;Resize=(412,232))
ಬೆಂಗಳೂರು : ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ನನ್ನ ಮೇಲೆ ವಿಶ್ವಾಸವಿಟ್ಟು ಹೋರಾಟ ಕೈಬಿಡಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೆ ಮನವಿ ಮಾಡಿದ್ದಾರೆ.
ಮೂರು ದಿನಗಳ ಜಪಾನ್ ಪ್ರವಾಸಕ್ಕೆ ತೆರಳುವ ಮುನ್ನ ಶನಿವಾರ ಮಧ್ಯರಾತ್ರಿ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಈಗಾಗಲೇ ಆಶಾ ಕಾರ್ಯಕರ್ತೆಯರಿಗೆ ಮನವಿ ಮಾಡಿದ್ದೇನೆ. ಅವರಿಗೋಸ್ಕರ ಒಂದೂವರೆಗಂಟೆ ಸಮಯ ಕೊಟ್ಟು ವಾಸ್ತವಾಂಶಗಳನ್ನು ವಿವರಿಸಿದ್ದೇನೆ. ಆದರೂ, ರಾಜಕೀಯ ಒತ್ತಡಕ್ಕೆ ಮಣಿದು, ಒಂದು ಸಂಘಟನೆ ಒತ್ತಡಕ್ಕೆ ಮಣಿದು ಧರಣಿ ಮುಂದುವರೆಸಿದ್ದಾರೆ. ಇದರಿಂದ ನಮಗೂ ಕೆಲಸ ಮಾಡಲು ಕಷ್ಟವಾಗುತ್ತದೆ, ಅರ್ಥಮಾಡಿಕೊಳ್ಳಬೇಕು ಎಂದರು.
ಮತ್ತೊಮ್ಮೆ ನನ್ನೆಲ್ಲ ಸಹೋದರಿಯರಿಗೆ ಮನವಿ ಮಾಡುತ್ತಿದ್ದೇನೆ. ರಾಜಕೀಯ ಒತ್ತಡಕ್ಕೆ ಒಳಗಾಗಬೇಡಿ, ನನ್ನ ಮೇಲೆ ವಿಶ್ವಾಸವಿಟ್ಟು ಅಹೋರಾತ್ರಿ ಧರಣಿ ನಿಲ್ಲಿಸಿ. ಮುಂದಿನ ಸಚಿವ ಸಂಪುಟದಲ್ಲಿ ನಿಮ್ಮೆಲ್ಲಾ ಬೇಡಿಕೆಗಳು, ಸಮಸ್ಯೆಗಳ ಕುರಿತು ಚರ್ಚಿ ನಡೆಸಿ ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಇದು ಬರೀ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರ ಸಮಸ್ಯೆ ಮಾತ್ರವಲ್ಲ, ಇನ್ನು ಕೆಲ ಇಲಾಖೆಗಳಲ್ಲೂ ಈ ರೀತಿ ಕೆಲಸ ಮಾಡುತ್ತಿರುವವರಿಗೆ ಸಂಬಂಧಿಸಿದಂತೆಯೂ ಚರ್ಚಿಸಬೇಕಿದೆ. ಶಿಕ್ಷಣ ಇಲಾಖೆಯಲ್ಲಿ ಅತಿಥಿ ಶಿಕ್ಷಕರಿದ್ದಾರೆ, ಅತಿಥಿ ಉಪನ್ಯಾಸಕರಿದ್ದಾರೆ, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ನೌಕರರಿದ್ದಾರೆ. ಅವರೆಲ್ಲರ ಬಗ್ಗೆಯೂ ಚರ್ಚಿಸಬೇಕಿದೆ. ಹಾಗಾಗಿ ಆಶಾ ಕಾರ್ಯಕರ್ತೆಯರು ತಾಳ್ಮೆಯಿಂದ ಇರಬೇಕು. ಅವರೆಲ್ಲರಿಗೂ ಏನು ಸಹಾಯ ಮಾಡಬೇಕೋ ಖಂಡಿತಾ ಮಾಡುತ್ತೇವೆ. ಆದರೆ, ಇಷ್ಟೇ ಮಾಡುತ್ತೇವೆ ಎಂದು ಹೇಳುವುದಿಲ್ಲ ಎಂದರು.