ಯೋಧರ ಬೆಂಬಲಿಸಿದ ಡಿಕೆಶಿ ನಡೆ ಅಭಿನಂದನಾರ್ಹ: ರಾಧಾ ಮೋಹನ್‌

Sujatha NRPublished : May 16, 2025 12:00 PM

ಡಿ.ಕೆ.ಶಿವಕುಮಾರ್‌ ಭಾರತೀಯ ಸೇನೆ ಬೆಂಬಲಿಸಿ ಮಾತನಾಡಿರುವ ನಡೆ ಅಭಿನಂದನಾರ್ಹ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‌ದಾಸ್‌ ಅಗರ್‌ವಾಲ್‌ ಹೇಳಿದ್ದಾರೆ.

 ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ಮತ್ತು ರಾಷ್ಟ್ರ ವಿರೋಧಿ ಹೇಳಿಕೆ ನೀಡುತ್ತಿದ್ದರೆ, ಅವರ ರಾಷ್ಟ್ರ ವಿರೋಧಿ ಮಾನಸಿಕತೆ ಇಷ್ಟಪಡದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭಾರತೀಯ ಸೇನೆ ಬೆಂಬಲಿಸಿ ಮಾತನಾಡಿರುವ ನಡೆ ಅಭಿನಂದನಾರ್ಹ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‌ದಾಸ್‌ ಅಗರ್‌ವಾಲ್‌ ಹೇಳಿದ್ದಾರೆ.

ಗುರುವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಕಿಸ್ತಾನ ವಿರುದ್ಧ ಯುದ್ಧ ಮಾಡುವ ಬದಲು ಶಾಂತಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇನೆಗೆ ಬೆಂಬಲಿಸಿ ರಾಷ್ಟ್ರಪ್ರೇಮ ತೋರಿದ್ದಾರೆ. ಈ ನಡೆಗೆ ಅಭಿನಂದನೆಗಳು ಎಂದರು.

ಅಮಾಯಕರ ಮೇಲೆ ರಕ್ತದೋಕುಳಿ ಹರಿಸಿದ್ದ ಉಗ್ರರಿಗೆ ತಕ್ಕ ಪಾಠ ಕಲಿಸುವುದು ಭಾರತೀಯ ಸೇನಾ ಪಡೆಗಳು ಪ್ರಮುಖ ಗುರಿಯಾಗಿತ್ತು. ಇದರ ಉದ್ದೇಶ ಈಡೇರಿದೆ. ವೈಮಾನಿಕ ದಾಳಿ ಮಾಡಲು ಪಾಕಿಸ್ತಾನ ಬಳಸುತ್ತಿದ್ದ ವಾಯುನೆಲೆಗಳನ್ನೂ ಧ್ವಂಸ ಮಾಡಿದ್ದೇವೆ. ಈ ಸಂಪೂರ್ಣ ಯುದ್ಧದಲ್ಲಿ ಭಾರತದ ಒಬ್ಬನೇ ಒಬ್ಬ ಯೋಧರೂ ಮೃತಪಟ್ಟಿಲ್ಲ. 11 ಸೇನಾ ವೈಮಾನಿಕ ಕೇಂದ್ರಗಳ ಮೇಲೆ ದಾಳಿ ಮಾಡಿದ್ದೇವೆ. ಅಲ್ಲದೆ, ಉಗ್ರರ ತರಬೇತಿ ಕೇಂದ್ರಗಳನ್ನೂ ನಾಶಪಡಿಸಿದ್ದೇವೆ ಎಂದು ತಿಳಿಸಿದರು.

ಸಿಂಧೂ ನದಿ ನೀರಿನ ಕುರಿತ ಒಪ್ಪಂದದಡಿ ಶೇ.90ರಷ್ಟು ನೀರಿನ ಅಧಿಕಾರವನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ. ನದಿ ನೀರಿನ ಬಳಕೆಗೆ ಕಾಲುವೆ ನಿರ್ಮಿಸಲು ಭಾರತ ಹಣವನ್ನೂ ನೀಡಿತ್ತು. ಆದರೆ, ಭಾರತದಿಂದಾಗುತ್ತಿದ್ದ ದೀರ್ಘಕಾಲೀನ ಒಳಿತನ್ನು ಪಾಕಿಸ್ತಾನ ಪರಿಗಣಿಸಿಲ್ಲ ಎಂದು ತಿಳಿಸಿದರು.