ಮಹಿಳಾ ಅಭಿವೃದ್ಧಿ ನಿಗಮಕ್ಕೆ ಗೃಹಲಕ್ಷ್ಮಿ ಹಣ ಜಮೆ: ನಿಖಿಲ್‌

Published : Nov 05, 2026, 12:16 PM IST
Nikhil Kumaraswamy

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಮೀಸಲಿರಿಸಿದ್ದ ಗೃಹಲಕ್ಷ್ಮಿ ಯೋಜನೆಯ 2,660.26 ಕೋಟಿ ರು. ಅನುದಾನವನ್ನು ರಾಜ್ಯ ಖಜಾನೆಯಿಂದ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಗಂಭೀರವಾಗಿ ಆಪಾದಿಸಿದ್ದಾರೆ.

ಬೆಂಗಳೂರು : ರಾಜ್ಯ ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಮೀಸಲಿರಿಸಿದ್ದ ಗೃಹಲಕ್ಷ್ಮಿ ಯೋಜನೆಯ 2,660.26 ಕೋಟಿ ರು. ಅನುದಾನವನ್ನು ರಾಜ್ಯ ಖಜಾನೆಯಿಂದ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಗಂಭೀರವಾಗಿ ಆಪಾದಿಸಿದ್ದಾರೆ. ಮುಂದೆ ಈ ಹಣ ಏನಾಯಿತು ಎಂಬುದೇ ಗೊತ್ತಿಲ್ಲ. ಈ ಬಗ್ಗೆ ಸ್ವತಂತ್ರ ತನಿಖೆಯಾಗಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೆಡೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಆಕ್ಷೇಪಣಾ ಹೇಳಿಕೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಕಂತುಗಳ ಪಾವತಿಸಲು ಆರ್ಥಿಕ ಮುಗ್ಗಟ್ಟು ಎದುರಾಗಿದೆ ಎಂದು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಮತ್ತೊಂದೆಡೆ ಗೃಹಲಕ್ಷ್ಮಿ ಯೋಜನೆಯ 2,660.26 ಕೋಟಿ ರು. ಅನುದಾನವನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಗೆ ವರ್ಗಾಯಿಸಿದೆ. ಇದು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ ಎಂದು ಹಣ ವರ್ಗಾವಣೆಗೆ ಸಂಬಂಧಿಸಿದ ಸರ್ಕಾರಿ ದಾಖಲೆಗಳನ್ನು ಪ್ರದರ್ಶಿಸಿದರು.

ಕಳೆದ 2025ರ ಫೆಬ್ರವರಿ ಮತ್ತು ಮಾರ್ಚ್‌ಗಳ ಗೃಹಲಕ್ಷ್ಮಿ ಯೋಜನೆಯ ಕಂತುಗಳಿಗೆ ಆರ್ಥಿಕ ಮುಗ್ಗಟ್ಟಿನಿಂದ ಅನುದಾನ ಬಿಡುಗಡೆ ಮಾಡಲಾಗಿಲ್ಲ ಎಂದು ಈ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದ ಆಕ್ಷೇಪಣಾ ಹೇಳಿಕೆಯಲ್ಲಿ ತಿಳಿಸಿದೆ. ಸುಮಾರು 1.26 ಕೋಟಿ ಮಹಿಳೆಯರಿಗೆ ಎರಡು ತಿಂಗಳ ಕಂತು ಸುಮಾರು 5 ಸಾವಿರ ಕೋಟಿ ರು. ಪಾವತಿ ಬಾಕಿ ಇದೆ. ಮಹಿಳೆಯರಿಗೆ ಹಣ ನೀಡಲಾಗದ ಮಟ್ಟಕ್ಕೆ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆಯೇ ಎಂದು ಪ್ರಶ್ನಿಸಿದರು.

2025ರ ಮಾರ್ಚ್ 31ರಂದು ಗೃಹಲಕ್ಷ್ಮಿ ಯೋಜನೆಯ 2,660.26 ಕೋಟಿ

2025ರ ಮಾರ್ಚ್ 31ರಂದು ಗೃಹಲಕ್ಷ್ಮಿ ಯೋಜನೆಯ 2,660.26 ಕೋಟಿ ಅನುದಾನವನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸರ್ಕಾರ ಆದೇಶಿಸಿದೆ. ಅದೇ ದಿನ ಆನೇಕಲ್ ತಾಲೂಕು ಪಂಚಾಯಿತಿ ಮೂಲಕ ಹೆಚ್ಚುವರಿ 1,111.03 ಕೋಟಿ ರು. ವರ್ಗಾವಣೆಗೆ ಪ್ರತ್ಯೇಕ ಅನುಮೋದನೆ ನೀಡಲಾಗಿದೆ ಎಂದು ನಿಖಿಲ್‌ ಮಾಹಿತಿ ನೀಡಿದರು.

ಒಂದೆಡೆ ಮಹಿಳೆಯರಿಗೆ ಹಣ ನೀಡಲು ಆರ್ಥಿಕ ಮುಗ್ಗಟ್ಟು ಎನ್ನುತ್ತಾರೆ. ಮತ್ತೊಂದೆಡೆ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ಖಜಾನೆಯಿಂದ ನಿಗಮದ ಖಾತೆಗೆ ವರ್ಗಾಯಿಸುತ್ತಾರೆ. ಈ ಹಣ ಎಲ್ಲಿದೆ? ಎಷ್ಟು ಹಣ ಫಲಾನುಭವಿಗಳಿಗೆ ತಲುಪಿದೆ? ಉಳಿದ ಹಣದ ಲೆಕ್ಕವೇನು? ಈ ಹಣವನ್ನು ಹಿರಿಯೂರು ಉಪಚುನಾವಣೆಗೆ ಬಳಸುತ್ತಾರೋ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಾಕಿ ಪಾವತಿ ವಿಳಂಬಕ್ಕೆ ಅಸಲಿ ಕಾರಣವೇನು?

ಗೃಹಲಕ್ಷ್ಮಿ ಕಂತುಗಳ ಪಾವತಿ ವಿಳಂಬಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನೀಡಿದ್ದ ಮಾಹಿತಿಯಲ್ಲಿನ ತಪ್ಪನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಂತರ ಒಪ್ಪಿಕೊಂಡಿದ್ದರು. ಆದರೆ ನ್ಯಾಯಾಲಯಕ್ಕೆ ಸಲ್ಲಿಸಿದ ಆಕ್ಷೇಪಣಾ ಹೇಳಿಕೆಯಲ್ಲಿ ಸರ್ಕಾರ ಆರ್ಥಿಕ ಮುಗ್ಗಟ್ಟನ್ನು ಕಾರಣವಾಗಿ ಉಲ್ಲೇಖಿಸಿದೆ. ಹಾಗಾದರೆ ಪಾವತಿ ವಿಳಂಬಕ್ಕೆ ನಿಜವಾದ ಕಾರಣವೇನು? ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸರ್ಕಾರ ಏನನ್ನು ಮರೆಮಾಚುತ್ತಿದೆ ಎಂದು ಕೇಳಿದರು.

ಗೃಹಲಕ್ಷ್ಮಿ ಅನುದಾನ ವರ್ಗಾವಣೆಯ ಸಂಪೂರ್ಣ ಲೆಕ್ಕವನ್ನು ಬಹಿರಂಗಪಡಿಸಿ, ಸ್ವತಂತ್ರ ತನಿಖೆ ನಡೆಸಬೇಕು. ಅರ್ಹ ಮಹಿಳೆಯರಿಗೆ ಬಾಕಿ ಇರುವ ಕಂತುಗಳನ್ನು ತಕ್ಷಣ ಪಾವತಿಸಬೇಕು. ಮಹಿಳೆಯರಿಗೆ ನ್ಯಾಯ ಸಿಗುವವರೆಗೂ ಜೆಡಿಎಸ್ ಹೋರಾಟ ಮುಂದುವರಿಸಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಎಚ್ಚರಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಮೈಸೂರು ಅರಮನೆ ಸರ್ಕಾರದ್ದಲ್ಲ, ಖಾಸಗಿ ಆಸ್ತಿ: ರಾಜವಂಶಸ್ಥೆ ಸ್ಪಷ್ಟನೆ
ಸರ್ಕಾರಿ ಶಾಲೆ ದತ್ತು, ಅಭಿವೃದ್ಧಿಗೆ ನೆರವಾಗಿ: ಸಿಎಂ