ಬಳ್ಳಾರಿ-ಚಿಕ್ಕಜಾಜೂರು ರೈಲು ಮಾರ್ಗ ಡಬ್ಲಿಂಗ್‌ - ಹೈದ್ರಾಬಾದ್‌-ಮಂಗ್ಳೂರು ಸಂಪರ್ಕ ಸುಗಮ

Published : Jun 12, 2025, 04:44 AM IST
Train

ಸಾರಾಂಶ

ಕರ್ನಾಟಕದ ಬಳ್ಳಾರಿ - ಚಿಕ್ಕಜಾಜೂರು ನಡುವಣ 185 ಕಿ.ಮೀ ರೈಲ್ವೆ ಜೋಡಿ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ನವದೆಹಲಿ: ಕರ್ನಾಟಕದ ಬಳ್ಳಾರಿ - ಚಿಕ್ಕಜಾಜೂರು ನಡುವಣ 185 ಕಿ.ಮೀ ರೈಲ್ವೆ ಜೋಡಿ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ ತೆಲಂಗಾಣ ರಾಜಧಾನಿ ಹೈದರಾಬಾದ್‌ ಹಾಗೂ ಕರ್ನಾಟಕದ ಮಂಗಳೂರು ಬಂದರು ನಡುವಿನ ರೈಲು ಸಂಪರ್ಕ ಮತ್ತಷ್ಟು ಸುಗಮಗೊಳ್ಳಲಿದೆ. ಇದು ಹೊಸಪೇಟೆ- ಬಳ್ಳಾರಿ ಕೈಗಾರಿಕಾ ಪ್ರದೇಶ, ಬಳ್ಳಾರಿ- ಚಿತ್ರದುರ್ಗ ಗಣಿಗಾರಿಕೆ ಪ್ರದೇಶದ ನಡುವಿನ ಸಂಪರ್ಕವನ್ನೂ ಬಲಪಡಿಸಲಿದೆ.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಾರ್ಖಂಡ್‌ನ 1 ರೈಲು ಯೋಜನೆಗೂ ಅನುಮೋದನೆ ನೀಡಲಾಗಿದೆ.

ಬಳ್ಳಾರಿ-ಚಿಕ್ಕಜಾಜೂರು ಮಾರ್ಗ:

ಬಳ್ಳಾರಿ-ಚಿಕ್ಕಜಾಜೂರು ನಡುವೆ 185 ಕಿ.ಮೀ. ಮಾರ್ಗದಲ್ಲಿನ ಹಾಲಿ ಒಂದೇ ರೈಲು ಮಾರ್ಗವಿತ್ತು. ಈಗ ಜೋಡಿ ಮಾರ್ಗಕ್ಕೆ ಅನುಮೋದನೆ ನೀಡಲಾಗಿದೆ. ಈ ಮಾರ್ಗ ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಜಿಲ್ಲೆ ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮೂಲಕ ಹಾದುಹೋಗುತ್ತದೆ. ಅಂತೆಯೇ, ಜಾರ್ಖಂಡ್‌ನ ಕೊಡೆರ್ಮಾ-ಬರ್ಕಕಾನಾ ಮಾರ್ಗದಲ್ಲೂ ಜೋಡಿ ಮಾರ್ಗಕ್ಕೆ ಅನುಮೋದನೆ ನೀಡಲಾಗಿದೆ.

ಈ ಯೋಜನೆಯಿಂದ ಸುಮಾರು 1,408 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲಾಗುವುದು. ಕಲ್ಲಿದ್ದಲು, ಕಬ್ಬಿಣದ ಅದಿರು, ಉಕ್ಕು, ಸಿಮೆಂಟ್, ರಸಗೊಬ್ಬರಗಳು, ಕೃಷಿ ಸರಕುಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಮುಂತಾದ ಸರಕುಗಳ ಸಾಗಣೆಗೆ ಈ ಮಾರ್ಗಗಳು ಅತ್ಯಗತ್ಯವಾಗಿವೆ. ಅಂತೆಯೇ, ಇದರಿಂದ ಸುಮಾರು 28.19 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಬಹು-ಮಾದರಿ ಸಂಪರ್ಕಕ್ಕಾಗಿ ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಯೋಜನೆಯ ಭಾಗವಾಗಿರುವ ಇದು, ಪ್ರಧಾನಿ ಮೋದಿಯವರ ಕನಸಿನ ಆತ್ಮನಿರ್ಭರ ಭಾರತ ನಿರ್ಮಾಣದ ಕಡೆಗಿನ ಹೆಜ್ಜೆಯೂ ಆಗಿದ್ದು, ಜನರ ಓಡಾಟ, ಉದ್ಯೋಗಗಳನ್ನು ಹೆಚ್ಚಿಸಲಿದೆ. ಜತೆಗೆ, ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ, ತೈಲ ಆಮದನ್ನು ಕಡಿಮೆ ಮಾಡಿ, ಮಾಲಿನ್ಯವನ್ನೂ ತಗ್ಗಿಸಲಿದೆ.

ಜೋಡಿ ಮಾರ್ಗ ಅನುಕೂಲತೆ

- ಹೊಸಪೇಟೆ- ಬಳ್ಳಾರಿ ಕೈಗಾರಿಕಾ ಪ್ರದೇಶ, ಬಳ್ಳಾರಿ- ಚಿತ್ರದುರ್ಗ ಗಣಿಗಾರಿಕೆ ಪ್ರದೇಶ ಹಾಗೂ ಮಂಗಳೂರು ಬಂದರು ಮತ್ತು ಹೈದರಾಬಾದ್‌ ಪ್ರದೇಶಗಳ ನಡುವೆ ನೇರ ಸಂಪರ್ಕ.

- ಹೈದರಾಬಾದ್‌, ಬಳ್ಳಾರಿ, ಹಂಪಿ, ದರೋಜಿ ಕರಡಿ ಧಾಮ, ಜೋಗ ಜಲಪಾತ, ಅಂಜನಾದ್ರಿ, ಕುಂದರಿ ಬೆಟ್ಟಗಳು ಸೇರಿ ಅನೇಕ ದೇಗುಲಗಳ ದರ್ಶನಕ್ಕೆ ಅನುಕೂಲ.

- ಇತರೆ ಸರಕುಗಳ ಜೊತೆಗೆ ಕಬ್ಬಿಣದ ಅದಿರು ಮತ್ತು ಸಿದ್ಧಪಡಿಸಿದ ಉಕ್ಕಿನ ಸಾಗಣೆ.

- ಹುಬ್ಬಳ್ಳಿ- ಬೆಂಗಳೂರು ಮತ್ತು ಹುಬ್ಬಳ್ಳಿ ಗುಂತಕಲ್‌ ಮಾರ್ಗಗಳನ್ನು ಸಂಪರ್ಕಿಸುವ ಸಿಂಗಲ್‌ ಲೈನ್‌ ವಿಭಾಗದಲ್ಲಿ ರೈಲ್ವೆ ಸಾಮರ್ಥ್ಯ ಹೆಚ್ಚಳ.

- ಜೋಡಿ ಮಾರ್ಗದಿಂದ 470 ಗ್ರಾಮಗಳ 13 ಲಕ್ಷ ಜನರಿಗೆ ಅನುಕೂಲ

- ಹೊಸ ಮಾರ್ಗದಲ್ಲಿ ವರ್ಷಕ್ಕೆ ಹೆಚ್ಚುವರಿಯಾಗಿ 18.9 ದಶಲಕ್ಷ ಟನ್‌ ಸರಕು ಸಾಗಣೆ

ಬಳ್ಳಾರಿ ಮತ್ತು ಚಿಕ್ಕಜಾಜೂರು ರೈಲ್ವೆ ಮಾರ್ಗ ದ್ವಿಪಥೀಕರಣದಿಂದ ಸಾರಿಗೆ ಸೇರಿದಂತೆ ಸರಕು ಸಾಗಣೆ, ಕೈಗಾರಿಕೋದ್ಯಮ ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ.

- ವಿ. ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ

PREV
Read more Articles on

Recommended Stories

ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ
ಬೆಂಗಳೂರು ನಗರದಲ್ಲಿ ಗಣೇಶ ಪ್ರತಿಷ್ಠಾಪನೆ ಅನುಮತಿ ನೀಡಲು 75 ಏಕಗವಾಕ್ಷಿ ಕೇಂದ್ರ