ಧರ್ಮಸ್ಥಳ ಗ್ರಾಮ ಕೇಸ್: ಇಂದು ಪರಂ ಉತ್ತರ ಕುತೂಹಲ

Published : Aug 18, 2025, 06:25 AM IST
Karnataka Home Minister G Parameshwara

ಸಾರಾಂಶ

ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಧರ್ಮಸ್ಥಳ ಗ್ರಾಮದ ಅಸ್ಥಿ ಉತ್ಖನನ, ಎಸ್‌ಐಟಿ ತನಿಖೆ ಪ್ರಗತಿ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌  ವಿಧಾನಸಭೆಯಲ್ಲಿ ಉತ್ತರ ನೀಡಲಿದ್ದಾರೆ.

ಬೆಂಗಳೂರು : ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಧರ್ಮಸ್ಥಳ ಗ್ರಾಮದ ಅಸ್ಥಿ ಉತ್ಖನನ, ಎಸ್‌ಐಟಿ ತನಿಖೆ ಪ್ರಗತಿ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌   ವಿಧಾನಸಭೆಯಲ್ಲಿ ಉತ್ತರ ನೀಡಲಿದ್ದಾರೆ. ಈ ವೇಳೆ ಅವರು ‘ಎಸ್‌ಐಟಿ ತನಿಖೆಯ ಭವಿಷ್ಯದ ಬಗ್ಗೆ ಏನು ಹೇಳುತ್ತಾರೆ? ಸರ್ಕಾರದ ನಿಲುವು ಪ್ರಕಟಿಸುತ್ತಾರೆಯೇ?’ ಎಂಬುದು ಕುತೂಹಲ ಮೂಡಿಸಿದೆ.

ಈ ವೇಳೆ ‘ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಿರುವವರ ಹೆಸರು ಬಹಿರಂಗಪಡಿಸಬೇಕು. ಮುಸುಕುಧಾರಿಯನ್ನು ಬಂಧಿಸಿ ಎಸ್ಐಟಿ ತನಿಖಾ ವರದಿಯನ್ನು ಸದನದಲ್ಲಿ ಮಂಡಿಸಬೇಕು’ ಎಂದು ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸೋಮವಾರದ ಕಲಾಪ ತೀವ್ರ ಆಸಕ್ತಿ ಕೆರಳಿಸಿದೆ.

ಜಟಾಪಟಿ ಸಂಭವ:

ಅನಾಮಧೇಯ ವ್ಯಕ್ತಿ ನೀಡಿದ ದೂರಿನ ಮೇಲೆ ಎಸ್‌ಐಟಿ ರಚನೆ ಮಾಡಿರುವುದು, ಧರ್ಮಸ್ಥಳ ಗ್ರಾಮದಲ್ಲಿ ಹೂತಿಟ್ಟಿರುವ ಶವಗಳಿಗಾಗಿ 15 ದಿನಕ್ಕೂ ಹೆಚ್ಚು ದಿನಗಳಿಂದ ಗುಂಡಿ ತೋಡುತ್ತಿದ್ದರೂ ಏನೂ ದೊರೆಯದ ವಿಚಾರವಾಗಿ ಬಿಜೆಪಿ ನಾಯಕರು ಸದನದಲ್ಲಿ ತೀವ್ರ ಗದ್ದಲ ಸೃಷ್ಟಿಸುವ ನಿರೀಕ್ಷೆಯಿದೆ. ಜತೆಗೆ ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ನಡೆದಿರುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ. ಯಾರು ಷಡ್ಯಂತ್ರ ನಡೆಸಿದ್ದಾರೆ ಎಂಬುದೂ ಗೊತ್ತಿದೆ ಎಂದಿದ್ದಾರೆ. ಆದರೂ ಯಾಕೆ ಬಹಿರಂಗಪಡಿಸುತ್ತಿಲ್ಲ ಎಂದು ಷಡ್ಯಂತ್ರ ನಡೆಸಿರುವವರ ಹೆಸರು ಬಹಿರಂಗಪಡಿಸಲೂ ಪ್ರತಿಪಕ್ಷಗಳು ಪಟ್ಟು ಹಿಡಿಯುವ ಸಾಧ್ಯತೆಯಿದೆ.

ಇದರ ನಡುವೆ ರಾಜ್ಯ ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ನಡೆಸಿ ಧರ್ಮಸ್ಥಳ ಕ್ಷೇತ್ರದ ಆಡಳಿತ ವರ್ಗ ಹಾಗೂ ಭಕ್ತಾದಿಗಳಿಗೆ ನೈತಿಕ ಬೆಂಬಲ ಘೋಷಿಸಿದ್ದಾರೆ. ಅಲ್ಲದೆ ಸರ್ಕಾರದ ವಿರುದ್ಧವೂ ಕಿಡಿಕಾರಿದ್ದು, ಸದನದಲ್ಲಿ ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ. ಹೀಗಾಗಿ ಕಲಾಪದಲ್ಲಿ ತೀವ್ರ ಜಟಾಪಟಿ ನಿರೀಕ್ಷಿಸಲಾಗಿದೆ.

ಗೃಹ ಸಚಿವರ ಉತ್ತರದತ್ತ ಎಲ್ಲರ ಕಣ್ಣು:

ಎಸ್‌ಐಟಿ ಮುಖ್ಯಸ್ಥ ಪ್ರಣಬ್‌ ಮೊಹಂತಿ ಹಾಗೂ ತಂಡದೊಂದಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಇತ್ತೀಚೆಗೆ ಸಭೆ ನಡೆಸಿದ್ದಾರೆ. ಹೀಗಾಗಿ ತನಿಖೆಯಲ್ಲಿ ಈವರೆಗೆ ಕಂಡು ಬಂದಿರುವ ಅಂಶಗಳನ್ನು ಕ್ರೋಢೀಕರಿಸಿ ಸದನದಲ್ಲಿ ವರದಿ ಮಂಡಿಸಲಿದ್ದಾರೆಯೇ ಅಥವಾ ಸಿಎಲ್‌ಪಿ ನಿರ್ಧಾರದಂತೆ ತನಿಖೆಯನ್ನು ಶೀಘ್ರ ಸ್ಥಗಿತಗೊಳಿಸುವುದಾಗಿ ಪ್ರಕಟಿಸುತ್ತಾರೆಯೇ ಎಂಬ ಬಗ್ಗೆ ಹಲವು ಚರ್ಚೆಗಳು ಶುರುವಾಗಿವೆ.

ಇದರ ನಡುವೆ, ‘ಪರಮೇಶ್ವರ್‌ ಅವರು ತನಿಖೆ ಪ್ರಗತಿಯಲ್ಲಿರುವ ಕಾರಣ ನೀಡಿ ಕೇವಲ ಧರ್ಮಸ್ಥಳ ಪ್ರಕರಣದ ಬಗ್ಗೆ ಹೇಳಿಕೆಯನ್ನು ಮಾತ್ರ ನೀಡಲಿದ್ದಾರೆ. ಯಾವುದೇ ಮಹತ್ವದ ವಿಷಯ ಸದನಕ್ಕೆ ತಿಳಿಸುವುದಿಲ್ಲ’ ಎನ್ನಲಾಗಿದೆ. ಒಂದೊಮ್ಮೆ ಹೀಗಾದರೆ ಪ್ರತಿಪಕ್ಷಗಳು ಷಡ್ಯಂತ್ರ ಮಾಡಿರುವವರ ವಿವರ ಬಹಿರಂಗಕ್ಕಾಗಿ ಕೋಲಾಹಲ ಸೃಷ್ಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಹಿಂದೂ ಧಾರ್ಮಿಕ ಕ್ಷೇತ್ರ ಟಾರ್ಗೆಟ್:

ತನಿಖೆಯ ನೆಪದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರವನ್ನು ಸರ್ಕಾರ ಟಾರ್ಗೆಟ್‌ ಮಾಡಿದೆ. ಇದೊಂದು ಷಡ್ಯಂತ್ರ ಎಂದು ಗೊತ್ತಿದ್ದರೂ 15 ದಿನಗಳಿಂದ ಉತ್ಖನನ ನಡೆಸಲಾಗುತ್ತಿದೆ. ಈ ವೇಳೆ ಧರ್ಮಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಈ ಬಗ್ಗೆ ಕೂಡಲೇ ತನಿಖಾ ವರದಿ ಮಂಡಿಸಿ ಧಾರ್ಮಿಕ ನಂಬಿಕೆ ಮೇಲೆ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸುವ ಸಾಧ್ಯತೆಯಿದೆ.

ಪೂರ್ಣ ಉತ್ತರ

ಧರ್ಮಸ್ಥಳ ಕೇಸಿನ ಬಗ್ಗೆ ಸೋಮವಾರ ವಿಧಾನಸಭೆಯಲ್ಲಿ ಪೂರ್ಣ ಉತ್ತರ ನೀಡುವೆ. ಯಾರೂ ರಾಜಕೀಯ ಮಾಡಬಾರದು. ಇದು ಕಾನೂನಾತ್ಮಕ ಕೇಸಾಗಿದ್ದು, ಪೊಲೀಸರು ಎಫ್ಐಆರ್ ಹಾಕಿ ತನಿಖೆ ಮಾಡ್ತಾರೆ. ತಪ್ಪು ಇದ್ದರೆ ಮಾತ್ರ ಕೇಸ್ ಮುಂದುವರಿಸ್ತಾರೆ. ಇದು ಅಷ್ಟಕ್ಕೇ ಸೀಮಿತವಾಗಬೇಕೆ ವಿನಃ ರಾಜಕೀಯ ಬೇಡ.

-ಡಾ। ಜಿ.ಡಾ.ಪರಮೇಶ್ವರ್‌, ಗೃಹ ಸಚಿವ

ಸಿಎಂ ಕೈವಾಡ

ಧರ್ಮಸ್ಥಳ ವಿಚಾರವಾಗಿ ಸಿಎಂ ಮತಾಂಧರು, ನಗರ ನಕ್ಸಲರು ಹಾಗೂ ಟಿಪ್ಪು ಪ್ರೇರಿತ ಗ್ಯಾಂಗ್‌ಗೆ ಬೆಂಬಲ ನೀಡುತ್ತಿದ್ದಾರೆ. ಇದರಲ್ಲಿ ಅವರದೇ ನೇರವಾದ ಕೈವಾಡವಿದೆ. ಸಮೀರ್ ಎಂಬಾತ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತನಾಗಿದ್ದು, ಅಂಥವರಿಂದ ಸಿಎಂ ಕಚೇರಿ ಸುತ್ತುವರಿದಿದೆ. ಹಿಂದುಗಳಿಗೆ ಅವಮಾನ ಆಗ್ತಿದೆ.

- ಆರ್‌. ಅಶೋಕ್, ವಿಪಕ್ಷ ನಾಯಕ

PREV
Read more Articles on

Recommended Stories

ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌
ಸಂಜೆ ಕೋರ್ಟ್‌ಗೆ ವಕೀಲರ ಸಂಘಗಳ ವಿರೋಧ