ಒಂದೇ ದಿನದಲ್ಲಿ 15 ಲಕ್ಷ ಸಸಿ ನೆಡುವ ಬೃಹತ್‌ ಅಭಿಯಾನಕ್ಕೆ ಡಿಕೆಶಿ ಚಾಲನೆ

Published : Jun 28, 2026, 08:25 AM IST
Tree planting

ಸಾರಾಂಶ

ಒಂದೇ ದಿನದಲ್ಲಿ 15 ಲಕ್ಷ ಸ್ಥಳೀಯ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಕರ್ನಾಟಕದ ಸುಸ್ಥಿರ ಅಭಿವೃದ್ಧಿಯ ಪಯಣದಲ್ಲಿ ಐತಿಹಾಸಿಕ ಮೈಲಿಗಲ್ಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

 ಬೆಂಗಳೂರು :  ಒಂದೇ ದಿನದಲ್ಲಿ 15 ಲಕ್ಷ ಸ್ಥಳೀಯ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಕರ್ನಾಟಕದ ಸುಸ್ಥಿರ ಅಭಿವೃದ್ಧಿಯ ಪಯಣದಲ್ಲಿ ಐತಿಹಾಸಿಕ ಮೈಲಿಗಲ್ಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.  

ಶನಿವಾರ ಚಲ್ಲಘಟ್ಟದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳೆಯುತ್ತಿರುವ ನಗರದ ಹಸಿರು ಆವರಣವನ್ನು ಸಂರಕ್ಷಿಸುವುದು ಮತ್ತು ವಿಸ್ತರಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಪ್ರತಿಯೊಂದು ಸಸಿಯೂ ಶುದ್ಧ ಗಾಳಿ, ಉತ್ತಮ ಪರಿಸರ ಸಮತೋಲನ ಹಾಗೂ ಮುಂದಿನ ಪೀಳಿಗೆಗೆ ಆರೋಗ್ಯಕರ ಭವಿಷ್ಯಕ್ಕಾಗಿ ಮಾಡಿದ ಅಮೂಲ್ಯ ಹೂಡಿಕೆಯಾಗಿದೆ ಎಂದರು.

ಅತ್ಯಂತ ಮಹತ್ವದ ಪರಿಸರ ಸಂರಕ್ಷಣಾ ಕಾರ್ಯಕ್ರಮ

ಬಿಡಿಎ ಅಧ್ಯಕ್ಷ, ಶಾಸಕ ಎನ್. ಎ. ಹ್ಯಾರಿಸ್ ಮಾತನಾಡಿ, 15 ಲಕ್ಷ ಸ್ಥಳೀಯ ಸಸಿಗಳ ಯಶಸ್ವಿ ನೆಡುವಿಕೆ ಬಿಡಿಎ ಕೈಗೊಂಡ ಅತ್ಯಂತ ಮಹತ್ವದ ಪರಿಸರ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಅಭಿವೃದ್ಧಿಯ ಪ್ರತಿಯೊಂದು ಹಂತದಲ್ಲೂ ಸುಸ್ಥಿರತೆಯನ್ನು ಅಳವಡಿಸಿಕೊಂಡು ನಗರ ಯೋಜನೆಗೆ ಹೊಸ ದಿಕ್ಕು ನೀಡುತ್ತಿದ್ದೇವೆ. ಸುಸಜ್ಜಿತ ಹಾಗೂ ಪರಿಸರ ಸ್ನೇಹಿ ಬಡಾವಣೆಗಳ ನಿರ್ಮಾಣವೇ ನಮ್ಮ ಧೈಯ. ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೈಜೋಡಿಸಿದ ಪ್ರತಿಯೊಬ್ಬ ಸ್ವಯಂಸೇವಕ, ಸಹಭಾಗಿ ಸಂಸ್ಥೆ ಹಾಗೂ ನಾಗರಿಕರಿಗೆ ಹೃತೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಬಿಡಿಎ ಆಯುಕ್ತ ಮೇಜರ್ ಪಿ.ಮಣಿವಣ್ಣನ್ ಮಾತನಾಡಿ, ಈ ಪ್ರಮಾಣದ ಅಭಿಯಾನವನ್ನು ಯಶಸ್ವಿಯಾಗಿ ಜಾರಿಗೊಳಿಸಲು ಅತ್ಯಂತ ಸೂಕ್ಷ್ಮ ಯೋಜನೆ, ವಿವಿಧ ಸರ್ಕಾರಿ ಇಲಾಖೆಗಳು, ನಾಗರಿಕ ಸಂಸ್ಥೆಗಳು ಹಾಗೂ ಸಾವಿರಾರು ಸ್ವಯಂಸೇವಕರ ಸಮನ್ವಯ ಅಗತ್ಯವಿತ್ತು. ವೈಜ್ಞಾನಿಕ ರೀತಿಯ ನೆಡುವಿಕೆ, ಸ್ಥಳೀಯ ಜಾತಿಯ ಸಸಿಗಳ ಆಯ್ಕೆ ಹಾಗೂ ನೆಡುವಿಕೆಯ ನಂತರದ ನಿರ್ವಹಣಾ ವ್ಯವಸ್ಥೆಯನ್ನು ಬಿಡಿಎ ಸಮರ್ಪಕವಾಗಿ ರೂಪಿಸಿದೆ ಎಂದು ತಿಳಿಸಿದ್ದಾರೆ.

ನಾಡಪ್ರಭು ಕೆಂಪೇಗೌಡ ಬಡಾವಣೆ, ಬನಶಂಕರಿ 6ನೇ ಹಂತ, ಶಿವರಾಮ ಕಾರಂತ ಬಡಾವಣೆಯಲ್ಲಿ ಆಕ್ಸಿಜನ್ ಟ್ರೀ ಪಾರ್ಕ್‌ಗಳು, ಮಿಯಾವಾಕಿ ಅರಣ್ಯಗಳು ಸೇರಿದಂತೆ ಬಿಡಿಎ ಅಭಿವೃದ್ಧಿಪಡಿಸಿರುವ ವಿವಿಧ ಹಸಿರು ಪ್ರದೇಶಗಳಲ್ಲಿ ಅಭಿಯಾನದ ಭಾಗವಾಗಿ ಗಿಡಗಳನ್ನು ನೆಡಲಾಯಿತು. ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಹಾಗೂ ಆಯುಕ್ತ ಪಿ. ಮಣಿವಣ್ಣನ್ ಅವರು ಕೆಂಪೇಗೌಡ ಬಡಾವಣೆ ಹಾಗೂ ಬನಶಂಕರಿ 6ನೇ ಹಂತದಲ್ಲಿ ಗಿಡಗಳನ್ನು ನೆಟ್ಟರು.

 ನಗರದಾದ್ಯಂತ ಒಂದೇ ದಿನದಲ್ಲಿ 14 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ

‘ನಗರದಾದ್ಯಂತ ಒಂದೇ ದಿನದಲ್ಲಿ 14 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಅಭಿಯಾನದ ಭಾಗವಾಗಿ ಇನ್ನೊಂದು ಭಾಗದಿಂದ ಮಾಹಿತಿಯನ್ನು ಕ್ರೋಢಿಕರಿಸಲಾಗುತ್ತಿದೆ’ ಎಂದು ಬಿಡಿಎ ಆಯುಕ್ತ ಮಣಿವಣ್ಣನ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಮ್ಯಾರಾಥಾನ್ ಆಯೋಜನೆ: ನೂತನ ರಸ್ತೆಯಲ್ಲಿ ಬೆಳಗ್ಗೆ 6 ಗಂಟೆಗೆ 5 ಕಿ.ಮೀ ಓಟ ಹಾಗೂ 10 ಕಿ.ಮೀ ‘ಕೆಂಪೇಗೌಡ ರನ್’ ಆಯೋಜಿಸಲಾಗಿತ್ತು. ನಟ ಸುದೀಪ್ ಅವರು ಓಟಕ್ಕೆ ಚಾಲನೆ ನೀಡಿದರು. ಸಾವಿರಾರು ಜನರು ಕೆಂಪೇಗೌಡ ರನ್‌ನಲ್ಲಿ ಭಾಗವಹಿಸಿ, ಪ್ರಮಾಣಪತ್ರಗಳನ್ನು ಪಡೆದರು. ವಿಜೇತರಿಗೆ ಪ್ರಶಸ್ತಿ ಫಲಕ ನೀಡಿ ಅಭಿನಂದಿಸಲಾಯಿತು.

ಕೃತಜ್ಞತಾ ಫಲಕ ಅನಾವರಣ

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ರಸ್ತೆಗೆ ಯಾವುದೇ ತಕರಾರುಗಳಿಲ್ಲದೇ ಭೂಮಿಯನ್ನು ನೀಡಿ ಸಹಕರಿಸಿದ ಜಮೀನು, ಭೂಮಾಲೀಕರ ಹೆಸರುಗಳು, ಸರ್ವೇ ನಂಬರ್ ಹಾಗೂ ಊರಿನ ಹೆಸರುಗಳು ಇರುವ ‘ಕೃತಜ್ಞತಾ ಫಲಕ’ವನ್ನು ಇದೇ ವೇಳೆ ಅನಾವರಣಗೊಳಿಸಲಾಯಿತು. ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕೈಗಾರಿಕಾ ಪ್ರದೇಶ, ಶಾಲೆಗಳು, ಕೆರೆ, ರಸ್ತೆ ನಿರ್ಮಾಣ ಸೇರಿದಂತೆ ಜನಪರ ಯೋಜನೆಗಳಿಗೆ ಯಾವುದೇ ತಕರಾರು ಮಾಡದೇ ಜಾಗ ನೀಡುವ ಭೂ ಮಾಲೀಕರ ಹೆಸರನ್ನು ಕೃತಜ್ಞತಾ ಫಲಕದಲ್ಲಿ ಬರೆದು ಅಳವಡಿಸಲು ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಭೂ ಮಾಲೀಕರ ತ್ಯಾಗ ಸ್ಮರಿಸಲಾಗುವುದು ಎಂದು ಘೋಷಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾಜ್ಯದಲ್ಲಿ ಇಂದಿನಿಂದ ಜು.1ವರೆಗೆ ಪಲ್ಸ್‌ ಪೋಲಿಯೋ ಕಾರ್ಯಕ್ರಮ
ನಗರದ ಮೊದಲ ಟನಲ್‌ ರಸ್ತೆ ಕಾಮಗಾರಿಗೆ ಇಂದು ಸಿಎಂ ಶಂಕು