;Resize=(412,232))
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ.2.25ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬದ ಉಡುಗೊರೆ ನೀಡಲಾಗಿದೆ.
2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಕಳೆದ ಮೇ ತಿಂಗಳಲ್ಲಿ ತುಟ್ಟಿ ಭತ್ಯೆಯನ್ನು ಶೇ.14.25ರಿಂದ ಶೇ.15.75ಕ್ಕೆ ಪರಿಷ್ಕರಣೆ ಮಾಡಲಾಗಿತ್ತು. ಇದೀಗ ಮತ್ತೆ ತುಟ್ಟಿ ಭತ್ಯೆ ಪರಿಷ್ಕರಣೆ ಮಾಡಲಾಗಿದೆ. 2026ರ ಜು.1ರಿಂದ ಅನ್ವಯವಾಗುವಂತೆ ಶೇ.15.75 ಇದ್ದಂತಹ ತುಟ್ಟಿಭತ್ಯೆಯನ್ನು ಶೇ.18ಕ್ಕೆ ಹೆಚ್ಚಿಸಿ ಆದೇಶಿಸಲಾಗಿದೆ.
ಹಾಲಿ ನೌಕರರಷ್ಟೇ ಅಲ್ಲದೆ ನಿವೃತ್ತ ಸರ್ಕಾರಿ ನೌಕರರಿಗೆ, ಕುಟುಂಬ ನಿವೃತ್ತಿ ವೇತನ ಪಡೆಯುವರರಿಗೂ ತುಟ್ಟಿ ಭತ್ಯೆ ಹೆಚ್ಚಳದ ಲಾಭ ದೊರೆಯಲಿದೆ. ಹಾಗೆಯೇ, ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಯ ನಿವೃತ್ತ ನೌಕರರಿಗೂ ತುಟ್ಟಿ ಭತ್ಯೆ ಹೆಚ್ಚಳ ಆದೇಶ ಅನ್ವಯಿಸಲಿದೆ. ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ಹಾಲಿ ನೌಕರರಿಗೆ ಮತ್ತು ಎನ್‌ಜೆಪಿಸಿ ವೇತನ ಶ್ರೇಣಿಗಳ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.