;Resize=(412,232))
ಅಮರಾವತಿ/ನವದೆಹಲಿ: ಡ್ರೋನ್‌ಗಳನ್ನು ಬಳಸಿಕೊಂಡು ಸರಕುಗಳನ್ನು ಸಾಗಿಸುವ ವಿಶ್ವದ ಮೊಟ್ಟಮೊದಲ ಮತ್ತು ಅತಿದೊಡ್ಡ ವಿತರಣಾ ಜಾಲವನ್ನು ಸ್ಥಾಪಿಸಲು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಎನ್‌ಡಿಎ ಸರ್ಕಾರ ಮುಂದಾಗಿದೆ. ವಿಶೇಷವೆಂದರೆ, ಅದು ಇಂಥ ಜಾಲ ನಿರ್ವಹಣೆ ಸ್ಥಾಪಿಸಲು ಮುಂದಾಗಿರುವುದು ಬೆಂಗಳೂರು ಮೂಲದ ‘ಏರ್‌ಬೌಂಡ್’ ಎಂಬ ಸ್ಟಾರ್ಟಪ್ ಜೊತೆಗೂಡಿ.
ಮುಂಬರುವ ವರ್ಷಗಳಲ್ಲಿ ರಾಜ್ಯವ್ಯಾಪಿ ನಿತ್ಯವೂ ಕನಿಷ್ಠ 10000 ಡ್ರೋನ್ ಸಂಚಾರದ ಮೂಲಕ ಸರಕು ಸಾಗಣೆಯಲ್ಲಿ ಹೊಸ ಇತಿಹಾಸ ರಚಿಸಲು ಆಂಧ್ರ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಅದು ‘ಏರ್‌ಬೌಂಡ್’ ಜೊತೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ.
ವಾಹನಗಳನ್ನು ಬಳಸಿ ನಡೆಸಲಾಗುವ ಸಂಚಾರಕ್ಕೆ ಬದಲಾಗಿ ಇನ್ನು ಮುಂದೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಡ್ರೋನ್ ಬಳಸುವುದು ಆಂಧ್ರಪ್ರದೇಶ ಸರ್ಕಾರದ ಉದ್ದೇಶ. ಇದಕ್ಕಾಗಿ ರಾಜ್ಯವ್ಯಾಪಿ ಡ್ರೋನ್ ಜಾಲ ನಿರ್ಮಿಸುವ ಯೋಜನೆಯನ್ನು ಅದು ರೂಪಿಸಿದೆ. ಇದರ ಮೂಲಕ ಮುಂಬರುವ ವರ್ಷಗಳಲ್ಲಿ ನಿತ್ಯ ಕನಿಷ್ಠ 10000 ಡ್ರೋನ್ ಸಂಚಾರದ ಗುರಿಯನ್ನು ರೂಪಿಸಿದೆ.
ಎಲ್ಲಿ ಆರಂಭ?:
ಮೊದಲಿಗೆ ಅಮರಾವತಿ ವಲಯದಲ್ಲಿ ಯೋಜನೆ ಆರಂಭಿಸಿ ಬಳಿಕ ರಾಜ್ಯವ್ಯಾಪಿ ವಿಸ್ತರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಔಷಧ ಸೇರಿದಂತೆ ಮಹತ್ವದ ವಸ್ತುಗಳನ್ನು ತುರ್ತಾಗಿ ಪೂರೈಕೆ ಮಾಡುವುದು ಸಾಧ್ಯ. ಪ್ರತಿಕೂಲ ಪರಿಸ್ಥಿತಿಗಳಲ್ಲಿ ವಾಹನ ಸಂಚಾರ ಅಸಾಧ್ಯವಾದ ಪ್ರದೇಶಗಳಿಗೂ ಡ್ರೋನ್ ಮೂಲಕ ಯಾವುದೇ ಅಡ್ಡಿ ಇಲ್ಲದೇ ಸರಕು ಸಾಗಣೆ ಸಾಧ್ಯ. ಇತರೆ ಮಾದರಿಗೆ ಹೋಲಿಸಿದರೆ ಡ್ರೋನ್ ಮೂಲಕ ಸಾಗಣೆ ವೆಚ್ಚ 20 ಪಟ್ಟು ಕಡಿಮೆ ಎಂಬ ಅಂದಾಜಿದೆ.
ಏರ್‌ಬೌಂಡ್ ಏನು ಮಾಡುತ್ತೆ?:
ಜಾರಿಯಾದರೆ ಆಂಧ್ರಪ್ರದೇಶ ಜಗತ್ತಿನ ಅತಿದೊಡ್ಡ ವಾಣಿಜ್ಯ ಡ್ರೋನ್ ಡೆಲಿವರಿ ವ್ಯವಸ್ಥೆಗಳಲ್ಲಿ ಒಂದಾಗಲಿದೆ.
ಅಮರಾವತಿ ರಾಜಧಾನಿ ಪ್ರದೇಶದಲ್ಲಿ (ಅಮರಾವತಿ, ವಿಜಯವಾಡ ಮತ್ತು ಗುಂಟೂರು) ದಿನಕ್ಕೆ 10,000 ಡ್ರೋನ್ ಹಾರಾಟಗಳ ದೊಡ್ಡ ಡ್ರೋನ್ ಡೆಲಿವರಿ ನೆಟ್‌ವರ್ಕ್ ಅನ್ನು ನಿರ್ಮಿಸುವುದು ಒಪ್ಪಂದದ ಮುಖ್ಯ ಉದ್ದೇಶ. ಇದು ಆರೋಗ್ಯ ಸಾಮಗ್ರಿಗಳು, ವಾಣಿಜ್ಯ ಸರಕುಗಳು ಮತ್ತು ಇತರ ಮುಖ್ಯ ವಸ್ತುಗಳನ್ನು ವೇಗವಾಗಿ ತಲುಪಿಸುವುದಕ್ಕೆ ಸಹಾಯ ಮಾಡುತ್ತದೆ.
ಏರ್‌ಬೌಂಡ್ ಕೆಲಸ:
ಡ್ರೋನ್ ಬಳಸಿ ಸಂಚಾರದ ಪ್ರಾಯೋಗಿಕ ಪರೀಕ್ಷೆ, ಸಂಚಾರದ ಮಾರ್ಗ ಪರಿಶೀಲನೆ ಮತ್ತು ರಚನೆ, ಡ್ರೋನ್ ಕಾರಿಡಾರ್ ನಿರ್ಮಾಣ, ಹಂತಹಂತವಾಗಿ ಡ್ರೋನ್ ಕಾರಿಡಾರ್‌ಗಳ ನಡುವೆ ಸಮನ್ವಯ ಯೋಜನೆಗೆ ಬೇಕಿರುವ ನಿಯಂತ್ರಣಾ ಮಾನದಂಡಗಳನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವುದು ಸೇರಿದಂತೆ ಯೋಜನೆಗೆ ಬೇಕಿರುವ ಎಲ್ಲಾ ಕೆಲಸಗಳನ್ನು ಬೆಂಗಳೂರು ಮೂಲದ ಏರ್‌ಬೌಂಡ್ ಮಾಡಲಿದೆ. ಇದಕ್ಕೆ ಆಂಧ್ರ ಸರ್ಕಾರ ಅಗತ್ಯ ನೆರವು ನೀಡಲಿದೆ.
ಡ್ರೋನ್ ಹೇಗಿರುತ್ತೆ?:
ಏರ್‌ಬೌಂಡ್ ಕಂಪನಿಯು ತನ್ನ ಸ್ವಂತ ಬ್ಲೆಂಡೆಡ್-ವಿಂಗ್-ಬಾಡಿ ಟೇಲ್‌ಸಿಟ್ಟರ್ ಡ್ರೋನ್‌ಗಳನ್ನು ಬಳಸಿ ಈ ನೆಟ್‌ವರ್ಕ್ ಅನ್ನು ನಿರ್ಮಿಸಲಿದೆ. ಈ ಡ್ರೋನ್‌ಗಳು ಹಗುರವಾಗಿದ್ದು (1.5 ಕೆಜಿ), ಹೆಚ್ಚು ಸಾಮಗ್ರಿ ಹೊರುವ ಮತ್ತು ಬಹಳ ಕಡಿಮೆ ವೆಚ್ಚದಲ್ಲಿ ಕಾರ್ಯನಿರ್ವಹಿಸುವ ಕಾರ್ಯಕ್ಷಮತೆ ಹೊಂದಿವೆ.
ಡ್ರೋನ್ ಡೆಲಿವರಿಯನ್ನು ಸಾಮಾನ್ಯವಾಗಿ ಬೈಕ್ ಡೆಲಿವರಿಗೆ ಮಾದರಿಗೆ ಹೋಲಿಸಲಾಗುತ್ತದೆ. ಆದರೆ ನಾವು ಲಾರಿಗಳನ್ನು ಹಿಮ್ಮೆಟ್ಟಿಸುವ ಗುರಿ ಹೊಂದಿದ್ದೇವೆ. ನಾವು ರಸ್ತೆ ಸರಕು ಸಾಗಣೆಯನ್ನು ಬದಲಾಯಿಸುವ ಉದ್ದೇಶ ಹೊಂದಿಲ್ಲ. ಬದಲಾಗಿ ಲಾರಿ ಸಂಚಾರದಲ್ಲಿನ ಅಸಮರ್ಥತೆ ನಿವಾರಿಸುವ, ದಟ್ಟಣೆ ಕಡಿಮೆ ಮಾಡುವ, ಜನರಿಗೆ ಸಮೀಪದಲ್ಲೇ ದಾಸ್ತಾನು ಕೇಂದ್ರ ಇರಬೇಕೆಂಬ ನಿಯಮಗಳ ಬದಲಾವಣೆಗೆ ಮುಂದಾಗಿದ್ದೇವೆ.
ನಮನ್ ಪುಷ್ಪ್, ಏರ್‌ಬೌಂಡ್ ಸಿಇಒ
ಏನಿದು ಯೋಜನೆ?
ರಾಜವ್ಯಾಪಿ ತ್ವರಿತವಾಗಿ ಔಷಧ ಸಾಮಗ್ರಿ, ಮಹತ್ವದ ಉಪಕರಣಗಳು ಮತ್ತು ಇತರೆ ಸರಕುಗಳನ್ನು ವಾಹನದ ಮೂಲಕ ಸಾಗಿಸಲಾಗುತ್ತಿದೆ. ಆ ಕಾರ್ಯಕ್ಕೆ ಡ್ರೋನ್ ಬಳಸುವ ಉದ್ದೇಶ. ಇತರೆ ಸಂಚಾರದ ಮಾದರಿಗೆ ಹೋಲಿಸಿದರೆ ಡೆಲಿವರಿ ವೆಚ್ಚ 20 ಪಟ್ಟು ಕಡಿಮೆ.