ಕೆಂಪೇಗೌಡ ಜಯಂತಿಯಂದೇ ಅಭಿವೃದ್ಧಿ ಪ್ರಾಧಿಕಾರ ಕಟ್ಟಡಕ್ಕೆ ಶಂಕು : ಡಿಕೆಶಿ

Published : Jun 03, 2025, 09:53 AM IST
Karnataka Deputy Chief Minister DK Shivakumar (Photo/ANI)

ಸಾರಾಂಶ

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಕಟ್ಟಡಕ್ಕಾಗಿ ಸುಮ್ಮನಹಳ್ಳಿ ಬಳಿ ಜಾಗ ನಿಗದಿ ಮಾಡಿದ್ದು, ಜೂ. 27ರ ಕೆಂಪೇಗೌಡ ಜಯಂತಿ ದಿನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತೇವೆ.

 ಬೆಂಗಳೂರು : ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಕಟ್ಟಡಕ್ಕಾಗಿ ಸುಮ್ಮನಹಳ್ಳಿ ಬಳಿ ಜಾಗ ನಿಗದಿ ಮಾಡಿದ್ದು, ಜೂ. 27ರ ಕೆಂಪೇಗೌಡ ಜಯಂತಿ ದಿನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತೇವೆ. ಜತೆಗೆ ಎಲ್ಲಾ ರಂಗದ ಸಾಧಕರಿಗೆ ರಾಜ್ಯಮಟ್ಟದ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಕೆಂಪೇಗೌಡ ಜಯಂತಿ ಆಚರಣೆ ಸಂಬಂಧ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ. ಶಿವಕುಮಾರ್ ಅವರು ಪೂರ್ವಭಾವಿ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರವು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಕಟ್ಟಡಕ್ಕಾಗಿ ಸುಮ್ಮನಹಳ್ಳಿ ಬಳಿ 5 ಎಕರೆ ಜಾಗವನ್ನು ನಿಗದಿ ಮಾಡಿದ್ದು, ಜೂನ್ 27ರಂದು ಕೆಂಪೇಗೌಡ ಜಯಂತಿ ಅಂಗವಾಗಿ ಅಂದೇ ಭೂಮಿ ಪೂಜೆ ಮಾಡಲು ತೀರ್ಮಾನಿಸಿದ್ದೇವೆ. ಈ ಕಟ್ಟಡದ ವಾಸ್ತುಶಿಲ್ಪಕ್ಕೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ಕೆಂಪೇಗೌಡ ರಾಜ್ಯಮಟ್ಟದ ಪ್ರಶಸ್ತಿ:

ಜೂ. 27ರಂದು ಸಂಜೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾಡಲಾಗುತ್ತದೆ. ಹಿಂದಿನಂತೆ ಇದನ್ನು ವಾರ್ಡ್ ಮಟ್ಟಕ್ಕೆ ಸೀಮಿತಗೊಳಿಸುವುದು ಬೇಡ. ರಾಜ್ಯೋತ್ಸವ ಪ್ರಶಸ್ತಿಯಂತೆ ಎಲ್ಲಾ ವರ್ಗಕ್ಕೆ ಕ್ರೀಡೆ, ಸಾಹಿತ್ಯ, ಕಲೆ, ಪತ್ರಿಕೋದ್ಯಮ, ಕೈಗಾರಿಕೆ, ಪರಿಸರ ಸಂರಕ್ಷಣೆ ಸೇರಿ ಎಲ್ಲಾ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಲು ಚಿಂತನೆ ಮಾಡುತ್ತಿದ್ದೇವೆ. ಇದಕ್ಕೆ ಮಾರ್ಗಸೂಚಿ ನಿಗದಿ ಮಾಡಿ ಸಮಿತಿ ರಚಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ದಸರಾಗೆ ಪ್ರಾಧಿಕಾರದಿಂದ ಸ್ತಬ್ಧಚಿತ್ರ:

ಪ್ರತಿ ವರ್ಷದಂತೆ ಕೆಂಪೇಗೌಡ ಜಯಂತಿ ದಿನ ಕೆಂಪೇಗೌಡರ ವಿವಿಧ ಗೋಪುರಗಳಿಂದ ಜ್ಯೋತಿ ಬರಲಿದ್ದು, ಪ್ರತಿ ಗೋಪುರಕ್ಕೂ ಒಬ್ಬರು ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ. 27ರಂದು ಬೆಳಗ್ಗೆ ಬಾಬು ಜಗಜೀವನ್ ರಾಮ್ ಅವರ ಭವನದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಆಚರಿಸುತ್ತೇವೆ ಎಂದು ಹೇಳಿದರು.

ಇನ್ನು ಪ್ರಸ್ತುತ ವರ್ಷದಿಂದ ಕೆಂಪೇಗೌಡ ಪ್ರಾಧಿಕಾರ ವತಿಯಿಂದ ಮೈಸೂರು ದಸರಕ್ಕೆ ಪ್ರತಿ ವರ್ಷ ಒಂದು ಸ್ತಬ್ಧಚಿತ್ರ ಕಳಿಸಲು ತೀರ್ಮಾನಿಸಲಾಗಿದೆ. ಜತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಂಪೇಗೌಡ ಜಯಂತಿ ಆಚರಿಸಲು ಆರ್ಥಿಕ ನೆರವು ನೀಡುತ್ತೇವೆ. ಕೆಂಪೇಗೌಡರ ಇತಿಹಾಸದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಸ್ಪರ್ಧೆಗಳನ್ನು ಆಯೋಜಿಸುತ್ತೇವೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.

ಶಾಲಾ ಪಠ್ಯದಲ್ಲಿ ಕೆಂಪೇಗೌಡರ ಪಾಠ:

ಶಾಲಾ ಪಠ್ಯಕ್ರಮದಲ್ಲಿ ಕೆಂಪೇಗೌಡರ ಕುರಿತ ಪಾಠ ಸೇರಿಸುವ ಬಗ್ಗೆ ಪ್ರಾಥಮಿಕ ಶಿಕ್ಷಣ ಸಚಿವರ ಜತೆ ಚರ್ಚೆ ಮಾಡುತ್ತೇನೆ. ಇನ್ನು ವಿಮಾನ ನಿಲ್ದಾಣ ಬಳಿಯ ಕೆಂಪೇಗೌಡ ಪ್ರತಿಮೆ ಸುತ್ತಮುತ್ತಲ ಪ್ರದೇಶ ಅಭಿವೃದ್ಧಿ ಮಾಡಲು ಸಚಿವ ಕೃಷ್ಣ ಭೈರೇಗೌಡ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಉಪಮುಖ್ಯಮಂತ್ರಿ ಅವರು ತಿಳಿಸಿದರು.

ಕೆಂಪೇಗೌಡ ಪ್ರತಿಮೆ ಬಳಿ ಥೀಮ್ ಪಾರ್ಕ್ ಮಾಡಲಾಗುವುದೇ ಎಂಬ ಪ್ರಶ್ನೆಗೆ, ಬಿಜೆಪಿ ಕಾಲದಲ್ಲಿ ಒಂದು ಪ್ರತಿಮೆ ನಿಲ್ಲಿಸಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿ ಕಾರ್ಯಕ್ರಮ ಮಾಡಿದರು. ಈ ಗುತ್ತಿಗೆದಾರರಿಗೆ ಬಿಲ್ ನೀಡಲಿಲ್ಲ. ಆ ವಿಚಾರದ ಬಗ್ಗೆ ಈಗ ಚರ್ಚೆ ಮಾಡಿ ನಾನು ವಿಷಯಾಂತರ ಮಾಡಲು ಬಯಸುವುದಿಲ್ಲ. ನಾವು ಆ ಪ್ರದೇಶ ಅಭಿವೃದ್ಧಿ ಮಾಡುತ್ತೇವೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೃಷ್ಣ ಭೈರೇಗೌಡ ಅವರು ನೀಡುತ್ತಾರೆ ಎಂದಷ್ಟೇ ಹೇಳಿದರು.

ಸಭೆಯಲ್ಲಿ ಸಚಿವ ಕೃಷ್ಣಬೈರೇಗೌಡ, ಮಾಗಡಿ ಶಾಸಕ ಬಾಲಕೃಷ್ಣ, ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್‌ ಗಿರಿನಾಥ್ ಸೇರಿ ಹಲವರು ಹಾಜರಿದ್ದರು.

ದೆಹಲಿಯಲ್ಲಿ ಕೆಂಪೇಗೌಡ ಪ್ರತಿಮೆ: ಡಿಕೆಶಿ

ದೆಹಲಿಯಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡುವ ಉದ್ದೇಶ ಇದೆ. ಇದಕ್ಕೆ ದೆಹಲಿ ಸಿಎಂ ಹಾಗೂ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯಬೇಕು. ಈ ಬಗ್ಗೆ ಸಂಸದರಿಗೆ ಮನವಿ ಮಾಡುತ್ತೇನೆ. ಕೆಂಪೇಗೌಡ ಪ್ರತಿಮೆಯನ್ನು ದೆಹಲಿಯಲ್ಲಿ ಸ್ಥಾಪಿಸಲು ಸಹಕರಿಸುವಂತೆ ಕೋರುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

PREV
Read more Articles on

Recommended Stories

ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ
ಡಿಕೆ ಮಹದಾಯಿ ಹೇಳಿಕೆಗೆ ಗೋವಾ ಸಿಎಂ ಆಕ್ರೋಶ