ವಿಧಾನಸಭೆ : ಕೆಎಂಎಫ್ ಹಾಲು ಒಕ್ಕೂಟಗಳ ಪೈಕಿ ಉತ್ತರ ಕರ್ನಾಟಕ ಭಾಗದ ಒಕ್ಕೂಟಗಳಲ್ಲಿ ರೈತರಿಗೆ ಪಾವತಿಸುವ ಹಾಲು ಖರೀದಿ ದರ ಅತ್ಯಂತ ಕಡಿಮೆ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಈ ತಾರತಮ್ಯ ಸರಿಪಡಿಸಿ ರಾಜ್ಯಾದ್ಯಂತ ಏಕರೂಪದ ದರ ನಿಗದಿಪಡಿಸಬೇಕು ಎಂಬ ಒತ್ತಾಯ ವಿಧಾನಸಭೆಯಲ್ಲಿ ವ್ಯಕ್ತವಾಯಿತು.
ಈ ಬಗ್ಗೆ ಉತ್ತರ ನೀಡಿದ ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್, ‘ಆಯಾ ಜಿಲ್ಲಾ ಹಾಲು ಒಕ್ಕೂಟಗಳಿಗೆ ದರ ನಿಗದಿ ಅಧಿಕಾರ ಇದೆ. ಅದರಂತೆ ಅವರು ನಿಗದಿ ಮಾಡಿರುತ್ತಾರೆ. ಹೀಗಾಗಿ ದಕ್ಷಿಣ ಕನ್ನಡದ ರೈತರಿಗೆ ಹೆಚ್ಚು ಹಣ ನೀಡುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಕಡಿಮೆ ಇದೆ. ಅದನ್ನು ಬದಲಿಸುವುದು ಸಾಧ್ಯವಿಲ್ಲ. ಇನ್ನು ಮುಂದೆ ಹಾಲಿನ ದರ ಪರಿಷ್ಕರಣೆ ವೇಳೆ ಸರ್ಕಾರದ ಅನುಮೋದನೆ ಪಡೆಯಬೇಕು’ ಎಂಬ ನಿಯಮ ಮಾಡುವುದಾಗಿ ತಿಳಿಸಿದರು.
ಇದಕ್ಕೂ ಮೊದಲು ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಸಿದ ಬಿಜೆಪಿ ಸದಸ್ಯ ಅರವಿಂದ ಬೆಲ್ಲದ್, ಎರಡು ಬಾರಿ ಹಾಲಿನ ದರ ಹೆಚ್ಚಳ ಮಾಡಿದ್ದು ಪ್ರತಿ ಲೀಟರ್‌ಗೆ 47 ರು.ಗೆ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ರೈತರಿಂದ ಖರೀದಿ ಮಾಡುವ ವೇಳೆ ದಕ್ಷಿಣ ಕನ್ನಡ ರೈತರಿಗೆ ಪ್ರತಿ ಲೀಟರ್‌ಗೆ 40 ರು. ನೀಡುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ 33 ರು. ಮಾತ್ರ ನೀಡಲಾಗುತ್ತಿದೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಮೇವಿನ ಅಭಾವ ಹೆಚ್ಚಿದೆ. ಅವರು ಕಷ್ಟ ಪಟ್ಟು ಪಶು ಸಾಕಣಿಕೆ ಮಾಡುತ್ತಾರೆ. ದಕ್ಷಿಣ ಕನ್ನಡ ಭಾಗದಲ್ಲಿ ಹುಲ್ಲು ಲಭ್ಯವಿದೆ. ಅಲ್ಲಿ ಹೆಚ್ಚಿನ ದರ ಯಾಕೆ ನೀಡುತ್ತೀರಿ ಎಂದು ಪ್ರಶ್ನಿಸಿದರು.
ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಹಾಗೂ ಮತ್ತಿತರರೂ ದನಿಗೂಡಿಸಿದರು. ಈ ವೇಳೆ ಮಾತನಾಡಿದ ಸಚಿವ ಕೆ.ವೆಂಕಟೇಶ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಿಮೆ ಹಾಲು ಉತ್ಪಾದನೆಯಾಗುತ್ತದೆ. ಜತೆಗೆ ಅಲ್ಲಿ ಉತ್ಪಾದನೆಯಾಗುವ ಹಾಲು ಅಲ್ಲೇ ಬಳಕೆಯಾಗುತ್ತಿದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಉತ್ಪಾದನೆಯಾಗುವ ಅರ್ಧದಷ್ಟು ಹಾಲೂ ಅಲ್ಲಿ ಬಳಕೆಯಾಗುವುದಿಲ್ಲ. ಹೀಗಾಗಿ ಉಪ ಉತ್ಪನ್ನಗಳನ್ನು ತಯಾರಿಸಬೇಕಾಗುತ್ತದೆ. ಇದನ್ನೆಲ್ಲ ದೃಷ್ಟಿಯಲ್ಲಿಟ್ಟುಕೊಂಡು ಆಯಾ ಒಕ್ಕೂಟಗಳೇ ದರ ನಿಗದಿ ಮಾಡುತ್ತವೆ. ಹೀಗಾಗಿಯೇ ದರಗಳಲ್ಲಿ ವ್ಯತ್ಯಾಸವಿದೆ ಎಂದರು.