ಚಾಲಕನಿಗೆ ಮೂರ್ಛೆ: ನಿಯಂತ್ರಣ ತಪ್ಪಿ 8 ವಾಹನಗಳಿಗೆ ಗುದ್ದಿದ ಬಿಎಂಟಿಸಿ ಬಸ್‌

Published : Oct 12, 2025, 08:05 AM IST
BMTC

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣ ಸಮೀಪದ ಟ್ರಾಫಿಕ್ ಸಿಗ್ನಲ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ವಿದ್ಯುತ್ ಚಾಲಿತ ಬಸ್ಸೊಂದು ಅಡ್ಡಾದಿಡ್ಡಿಯಾಗಿ ಚಲಿಸಿ ಸಂಭವಿಸಿದ ಸರಣಿ ಅಪಘಾತದಲ್ಲಿ ಮಹಿಳೆ ಸೇರಿ ಇಬ್ಬರು ಗಾಯಗೊಂಡಿದ್ದಾರೆ.

  ಬೆಂಗಳೂರು :  ಚಿನ್ನಸ್ವಾಮಿ ಕ್ರೀಡಾಂಗಣ ಸಮೀಪದ ಟ್ರಾಫಿಕ್ ಸಿಗ್ನಲ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ವಿದ್ಯುತ್ ಚಾಲಿತ ಬಸ್ಸೊಂದು ಅಡ್ಡಾದಿಡ್ಡಿಯಾಗಿ ಚಲಿಸಿ ಸಂಭವಿಸಿದ ಸರಣಿ ಅಪಘಾತದಲ್ಲಿ ಮಹಿಳೆ ಸೇರಿ ಇಬ್ಬರು ಗಾಯಗೊಂಡಿದ್ದಾರೆ.

ಶಿವಾಜಿನಗರದ ಕುಮಾರ್ ಹಾಗೂ ಸುಲ್ತಾನ್‌ಪಾಳ್ಯದ ಶ್ರೇಯಾ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗಾಯಾಳುಗಳು ಮನೆಗೆ ಮರಳಿದ್ದಾರೆ. ಘಟನೆಯಲ್ಲಿ ಐದು ಕಾರುಗಳು, ಮೂರು ಆಟೋಗಳು ಹಾಗೂ ಒಂದು ಬೈಕ್ ಸೇರಿದಂತೆ ಎಂಟು ವಾಹನಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬನಶಂಕರಿಗೆ ಹೊರಟಿದ್ದ ಬಸ್ ಮಾರ್ಗ ಮಧ್ಯೆ ಈ ಅವಘಡಕ್ಕೀಡಾಗಿದೆ.

ಮೂರ್ಛೆ ಬಂದು ನಿಯಂತ್ರಣ ತಪ್ಪಿದ ಚಾಲಕ?

ಬಿಎಂಟಿಸಿ ಹೊರ ಗುತ್ತಿಗೆ ಪಡೆದಿರುವ ಖಾಸಗಿ ಎಲೆಕ್ಟ್ರಿಕಲ್ ಬಸ್ಸಿನಲ್ಲಿ ಲೋಕೇಶ್ ಚಾಲಕನಾಗಿದ್ದು, ಕೆಐಎನಿಂದ ಬನಶಂಕರಿ ಮಾರ್ಗದ ಬಸ್ ಅನ್ನು ಆತ ಚಲಾಯಿಸುತ್ತಿದ್ದ. ಎಂದಿನಂತೆ ಮಧ್ಯಾಹ್ನ ಕೆಐಎನಿಂದ ಪ್ರಯಾಣಿಕರನ್ನು ತುಂಬಿಕೊಂಡು ಬನಶಂಕರಿಯತ್ತ ಲೋಕೇಶ್ ತೆರಳುತ್ತಿದ್ದ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಟ್ರಾಫಿಕ್ ಸಿಗ್ನಲ್ ನಲ್ಲಿ ಕೆಂಪು ದೀಪ ಬೆಳಗಿದ್ದರಿಂದ ವಾಹನಗಳು ನಿಂತಿದ್ದವು. ಅದೇ ವೇಳೆ ಆ ಮಾರ್ಗದಲ್ಲಿ ಬಂದ ಲೋಕೇಶ್, ಏಕಾಏಕಿ ಚಾಲನೆ ಮೇಲೆ ನಿಯಂತ್ರಣ ಕಳೆದುಕೊಂಡು ಬಸ್ಸನ್ನು ಮನಬಂದಂತೆ ಚಲಾಯಿಸಿದ್ದಾನೆ. ಆಗ ಸಿಗ್ನಲ್‌ನಲ್ಲಿ ನಿಂತಿದ್ದ ಕಾರು, ಆಟೋ ಹಾಗೂ ಬೈಕ್‌ಗಳಿಗೆ ಗುದ್ದಿ ಕೊನೆಗೆ ರಸ್ತೆ ವಿಭಜಕ್ಕೆ ಬಸ್ ಅಪ್ಪಳಿಸಿ ನಿಂತಿದೆ.

ಈ ಘಟನೆಯಲ್ಲಿ ಆಟೋ ಚಾಲಕ ಕುಮಾರ್ ಹಾಗೂ ಕಾರಿನಲ್ಲಿದ್ದ ಶ್ರೇಯಾ ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ತನಗೆ ಮೂರ್ಛೆ (ಪಿಟ್ಸ್) ಬಂದಿದ್ದರಿಂದ ಚಾಲನೆ ಮೇಲೆ ನಿಯಂತ್ರಣ ತಪ್ಪಿದೆ ಎಂದು ಪೊಲೀಸರಿಗೆ ಚಾಲಕ ಲೋಕೇಶ್ ಹೇಳಿಕೆ ಕೊಟ್ಟಿದ್ದಾನೆ. ಈ ಮಾತಿಗೆ ಪೂರಕವಾಗಿ ವೈದ್ಯಕೀಯ ದಾಖಲೆ ಸಲ್ಲಿಸುವಂತೆ ಆತನಿಗೆ ಸೂಚಿಸಿ ಪೊಲೀಸರು ಕಳುಹಿಸಿದ್ದಾರೆ. ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Read more Articles on

Recommended Stories

ಋತು ರಜೆ ಕೊಡದಿದ್ದರೆ ಕ್ರಮ : ಲಾಡ್‌
ಇಂದು ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ - ಮುಂದಿನ 3-4 ದಿನ ಹಲವೆಡೆ ಉತ್ತಮ ಮಳೆ