22 ತಾಲೂಕು ಬಿಟ್ಟು ಇಡೀ ಕರ್ನಾಟಕದಲ್ಲಿ ಬರಗಾಲ

Published : Oct 02, 2026, 09:50 AM IST
Drought

ಸಾರಾಂಶ

ಬರ ಪರಿಸ್ಥಿತಿಯ ವೈಜ್ಞಾನಿಕ ಮೌಲ್ಯಮಾಪನದ (ಗ್ರೌಂಡ್‌ ಟ್ರೂಥಿಂಗ್‌) ನಂತರ ಹೊಸದಾಗಿ 40 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದ್ದು, ಈ ಮೂಲಕ ಒಟ್ಟಾರೆ ಬರ ಪೀಡಿತ ತಾಲೂಕುಗಳ ಸಂಖ್ಯೆ 217ಕ್ಕೆ ಏರಿಕೆಯಾಗಿದೆ.

ಬೆಂಗಳೂರು : ಬರ ಪರಿಸ್ಥಿತಿಯ ವೈಜ್ಞಾನಿಕ ಮೌಲ್ಯಮಾಪನದ (ಗ್ರೌಂಡ್‌ ಟ್ರೂಥಿಂಗ್‌) ನಂತರ ಹೊಸದಾಗಿ 40 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದ್ದು, ಈ ಮೂಲಕ ಒಟ್ಟಾರೆ ಬರ ಪೀಡಿತ ತಾಲೂಕುಗಳ ಸಂಖ್ಯೆ 217ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ರಾಜ್ಯದ 239 ತಾಲೂಕುಗಳ ಪೈಕಿ 22 ತಾಲೂಕು ಹೊರತುಪಡಿಸಿ ಉಳಿದೆಲ್ಲ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದಂತಾಗಿದೆ.

ಒಟ್ಟು ನಾಲ್ಕು ಬಾರಿ ಮೌಲ್ಯಮಾಪನ ನಡೆಸಿ ಬರ ಪೀಡಿತ ತಾಲೂಕುಗಳ ಪಟ್ಟಿ ಮಾಡಲಾಗಿದೆ. ಆ. 27ರಂದು 101 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿತ್ತು. ನಂತರ ಹಂತಹಂತವಾಗಿ 23 ಮತ್ತು 53 ತಾಲೂಕುಗಳನ್ನು ಬರ ಪೀಡಿತ ಎಂದು ಪಟ್ಟಿ ಮಾಡಲಾಗಿತ್ತು. ಸೆ.21 ಮತ್ತು 23ರಂದು ಕ್ರಮವಾಗಿ 11 ಮತ್ತು 29 ತಾಲೂಕುಗಳ ವೈಜ್ಞಾನಿಕ ಮೌಲ್ಯಮಾಪನಕ್ಕೆ ಆದೇಶಿಸಲಾಗಿತ್ತು. ಇದೀಗ ಆ ಎರಡೂ ಪಟ್ಟಿಯಲ್ಲಿ ಮಲೆನಾಡು ಜಿಲ್ಲೆಯ ತಾಲೂಕುಗಳು ಸೇರಿ ಒಟ್ಟು 40 ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಪ್ರಕಟಿಸಿದೆ.

217 ತಾಲೂಕುಗಳಲ್ಲಿ ಬರ:

ಸದ್ಯ ಬರ ಪೀಡಿತ ತಾಲೂಕುಗಳ ವೈಜ್ಞಾನಿಕ ಮೌಲ್ಯಮಾಪನಕ್ಕೆ ಯಾವುದೇ ಆದೇಶ ಹೊರಬೀಳದ ಕಾರಣ, ರಾಜ್ಯದ 22 ತಾಲೂಕುಗಳಲ್ಲಿ ಮಾತ್ರ ಮುಂಗಾರು ಕೊರತೆ ಅಷ್ಟಾಗಿ ಕಾಡದೆ ಬರ ಪರಿಸ್ಥಿತಿ ಉಂಟಾಗಿಲ್ಲ ಎಂದು ಸರ್ಕಾರ ತಿಳಿಸಿದಂತಾಗಿದೆ. ನಾಲ್ಕು ಹಂತದಲ್ಲಿ ಪ್ರಕಟಿಸಲಾಗಿರುವ ಬರ ಪೀಡಿತ ತಾಲೂಕುಗಳ ಪಟ್ಟಿಯಂತೆ 185 ತಾಲೂಕುಗಳಲ್ಲಿ ತೀವ್ರ ಬರ ಮತ್ತು 32 ತಾಲೂಕುಗಳಲ್ಲಿ ಸಾಧಾರಣ ಬರ ಪರಿಸ್ಥಿತಿಯಿದೆ ಎಂದು ತಿಳಿಸಲಾಗಿದೆ.

ಹೊಸ ಬರ ಪೀಡಿತ ತಾಲೂಕುಗಳ ವಿವರ:

ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ, ಜಗಳೂರು, ಪಿರಿಯಾಪಟ್ಟಣ, ಕುಷ್ಟಗಿ, ಔರಾದ್‌, ಗೋಕಾಕ್‌, ರಾಮದುರ್ಗ, ಸವದತ್ತಿ, ಕಾಗವಾಡ, ಇಂಡಿ, ಚಡಚಣ, ತಾಳಿಕೋಟೆ, ಗದಗ, ಮುಂಡರಗಿ, ರೋಣ, ಹಿರೇಕೆರೂರು, ಧಾರವಾಡ, ಕಲಘಟಗಿ, ಕುಂದಗೋಳ, ಅಳ್ನಾವರ, ಭದ್ರಾವತಿ, ಶಿಕಾರಿಪುರ, ಶಿವಮೊಗ್ಗ, ಸೊರಬ, ತೀರ್ಥಹಳ್ಳಿ, ಚಿಕ್ಕಮಗಳೂರು, ಕಳಸ, ಮಡಿಕೇರಿ, ಕುಶಾಲನಗರ, ಬೆಳ್ತಂಗಡಿ, ಬಂಟ್ವಾಳ, ಉಲ್ಲಾಳ, ಉಡುಪಿ, ಬೈಂದೂರು, ಅಂಕೋಲ, ಭಟ್ಕಳ, ಹಳಿಯಾಳ, ಶಿರಸಿ.

ಯಶವಂತರಾಯ, ಎಚ್ಕೆಪಿ ಕ್ಷೇತ್ರ ಬರ

ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ತಾವು ಪ್ರತಿನಿಧಿಸುವ ಕ್ಷೇತ್ರ ಮತ್ತು ಜಿಲ್ಲೆಗಳನ್ನು ಸೇರ್ಪಡೆ ಮಾಡಿಲ್ಲ ಎಂದು ಎಚ್‌.ಕೆ.ಪಾಟೀಲ್‌ ರಾಜೀನಾಮೆಯ ಬೆದರಿಯೊಡ್ಡಿದ್ದರೆ, ಯಶವಂತರಾಯಗೌಡ ಪಾಟೀಲ್‌ ರಾಜೀನಾಮೆಯನ್ನೇ ಸಲ್ಲಿಸಿದ್ದರು. ಈ ಬೆದರಿಕೆಗೆ ಮಣಿದ ಸರ್ಕಾರ ಇದೀಗ ನಾಲ್ಕನೇ ಪಟ್ಟಿಯಲ್ಲಿ ಎಚ್‌.ಕೆ.ಪಾಟೀಲ್‌ ಆಗ್ರಹದಂತೆ ಗದಗ ಮತ್ತು ಯಶವಂತರಾಯಗೌಡ ಪಾಟೀಲ್‌ ಅವರು ಪ್ರತಿನಿಧಿಸುವ ಚಡಚಣವನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಖೋಟಾ ನೋಟು ಮುದ್ರಣಕ್ಕೆ 6 ತಿಂಗಳು ಪ್ರಯೋಗ
ನೈಸ್‌ ಅಕ್ರಮ ವಿರುದ್ಧ ಇಂದಿನಿಂದ ಎಚ್‌ಡಿಕೆ ಹೋರಾಟದ ಅಖಾಡಕ್ಕೆ