಿ ಚರ್ಚೆ ನಡೆಸುವ ಮೂಲಕ ಗಮನ ಸೆಳೆದರು.

ಮೆಟ್ರೋ ಸಂಚಾರಕ್ಕೆ ಚಾಲನೆ ನೀಡುವ ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿಗಳ ಅಕ್ಕಪಕ್ಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂತಿದ್ದರು. ಮುಖ್ಯಮಂತ್ರಿಗಳು ಭಾಷಣ ಮಾಡಲು ಹೊರಡುತ್ತಿದ್ದಂತೆ ಎದ್ದು ಬಂದು ಖಾಲಿಯಾದ ಕುರ್ಚಿಯಲ್ಲಿ ಕೂತ ಡಿ.ಕೆ.ಶಿವಕುಮಾರ್, ತಮ್ಮೊಂದಿಗೆ ತಂದಿದ್ದ ಪತ್ರಗಳನ್ನು ಮೋದಿಯವರ ಕೈಗಿಟ್ಟು ವಿವಿಧ ವಿಚಾರಗಳನ್ನು ಚರ್ಚಿಸಿದ್ದು ಗಮನ ಸೆಳೆಯಿತು.

ಪತ್ರದಲ್ಲಿನ ಪುಟಗಳನ್ನು ತಿರುವಿ ಹಾಕುತ್ತಾ ವಿವಿಧ ವಿಚಾರಗಳನ್ನು ಪ್ರಧಾನಿಗೆ ವಿವರಿಸಿದರು. ಅದೇ ಗಾಂಭೀರ್ಯದಲ್ಲಿ ಮೋದಿ ಕೂಡ ಡಿ.ಕೆ.ಶಿವಕುಮಾರ್ ಅವರಿಂದ ವಿವರಣೆಗಳನ್ನು ಕೇಳಿಸಿಕೊಂಡು ಪತ್ರಗಳನ್ನು ಸ್ವೀಕರಿಸಿ ತಮ್ಮ ಬಳಿ ಇಟ್ಟುಕೊಂಡರು. ಡಿ.ಕೆ.ಶಿವಕುಮಾರ್ ಅವರಿಂದ ವಿವರಣೆಗಳನ್ನು ಕೇಳಿಸಿಕೊಂಡು ಸರಿ ಎನ್ನುವ ರೀತಿಯಲ್ಲಿ ತಲೆಯಾಡಿಸಿದರು.

ಪ್ರಧಾನಿಯವರಿಗೆ ಪತ್ರ ನೀಡಿದ ಬಳಿಕ ಕೇಂದ್ರ ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಕಟ್ಟರ್ ಅವರಿಗೂ ಡಿ.ಕೆ.ಶಿವಕುಮಾರ್ ಪತ್ರ ಹಸ್ತಾಂತರಿಸಿದರು.

ಇದಕ್ಕೂ ಮುನ್ನ ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಪ್ರಧಾನಿ ಪಕ್ಕದಲ್ಲಿ ಕುಳಿತಿದ್ದ ಡಿ.ಕೆ.ಶಿವಕುಮಾರ್ ಅವರು ಕೆಲ ವಿಚಾರಗಳ ಕುರಿತು ಪ್ರಧಾನಿಯವರ ಗಮನ ಸೆಳೆಯಲು ಯತ್ನಿಸಿದರು. ಪರಸ್ಪರರ ನಡುವೆ ಹಾವಭಾವ, ಆಂಗಿಕ ಭಾಷೆ ವಿಶೇಷ ಎನಿಸಿತು. ರೈಲಿನಲ್ಲಿ ಮತ್ತು ನಿಲ್ದಾಣದಲ್ಲಿ ನಡೆದಾಡುವಾಗಲು ಡಿ.ಕೆ.ಶಿವಕುಮಾರ್ ಅವರು ಪ್ರಧಾನಿಯವರೊಂದಿಗೆ ಹೆಜ್ಜೆ ಹಾಕಿದರು.

ನಗೆಗಡಲಲ್ಲಿ ತೇಲಿದ ಪಿಎಂ, ಸಿಎಂ, ಡಿಸಿಎಂ!

ಆರ್‌.ವಿ.ರಸ್ತೆ ನಿಲ್ದಾಣದಿಂದ ಮೆಟ್ರೋ ಸವಾರಿ ಆರಂಭಿಸಿದಾಗ ಪ್ರಧಾನಿಯವರ ಅಕ್ಕಪಕ್ಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂತಿದ್ದರು. ಮಾತನಾಡುವ ಸಂದರ್ಭದಲ್ಲಿ ಪ್ರಧಾನಿ ಹಾರಿಸಿದ ನಗೆ ಚಟಾಕಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಮನೋಹರ್ ಲಾಲ್ ಕಟ್ಟರ್ ನಕ್ಕು ನಗೆಗಡಲಲ್ಲಿ ತೇಲಿದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

PREV
Read more Articles on

Recommended Stories

ಗೃಹಲಕ್ಷ್ಮೀಯರ ಬಾಕಿ ಹಣ ಬಿಡುಗಡೆಗೆ ಲಕ್ಷ್ಮೀ ತಥಾಸ್ತು : ಸುಳ್ಳಲ್ಲೇ 7 ಗಂಟೆ ರೈಲು ಓಡಿಸಿದ್ರು
ರೈಲಲ್ಲಿ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ