ಬೆಂಗಳೂರು : ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಸ್ಥಿರೀಕರಣ ಸಮಿತಿ ಎಂಎಸ್‌ಪಿ ಯೋಜನೆಯಡಿ 2025-26ನೇ ಸಾಲಿನಲ್ಲಿ ರೈತರು ಬೆಳೆದ 14 ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಡಿ(ಎಂಎಸ್‌ಪಿ) ಖರೀದಿಸಲು ತೀರ್ಮಾನಿಸಿದೆ. ಅದರಂತೆ ಉತ್ಪನ್ನಗಳ ಖರೀದಿ ಸಂಬಂಧ ನೋಂದಣಿ ಪ್ರಕ್ರಿಯೆಗೆ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಬೆಳೆ ಕಟಾವು ಮಾಡಿದ ತಕ್ಷಣವೇ ಖರೀದಿ ಪ್ರಕ್ರಿಯೆ ನಡೆಸುವುದರಿಂದ ರೈತರ ಬೆಳೆಗಳಿಗೆ ಮಾರುಕಟ್ಟೆ ಖಾತರಿ ಆರಂಭದಲ್ಲೇ ಸಿಗಲಿದೆ. ರಾಜ್ಯದ ಸುಮಾರು 7 ಲಕ್ಷಕ್ಕೂ ಅಧಿಕ ರೈತರಿಂದ 15 ಲಕ್ಷ ಮೆಟ್ರಿಕ್ ಟನ್ ಉತ್ಪನ್ನಗಳನ್ನು ಸುಮಾರು ₹8 ಸಾವಿರ ಕೋಟಿ ವೆಚ್ಚದಲ್ಲಿ ಖರೀದಿಸಲು ಉದ್ದೇಶಿಸಲಾಗಿದೆ. ಇದರಿಂದ ರಾಜ್ಯದ ರೈತರ ಹಾಗೂ ಗ್ರಾಮೀಣ ಆರ್ಥಿಕತೆ ಸದೃಢವಾಗಲಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಉದ್ದೇಶಿಸಲಾಗಿದೆ. ಪ್ರತಿ ಕ್ವಿಂಟಲ್‌ಗೆ ₹2,369 ನೀಡಿ 3 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀಸುತ್ತೇವೆ. ಸಿರಿಧಾನ್ಯಗಳಾದ ನವಣೆ, ಸಾಮೆ, ಹಾರಕ ಮೊದಲಾದ ಧಾನ್ಯಗಳನ್ನು ಪ್ರತಿ ಕ್ವಿಂಟಲ್‌ಗೆ 4,886 ಎಂಎಸ್‌ಪಿ ದರ ಹಾಗೂ ರಾಜ್ಯ ಸರ್ಕಾರದ 114 ರು. ಉತ್ತೇಜನ ಮೊತ್ತ ಸೇರಿ ಒಟ್ಟು 5 ಸಾವಿರ ರು.ಗೆ ಯಾವುದೇ ಮಿತಿ ಇಲ್ಲದೇ ಖರೀದಿಸಲಾಗುವುದು ಎಂದು ತಿಳಿಸಿದರು.
6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ:
ಪ್ರಸಕ್ತ ಸಾಲಿನಲ್ಲಿ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಉದ್ದೇಶಿಸಲಾಗಿದೆ. ಪ್ರತಿ ರೈತರಿಂದ ಎಕರೆಗೆ 10 ಕ್ವಿಂಟಲ್, ಗರಿಷ್ಠ 50 ಕ್ವಿಂಟಲ್ ರಾಗಿಯನ್ನು ಎಂಎಸ್‌ಪಿ ದರ ₹4,886 ಗೆ ಖರೀದಿಸಲಾಗುವುದು. 2025ರ ಸೆಪ್ಟೆಂಬರ್‌ನಿಂದ 2026ರ ಮಾರ್ಚ್ ವರೆಗೆ ನೋಂದಣಿಗೆ ಅವಕಾಶ ನೀಡಿ, ಜನವರಿ 2026ರಿಂದ ಮಾರ್ಚ್ ವರೆಗೆ ಖರೀದಿಸಲು ನಿರ್ಣಯಿಸಲಾಗಿದೆ. ಇದರಿಂದ ಕರ್ನಾಟಕದ ರಾಗಿ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಮೂರು ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿ:
ಈ ಬಾರಿ 3 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಪ್ರತಿ ಕ್ವಿಂಟಲ್‌ಗೆ 2,369 ರು.ಗೆ ಖರೀದಿಸಲಾಗುವುದು. ಪ್ರತಿ ರೈತರಿಂದ ಎಕರೆಗೆ 25 ಕ್ವಿಂಟಲ್‌ನಂತೆ ಗರಿಷ್ಠ ಮಿತಿ ಇಲ್ಲದೆ 2025ರ ಸೆಪ್ಟೆಂಬರ್-ನವೆಂಬರ್‌ವರೆಗೆ ನೋಂದಣಿಗೆ ಅವಕಾಶ ನೀಡಲಾಗುವುದು. 2025ರ ನವೆಂಬರ್‌ನಿಂದ 2026ರ ಜನವರಿ ವರೆಗೆ ಖರೀದಿ ಸಲಾಗುವುದು. ಅಂತೆಯೇ 3 ಲಕ್ಷ ಮೆಟ್ರಿಕ್ ಟನ್ ಬಿಳಿ ಜೋಳವನ್ನು ಪ್ರತಿ ಕ್ವಿಂಟಲ್‌ಗೆ 3,669 ರು.ನಂತೆ ಪ್ರತಿ ಎಕರೆಗೆ 15 ಕ್ವಿಂಟಲ್‌ನಂತೆ ಗರಿಷ್ಠ 150 ಕ್ವಿಂಟಲ್ ಖರೀದಿಸಲಾಗುವುದು. ಇದಕ್ಕೆ 2025ರ ಅಕ್ಟೋಬರ್‌ನಿಂದ 2026ರ ಮಾರ್ಚ್ ವರೆಗೆ ನೋಂದಣಿಗೆ ಅವಕಾಶವಿದೆ. 2025ರ ಡಿಸೆಂಬರ್‌ನಿಂದ 2026ರ ಮಾರ್ಚ್‌ವರೆಗೆ ಖರೀದಿಸಲಾಗುವುದು ಎಂದರು.
ಭವಿಷ್ಯದಲ್ಲಿ ರಾಗಿ ಬ್ರ್ಯಾಂಡ್ ಮಾಡಿ ಮಾರಾಟ:
ಈ ಇಡೀ ದೇಶದಲ್ಲೇ ಅತಿಹೆಚ್ಚು ರಾಗಿ ಬೆಳೆಯುವುದು ಕರ್ನಾಟಕ ರಾಜ್ಯದಲ್ಲಿ ಮಾತ್ರ. ಪ್ರತಿ ವರ್ಷ ರಾಜ್ಯದಲ್ಲಿ 13 ಲಕ್ಷ ಮೆಟ್ರಿಕ್ ಟನ್ ರಾಗಿ ಉತ್ಪಾದಿಸಲಾಗುತ್ತಿದೆ. ಅಂತೆಯೆ 63 ಲಕ್ಷ ಮೆಟ್ರಿಕ್ ಟನ್ ಭತ್ತ, 8 ಲಕ್ಷ ಮೆಟ್ರಿಕ್ ಟನ್ ಜೋಳ ಬೆಳೆಯಲಾಗುತ್ತಿದೆ. ಎಂಎಸ್‌ಪಿ ದರದಲ್ಲಿ ಖರೀದಿಸುವ ಬಹುತೇಕ ರಾಗಿ ಪಡಿತರ ವಿತರಣೆಗೆ ಹೋಗುತ್ತಿದೆ. ಹೊರರಾಜ್ಯಗಳಲ್ಲಿಯೂ ರಾಗಿಗೆ ಬೇಡಿಕೆ ಇರುವುದರಿಂದ ಎಂಎಸ್‌ಪಿ ದರದಲ್ಲಿ ಖರೀದಿಸುವ ರಾಗಿಯನ್ನು ಮುಂದಿನ ದಿನಗಳಲ್ಲಿ ಒಂದು ಕೆ.ಜಿ., ಅರ್ಧ ಕೆ.ಜಿ. ಪ್ಯಾಕ್ ಮಾಡಿ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡುವ ಚಿಂತನೆ ಇದೆ ಎಂದು ಸಚಿವರು ಹೇಳಿದರು.
ಮೊದಲ ಬಾರಿಗೆ ಸಿರಿಧಾನ್ಯ ಖರೀದಿ:
ಈ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಸಿರಿಧಾನ್ಯಗಳಾದ ನವಣೆ, ಸಾಮೆ, ಹಾರಕ ಮೊದಲಾದ ಧಾನ್ಯಗಳನ್ನು ಪ್ರತಿ ಕ್ವಿಂಟಲ್‌ಗೆ 4,886 ಎಂಎಸ್‌ಪಿ ದರ ಹಾಗೂ ರಾಜ್ಯ ಸರ್ಕಾರದ 114 ರು. ಉತ್ತೇಜನ ಮೊತ್ತ ಸೇರಿ ಒಟ್ಟು 5 ಸಾವಿರ ರು.ಗೆ ಯಾವುದೇ ಮಿತಿ ಇಲ್ಲದೇ ಖರೀದಿಸಲಾಗುವುದು ಎಂದು ಸಚಿವರು ಹೇಳಿದರು.
2024-25ನೇ ಸಾಲು ಮತ್ತು 2025-26ನೇ ಸಾಲಿನ ಎಂಎಸ್‌ಪಿ ದರ ಮತ್ತು ದರ ಹೆಚ್ಚಳದ ಮಾಹಿತಿ:
ಬೆಳೆ 2024-25( ಪ್ರತಿ ಕ್ವಿಂಟಲ್‌ಗೆ ರು.) 2025-26(ಪ್ರತಿ ಕ್ವಿಂಟಲ್‌ಗೆ ರು.) ಹೆಚ್ಚಳ( ಪ್ರತಿ ಕ್ವಿಂಟಲ್‌ಗೆ ರು.)
ಭತ್ತ(ಸಾಮಾನ್ಯ) 2,300 2,369 69
ಭತ್ತ(ಗ್ರೇಡ್ ಎ) 2,320 2,389 69
ಜೋಳ(ಹೈಬ್ರಿಡ್) 3,371 3,699 328
ಜೋಳ(ಮಾಲ್ದಂಡಿ) 3,371 3,749 378
ಸಜ್ಜೆ 2,625 2,755 130
ಮೆಕ್ಕೆಜೋಳ 2,225 2,400 175
ರಾಗಿ 4,290 4,886 596
ತೊಗರಿ 7,550 8,000 450
ಹೆಸರು 8,682 8,768 86
ಉದ್ದು 7,400 7,800 400
ಶೇಂಗಾ 6,783 7,263 480
ಸೂರ್ಯಕಾಂತಿ 7,280 7,721 441
ಸೋಯಾಬೀನ್ 4,892 5,328 436
ಎಳ್ಳು 9,267 9,846 579
ಹುಚ್ಚೆಳ್ಳು 8,717 9,537 820
ಹತ್ತಿ(ಮಧ್ಯಮ ಎಳೆ) 7,121 7,710 589
ಹತ್ತಿ(ಉದ್ದನೆ ಎಳೆ) 7,521 8,110 589