ಮನೆ ಕಟ್ಟಲು ಕಟ್ಟಡ ನಕ್ಷೆ ಮಂಜೂರಾತಿಗೆ ಇ-ಖಾತಾ ಕಡ್ಡಾಯ

Published : Jun 10, 2025, 06:45 AM IST
BBMP

ಸಾರಾಂಶ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಸ್ವತ್ತುಗಳು ಇ-ಖಾತಾ ಪಡೆದಿರುವುದನ್ನು ಕಡ್ಡಾಯಗೊಳಿಸಿ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಆದೇಶಿಸಿದ್ದಾರೆ.

 ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಸ್ವತ್ತುಗಳು ಇ-ಖಾತಾ ಪಡೆದಿರುವುದನ್ನು ಕಡ್ಡಾಯಗೊಳಿಸಿ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಆದೇಶಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಮತ್ತು ವಿತರಣೆ ವ್ಯವಸ್ಥೆ ಮಾಡಲಾಗಿದೆ. ಅದರ ಜತೆಗೆ ಸ್ವತ್ತುಗಳಿಗೆ ಇ-ಖಾತಾವನ್ನು ಆನ್‌ಲೈನ್ ಮೂಲಕ ನೀಡಲಾಗುತ್ತಿದೆ. ಇದೀಗ ಎರಡೂ ತಂತ್ರಾಂಶವನ್ನು ಏಕೀಕರಣಗೊಳಿಸಲಾಗುತ್ತಿದೆ. ಹೀಗಾಗಿ ಕಟ್ಟಡ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸುವವರು ಮೊದಲು ಇ-ಖಾತಾವನ್ನು ಪಡೆದಿರಬೇಕಿದೆ.

ಹೀಗಾಗಿ ಜು. 1ರಿಂದ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸುವವರು ಇ-ಖಾತಾ ಅಥವಾ ಇಪಿಐಡಿ ಸಂಖ್ಯೆಯನ್ನು ತಂತ್ರಾಂಶದಲ್ಲಿ ನಮೂದಿಸುವುದು ಹಾಗೂ ಇ-ಖಾತಾ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇ-ಖಾತಾ ಸಲ್ಲಿಸದ ಅರ್ಜಿಗಳನ್ನು ಕಟ್ಟಡ ನಕ್ಷೆ ಮಂಜೂರಾತಿಗೆ ಪರಿಗಣಿಸದಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇನ್ನು, ನಂಬಿಕೆಯೊಂದಿಗೆ ಪರಿಶೀಲನೆ ವ್ಯವಸ್ಥೆ ಅಡಿಯಲ್ಲಿ ನಿಗದಿತ ಕಾಲಮಿತಿಯಲ್ಲಿ ತಾತ್ಕಾಲಿಕ ನಕ್ಷೆ ಮಂಜೂರಾತಿ ಹೊಣೆಯನ್ನು ಸಂಬಂಧಪಟ್ಟ ಸಹಾಯಕ ನಿರ್ದೇಶಕ (ನಗರ ಯೋಜನೆ) ಅವರಿಗೆ ನೀಡಲಾಗಿದೆ. ಒಂದು ವೇಳೆ ಸಹಾಯಕ ನಿರ್ದೇಶಕ (ನಗರ ಯೋಜನೆ) ನಿಗದಿತ ಕಾಲಮಿತಿಯಲ್ಲಿ ಅರ್ಜಿಗಳನ್ನು ಪರಿಶೀಲಿಸದಿದ್ದರೆ ತಂತ್ರಾಶದಲ್ಲಿ ಅರ್ಜಿಗಳಿಗೆ ಸ್ವಯಂಚಾಲಿತವಾಗಿ ಡೀಮ್ಡ್‌ ಅನುಮೋದನೆ ದೊರೆಯಲಿದೆ. ಒಂದು ವೇಳೆ ನಕ್ಷೆ ಮಂಜೂರಾತಿ ಅರ್ಜಿಗಳು ಇ-ಖಾತಾ ಸೇರಿದಂತೆ ಇನ್ನಿತರ ದಾಖಲೆಗಳನ್ನು ಸಲ್ಲಿಸದೇ ಡೀಮ್ಡ್‌ ಅನುಮೋದನೆ ದೊರೆತರೆ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಿ ನಿಯಮದ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.

PREV
Read more Articles on

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ