ಆರ್‌ಸಿಬಿ ಸಿಬ್ಬಂದಿಗೆ ಜೈಲೋ, ಬೇಲೋ?: ಇಂದು ತೀರ್ಪು

Published : Jun 12, 2025, 04:38 AM IST
RCB celebration bengaluru

ಸಾರಾಂಶ

ಕಾಲ್ತುಳಿತ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಸಲ್ಲಿಸಿರುವ ಮಧ್ಯಂತರ ಮನವಿ ಕುರಿತು ಗುರುವಾರ ಮಧ್ಯಾಹ್ನ 2.30ಕ್ಕೆ ತೀರ್ಪು ಪ್ರಕಟಿಸುವುದಾಗಿ ಹೈಕೋರ್ಟ್‌ ತಿಳಿಸಿದೆ.

 

ಪು1-

ಆರ್‌ಸಿಬಿ ಸಿಬ್ಬಂದಿಗೆ ಜೈಲೋ,

ಬೇಲೋ?: ಇಂದು ತೀರ್ಪು

- ಕಾಲ್ತುಳಿತ ಕೇಸ್‌ ರದ್ದು ಕೋರಿ ನಾಲ್ವರ ಅರ್ಜಿ

- ಹೈಕೋರ್ಟ್‌ನಿಂದ ಇಂದು ಮಧ್ಯಾಹ್ನ ತೀರ್ಪು

--

ಗೌರ್ನರ್‌ಗೆ ಫೋನಲ್ಲಿ

ಆಹ್ವಾನ ನೀಡಿದ್ದೆ

ಆರ್‌ಸಿಬಿ ವಿಜಯೋತ್ಸವಕ್ಕೆ ಗೌರ್ನರ್‌ ತಾವಾಗೇ ಬಂದಿದ್ದರೆಂದು ಪ್ರಚಾರವಾಗಿದೆ. ಅದು ತಪ್ಪು. ನನ್ನ ರಾಜಕೀಯ ಕಾರ್ಯದರ್ಶಿ ಆಗಿದ್ದ ಗೋವಿಂದರಾಜು ಗೌರ್ನರ್‌ಗೆ ಕರೆ ಮಾಡಿ ಫೋನ್ ನನಗೆ ಕೊಟ್ಟರು. ಆಗ ನಾನು ಅವರನ್ನು ಆಹ್ವಾನಿಸಿದ್ದೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

---

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿದ ಪೊಲೀಸರ ಕ್ರಮ ಕಾನೂನುಬಾಹಿರವಾಗಿದ್ದು, ಕೂಡಲೇ ಬಿಡುಗಡೆ ಮಾಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ನಾಲ್ವರು ಆರೋಪಿಗಳು ಸಲ್ಲಿಸಿರುವ ಮಧ್ಯಂತರ ಮನವಿ ಕುರಿತು ಗುರುವಾರ ಮಧ್ಯಾಹ್ನ 2.30ಕ್ಕೆ ತೀರ್ಪು ಪ್ರಕಟಿಸುವುದಾಗಿ ಹೈಕೋರ್ಟ್‌ ತಿಳಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಆರ್‌ಸಿಬಿ ಮಾರುಕಟ್ಟೆ ವಿಭಾಗದ ನಿಖಿಲ್‌ ಸೋಸಲೆ, ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ನ ನಿರ್ದೇಶಕ ಸುನೀಲ್‌ ಮ್ಯಾಥ್ಯೂ, ಡಿಎನ್‌ಎ ಮ್ಯಾನೇಜರ್‌ ಕಿರಣ್‌ ಕುಮಾರ್‌ ಮತ್ತು ಸಮಂತ್‌ ಮಾವಿನಕೆರೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ತಮ್ಮ ಬಂಧನ ಕಾನೂನುಬಾಹಿರವಾಗಿದ್ದು, ಕೂಡಲೇ ಬಿಡುಗಡೆ ಮಾಡಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.

ಈ ಮಧ್ಯಂತರ ಮನವಿ ಕುರಿತ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣ ಕುಮಾರ್‌ ಅವರ ಪೀಠ, ಗುರುವಾರ ಮಧ್ಯಾಹ್ನ 2.30ಕ್ಕೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.

ಅನುಮತಿ ಕೇಳಿರಲಿಲ್ಲ- ಸರ್ಕಾರ:

ವಿಚಾರಣೆ ವೇಳೆ ಸರ್ಕಾರದ ಪರ ರಾಜ್ಯ ಅಡ್ವೋಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ ವಾದ ಮಂಡಿಸಿ, ಮೇ 29ರಂದೇ ಆರ್‌ಸಿಬಿ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ, ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಆರ್‌ಸಿಬಿ ಹಾಗೂ ಡಿಎನ್‌ಎ ಕಂಪನಿಗಳು ಜೂ.3ರಂದು ಫೈನಲ್‌ ಪಂದ್ಯ ಆರಂಭವಾಗುವ ಒಂದು ಗಂಟೆ ಮುಂಚೆ ‘ಆರ್‌ಸಿಬಿ ಪ್ರಶಸ್ತಿ ಗೆದ್ದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸಲಾಗುವುದು’ ಎಂದು ಮಾಹಿತಿ ನೀಡಿವೆ. ಆದರೆ, ಅನುಮತಿ ಕೇಳಿರಲಿಲ್ಲ. ಇದರಿಂದ ಸಂಪೂರ್ಣ ಕಾರ್ಯಕ್ರಮವೇ ಕಾನೂನುಬಾಹಿರ ಎಂದು ತಿಳಿಸಿದರು.

ಜೂ.4ರಂದು ಬೆಳಗ್ಗೆ 7 ಗಂಟೆಗೆ ಆರ್‌ಸಿಬಿ ಟ್ವೀಟ್ ಮಾಡಿ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ಪರೇಡ್ ನಡೆಲಾಗುವುದು, ಎಲ್ಲ ಅಭಿಮಾನಿಗಳು ಭಾಗವಹಿಸಿ ಎಂದು ಕರೆ ನೀಡಿತ್ತು. ಕಾರ್ಯಕ್ರಮಕ್ಕೆ ಉಚಿತ ಪಾಸ್‌ ನೀಡಲಾಗುವುದು. ಪಾಸ್‌ ಡೌನ್ ಲೋಡ್ ಮಾಡುವಂತೆ ಬೆಳಗ್ಗೆ 8.55ಕ್ಕೆ ತಿಳಿಸಿದೆ. ಟಿಕೆಟ್ ಹಂಚಿಕೆ, ಗೇಟ್ ನಿರ್ವಹಣೆ ಎಲ್ಲ ಜವಾಬ್ದಾರಿ ಅವರದ್ದೇ ಆಗಿತ್ತು. ಆರ್‌ಸಿಬಿಯ ಟ್ವೀಟ್‌ಗಳಿಂದ ಚಿನ್ನಸ್ವಾಮಿ ಗೇಟ್‌ಗಳ ಬಳಿ ಜನದಟ್ಟಣೆ ಉಂಟಾಗಿತ್ತು. 21 ಗೇಟ್‌ಗಳಲ್ಲಿ ಸರಿಯಾದ ನಿರ್ವಹಣೆ ಮಾಡದ ಕಾರಣ ಕಾಲ್ತುಳಿತ ಉಂಟಾಗಿ 11 ಸಾವು ಸಂಭವಿಸಿದೆ. ನಿಯಮದ ಪ್ರಕಾರ ಇಂತಹ ಕಾರ್ಯಕ್ರಮ ನಡೆಸಲು ಏಳು ದಿನ ಮುಂಚಿತವಾಗಿ ಅನುಮತಿ ಕೋರಬೇಕು ಎಂದು ವಿವರಿಸಿದರು.

ಕೇಂದ್ರ ವಿಭಾಗದ ಡಿಸಿಪಿ ಶೇಖರ್‌ ಅಮಾನತು ಆಗಿದ್ದರಿಂದ ಅವರ ಜಾಗಕ್ಕೆ ಹಕಯ್‌ ಅಕ್ಷಯ್‌, ಕಬ್ಬನ್‌ ಪಾರ್ಕ್‌ ಠಾಣಾಧಿಕಾರಿ ಗಿರೀಶ್ ಸಸ್ಪೆಂಡ್ ಆಗಿದ್ದರಿಂದ ಅವರ ಸ್ಥಾನಕ್ಕೆ ಅಶೋಕ್‌ ನಗರ ಠಾಣೆಯ ಇನ್ಸ್‌ಪೆಕ್ಟರ್‌ ರವಿ ಅವರನ್ನು ನೇಮಿಸಲಾಗಿದೆ. ಅವರು ಮಾಡಿಕೊಂಡ ಮನವಿ ಮೇರೆಗೆ ಸಿಸಿಬಿ ಪೊಲೀಸರು ಬೆಂಗಳೂರಿಂದ ಪರಾರಿಯಾಗಲು ವಿಮಾನ ನಿಲ್ದಾಣಕ್ಕೆ ತೆರಳಿದ್ದ ಸೋಸಲೆ ಅವರನ್ನು ಜೂ.6ರಂದು ಬೆಳಗ್ಗೆ 4.30ಕ್ಕೆ ಬಂಧಿಸಿದ್ದು, ಅರೆಸ್ಟ್ ಮೆಮೋ ನೀಡಲಾಗಿದೆ. ಮಧ್ಯಾಹ್ನ 2.20ಕ್ಕೆ ರಿಮಾಂಡ್‌ಗೆ ತೆರಳುವ ಮುನ್ನ ಬಂಧನಕ್ಕೆ 12 ಕಾರಣ ನೀಡಲಾಗಿದೆ. ಬಂಧಿಸಿದ ತಕ್ಷಣ ಲಿಖಿತ ಕಾರಣ ಕೊಡಬೇಕಿಲ್ಲ ಎಂದು ಅಡ್ವೋಕೇಟ್‌ ಜನರಲ್‌ ಉತ್ತರಿಸಿದರು.

ಬಂಧಿಸಿದ್ದು ಸಿಎಂ ಸೂಚನೆಯಂತೆ ಅಲ್ಲ:

ಸುನೀಲ್ ಮ್ಯಾಥ್ಯೂ ಅವರನ್ನು ಬೆಳಗ್ಗೆ 4.50 ಗೆ ಬಂಧಿಸಲಾಯಿತು. ಬಂಧನದ ಕಾರಣ ನೀಡಲಾಗಿದೆ. ಲಿಖಿತ ಕಾರಣ ಸಹ ಒದಗಿಸಲಾಗಿದೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಅರ್ಜಿದಾರರನ್ನು ಬಂಧಿಸಲಾಗಿದೆ ಎಂಬುದು ಸರಿಯಲ್ಲ. ಅರ್ಜಿದಾರರು ಪ್ರಕರಣದ ಹಲವು ಸತ್ಯಾಂಶಗಳನ್ನು ಕೋರ್ಟ್‌ನಿಂದ ಮರೆಮಾಚಿದ್ದಾರೆ. ಆರ್‌ಸಿಬಿ ಎರಡು ಬಿಲಿಯನ್ ಡಾಲರ್ ಕಂಪನಿಯಾಗಿದೆ. ಇಡೀ ಘಟನೆಗೆ ಅರ್ಜಿದಾರರೇ ಕಾರಣವಾಗಿದ್ದು, ಅವರನ್ನು ಬಿಡುಗಡೆ ಮಾಡಲು ಆದೇಶಿಸಬಾರದು ಎಂದು ಕೋರಿದರು.

ನಿಖಿಲ್ ಸೋಸಲೆ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದಿಸಿ, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಅರ್ಜಿದಾರರನ್ನು ಬಂಧಿಸಿರುವುದು ಕಾನೂನು ಬಾಹಿರವಾಗಿದೆ. ಸೋಸಲೆ ಅವರನ್ನು ಬೆಳಗಿನ ಜಾವ 3.30ಕ್ಕೆ ವಶಕ್ಕೆ ಪಡೆಯಲಾಗಿದೆ. ಬಂಧಿಸುವಾಗಲೇ ಬಂಧನದ ಕಾರಣ ನೀಡಬೇಕು. ಮುಂಜಾನೆ 4.30ಕ್ಕೆ ಅಧಿಕೃತವಾಗಿ ಬಂಧಿಸಿದಾಗಲೂ ಕಾರಣ ನೀಡಿಲ್ಲ. ಬಂಧನದ ಮಾಹಿತಿ ನೀಡುವ ಹಾಗೂ ಅರೆಸ್ಟ್‌ ಮೆಮೋ ನೀಡಿದ ಸಮಯ ಉಲ್ಲೇಖಿಸಿಲ್ಲ ಎಂದರು.

ಕಾರ್ಯಕ್ರಮಕ್ಕೆ ಅನುಮತಿ ಪಡೆದಿಲ್ಲ ಎಂದು ಸರ್ಕಾರ ಆರೋಪಿಸಿದೆ. ಆದರೆ ಕಾರ್ಯಕ್ರಮದ ಬಗ್ಗೆ ಕೆಎಸ್‌ಸಿಎ ಮಾಹಿತಿ ನೀಡಿದಾಗ ಸರ್ಕಾರ ನಿರಾಕರಿಸಿಲ್ಲವೇಕೆ? ಪೊಲೀಸ್ ಆಯುಕ್ತರು, ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಗುಪ್ತಚರ ವಿಭಾಗದ ಮುಖ್ಯಸ್ಥರನ್ನು ಕೈಬಿಡಲಾಗಿದೆ. ಆದರೆ, ಅವರಲ್ಲಿ ಯಾರನ್ನೂ ಪೊಲೀಸರು ಬಂಧಿಸಿಲ್ಲ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸಿದ್ದಾರೆ. ಅವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಅದಕ್ಕೆ ಉತ್ತರಿಸಿದ ಅಡ್ವೋಕೇಟ್‌ ಜನರಲ್‌, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು ಎಂದು ಸಮಜಾಯಿಷಿ ನೀಡಿದರು.

PREV
Read more Articles on

Recommended Stories

ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ
ಬೆಂಗಳೂರು ನಗರದಲ್ಲಿ ಗಣೇಶ ಪ್ರತಿಷ್ಠಾಪನೆ ಅನುಮತಿ ನೀಡಲು 75 ಏಕಗವಾಕ್ಷಿ ಕೇಂದ್ರ