;Resize=(412,232))
ಮೈಸೂರು : ಮೈಸೂರಿನ ವಿಶ್ವಪ್ರಸಿದ್ಧ ಅರಮನೆಯ ಆಸ್ತಿ, ಅಂಬಾರಿಯ ವಿಷಯಕ್ಕೆ ಸಂಬಂಧಿಸಿದ ವಿವಾದ ಭುಗಿಲೆದ್ದಿರುವಾಗಲೇ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಬುಧವಾರ ಅರಮನೆ ರಾಜವಂಶಸ್ಥರ ಆಸ್ತಿ ಎಂಬುದಕ್ಕೆ ತಮ್ಮ ಬಳಿ ಇರುವ ಪುರಾವೆಗಳನ್ನು ಬಿಡುಗಡೆಗೊಳಿಸಿದರು.
ಅರಮನೆಯ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕಾರ್ಯದರ್ಶಿ ವಿ.ಪಿ. ಮೆನನ್ ಮತ್ತು ರಾಜ್ಯ ಸರ್ಕಾರದ ಕಾರ್ಯದರ್ಶಿ ಕೆ. ಶ್ರೀನಿವಾಸನ್ ಅವರು 1951 ರಲ್ಲಿ ಅರಮನೆ ಮತ್ತು ರಾಜವಂಶಸ್ಥರ ಎಲ್ಲಾ ಆಸ್ತಿಯು ಖಾಸಗಿ ಸ್ವತ್ತು ಎಂದು ಘೋಷಿಸಿರುವ ಪತ್ರ ಹಾಗೂ ನಿರ್ವಹಣೆಗೆ ನೀಡಿದ ಪತ್ರದ ಆಧಾರದ ಮೇಲೆ 1998 ರಲ್ಲಿ ಸ್ವಾಧೀನಕ್ಕೆ ಪಡೆದಿರುವುದು ಊರ್ಜಿತವಲ್ಲ ಎಂಬ ಹೈಕೋರ್ಟ್‌ತೀರ್ಪನ್ನು ಉಲ್ಲೇಖಿಸಿದರು.
ಅಂಬಾರಿ ಪಡೆಯಲು ಸರ್ಕಾರ ನೀಡುವುದು ಬಾಡಿಗೆ ಅಲ್ಲ, ರಾಜಧನ (ರಾಯಲ್ಟಿ). ಕೋಟ್ಯಂತರ ರು. ಬೆಲೆ ಬಾಳುವ ಅಂಬಾರಿಯನ್ನು ಕೊಡುತ್ತೇವೆ. ಅದನ್ನು ಸಾರ್ವಜನಿಕವಾಗಿ ಅವರು ಪ್ರದರ್ಶಿಸುತ್ತಾರೆ, ಭಾವಚಿತ್ರಗಳಲ್ಲಿ, ಜಾಹೀರಾತುಗಳಲ್ಲಿ ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಅದಕ್ಕೆ ಪ್ರತಿಯಾಗಿ ನೀಡುವ ರಾಯಲ್ಟಿ ಅದು. ನಾವು ಯಾವುದೇ ತೊಂದರೆ ಆಗದಿರಲಿ ಎಂದು ಆನೆ ಮಾವುತರು, ಅಂಬಾರಿ ಮತ್ತು ಸಾರ್ವಜನಿಕರ ಹೆಸರಿನಲ್ಲಿ ವಿಮೆ ಮಾಡಿಸುತ್ತೇವೆ ಎಂದು ಪರೋಕ್ಷವಾಗಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ಸರ್ಕಾರದ ಹಣದಿಂದ ಅರಮನೆ ನಿರ್ಮಿಸಿಲ್ಲ. ಇಷ್ಟಕ್ಕೂ ಅದು ಖಾಸಗಿ ಸ್ವತ್ತು. 1971ರಲ್ಲಿ ರಾಜತ್ವ ರದ್ದಾದ ಮೇಲೆ ಈ ಸಮಸ್ಯೆ ಆರಂಭವಾಯಿತು. 1947ರಲ್ಲಿ ಸ್ವಾತಂತ್ರ್ಯ ನಂತರ ಕೇಂದ್ರ ಸರ್ಕಾರ ಎಲ್ಲಾ ರಾಜವಂಶಸ್ಥರಿಗೆ ನಿಮ್ಮ ಆಸ್ತಿಯ ಪಟ್ಟಿ ನೀಡುವಂತೆ ಒಂದು ಪತ್ರ ಬರೆಯಿತು. ಆಗ ರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು, ಮೈಸೂರು ಅರಮನೆ, ಬೆಂಗಳೂರು ಅರಮನೆ ಮತ್ತು ಉಳಿಕೆ ಜಾಗದಲ್ಲಿನ ಎಲ್ಲಾ ಚರ ಮತ್ತು ಸ್ಥಿರಾಸ್ತಿಯ ಕುರಿತು ಒಂದು ಪಟ್ಟಿ ನೀಡಿದರು.
1951ರಲ್ಲಿ ಕೇಂದ್ರ ಸರ್ಕಾರದ ಕಾರ್ಯದರ್ಶಿ ವಿ.ಪಿ. ಮೆನನ್ ಮತ್ತು ರಾಜ್ಯ ಸರ್ಕಾರದ ಕಾರ್ಯದರ್ಶಿ ಕೆ. ಶ್ರೀನಿವಾಸನ್ ಅವರು ಇಬ್ಬರೂ ಸಹಿ ಹಾಕಿ ನಾವು ನೀಡಿದ ಪಟ್ಟಿಗೆ ಇದು ಖಾಸಗಿ ಸ್ವತ್ತು ಎಂದು ಪತ್ರ ನೀಡಿದ್ದಾರೆ ಎಂದ ಅವರ ಆ ಪತ್ರವನ್ನು ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಿದರು.