ಸಿಎಂ ಪತ್ನಿಯ ಸೈಟ್‌ ದಾಖಲೆ ಪತ್ತೆಗೆ ಮುಡಾಗೆ ಇಡಿ ರೇಡ್‌! ಪಾರ್ವತಿ ಸಿದ್ದರಾಮಯ್ಯಗೆ ಸೈಟ್‌ ಹಂಚಿಕೆ ದಾಖಲೆ ಪರಿಶೀಲನೆ

ಸಾರಾಂಶ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ಹಿನ್ನೆಲೆಯಲ್ಲಿ ಇ.ಡಿ. (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಮುಡಾ ಕಚೇರಿ ಮೇಲೆ ಶುಕ್ರವಾರ ದಾಳಿ ನಡೆಸಿದ್ದು, ದಾಖಲಾತಿಗಳ ಪರಿಶೀಲನೆ ಆರಂಭಿಸಿದ್ದಾರೆ.

ಮೈಸೂರು  : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ಹಿನ್ನೆಲೆಯಲ್ಲಿ ಇ.ಡಿ. (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಮುಡಾ ಕಚೇರಿ ಮೇಲೆ ಶುಕ್ರವಾರ ದಾಳಿ ನಡೆಸಿದ್ದು, ದಾಖಲಾತಿಗಳ ಪರಿಶೀಲನೆ ಆರಂಭಿಸಿದ್ದಾರೆ.

ಈ ವೇಳೆ, ನಮಗೆ ಪಾರ್ವತಿ ಸಿದ್ದರಾಮಯ್ಯ ಅವರಿಗೆ ನಿವೇಶನ ಹಂಚಿಕೆ ಮಾಡಿದ ಬಗ್ಗೆ ಮೂಲ ದಾಖಲಾತಿ ಕೊಡಿ ಎಂದು ಇ.ಡಿ. ಅಧಿಕಾರಿಗಳು ಮುಡಾ ಆಯುಕ್ತರ ಬಳಿ ಕೇಳಿದ್ದಾರೆ. ಅಲ್ಲದೆ, ಪಾರ್ವತಿ ಸಿದ್ದರಾಮಯ್ಯ ಅವರು ಬದಲಿ ನಿವೇಶನ ಕೋರಿ ಬರೆದ ಪತ್ರದಲ್ಲಿ ಕೆಲ ಪದಗಳನ್ನು ವೈಟ್ನರ್‌ ಹಾಕಿ ಅಳಿಸಿದ್ದು ಯಾರು? ಯಾವ ಪದಗಳನ್ನು ಅಳಿಸಲಾಗಿದೆ ಎಂದೂ ಇ.ಡಿ. ಅಧಿಕಾರಿಗಳು ಮಾಹಿತಿ ಕೋರಿದ್ದಾರೆ. ಈ ಬಗ್ಗೆ ಮುಡಾ ಅಧಿಕಾರಿಗಳು ದಾಖಲೆಗಳ ಹುಡುಕಾಟ ಆರಂಭಿಸಿದ್ದಾರೆ.

ಮುಡಾದಲ್ಲಿ 5 ಸಾವಿರ ಕೋಟಿ ರು. ಅಕ್ರಮ ನಡೆದಿದೆ. 50:50 ಅನುಪಾತದಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಹೆಸರಿಗೂ ನಿವೇಶನ ಮಂಜುರಾಗಿದ್ದು, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಇ.ಡಿ.ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ.

20 ಅಧಿಕಾರಿಗಳ ತಂಡ ಶುಕ್ರವಾರ ಬೆಳಗ್ಗೆ ಸುಮಾರು 10.50ರ ವೇಳೆಗೆ ಮೈಸೂರಿನ ಜೆಎಲ್ ಬಿ ರಸ್ತೆಯಲ್ಲಿರುವ ಮುಡಾ ಕಚೇರಿಗೆ ಆಗಮಿಸಿತು. ಬಳಿಕ ಮುಡಾ ಆಯುಕ್ತ ರಘುನಂದನ್, ನಗರ ಯೋಜಕ ಸದಸ್ಯ, ವಿಶೇಷ ಭೂಸ್ವಾಧೀನ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತಮಗೆ ಅಗತ್ಯವಾದ ಮಾಹಿತಿಯನ್ನು ಸಂಗ್ರಹಿಸಿತು. ಬಳಿಕ ಅಧಿಕಾರಿಗಳು ಕಡತಗಳನ್ನು ವಶಕ್ಕೆ ಪಡೆದು ಪರಿಶೀಲನೆ ಆರಂಭಿಸಿದ್ದಾರೆ.

ಇ.ಡಿ ತಂಡಕ್ಕೆ ಶಸ್ತ್ರಾಸ್ತ್ರದೊಂದಿಗೆ ಆಗಮಿಸಿರುವ ಸಿಆರ್ ಪಿಎಫ್ ಯೋಧರು ರಕ್ಷಣೆ ಒದಗಿಸಿದ್ದು, ಮುಡಾ ಕಚೇರಿಯ ಒಳಭಾಗದ ಗೇಟ್ ಗೆ ಬೀಗ ಹಾಕಿದ್ದಾರೆ. ಇ.ಡಿ ಅಧಿಕಾರಿಗಳು ಶನಿವಾರವೂ ದಾಖಲೆಗಳ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಮುಡಾದಲ್ಲಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಯಲ್ಲಿ ಆಗಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಹಿಂದಿನ ಆಯುಕ್ತರಾದ ದಿನೇಶ್ ಕುಮಾರ್ ಮತ್ತು ಡಾ.ಡಿ.ಬಿ. ನಟೇಶ್ ಸೇರಿದಂತೆ ಎಲ್ಲಾ ಅಧಿಕಾರಿಗಳನ್ನು ವಶಕ್ಕೆ ಪಡೆದು ಇಡಿ ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಇದರ ನಡುವೆ ಮೈಸೂರಿನ ನಜರ್ ಬಾದ್ ನ ಮಿನಿ ವಿಧಾನಸೌಧದಲ್ಲಿರುವ ಮೈಸೂರು ತಾಲೂಕು ಪಂಚಾಯತ್‌ ಕಚೇರಿಗೂ ಇ.ಡಿ ಅಧಿಕಾರಿಗಳ ತಂಡ ಭೇಟಿ ನೀಡಿ, ದಾಖಲಾತಿಗಳ ಪರಿಶೀಲನೆ ಕಾರ್ಯದಲ್ಲಿ ತೊಡಗಿದೆ.

ಸಿಎಂ ಪತ್ನಿಗೆ ನೀಡಿದ ನಿವೇಶನದ ಮೂಲ ದಾಖಲಾತಿ ಕೊಡಿ:

ಮೊದಲು ನಮಗೆ ಪಾರ್ವತಿ ಸಿದ್ದರಾಮಯ್ಯ ಅವರಿಗೆ ನಿವೇಶನ ಹಂಚಿಕೆ ಮಾಡಿದ ಬಗ್ಗೆ ಮೂಲ ದಾಖಲಾತಿ ಕೊಡಿ ಎಂದು ಇ.ಡಿ ಅಧಿಕಾರಿಗಳು ಕೇಳಿದ್ದಾರೆ. ಇದಕ್ಕೆ ನಕಲು ಪ್ರತಿಯೇ ಸಾಕಾ? ಮೂಲ ಪ್ರತಿಯೇ ಬೇಕಾ? ಎಂದು ಇ.ಡಿ ಅಧಿಕಾರಿಗಳನ್ನು ಮುಡಾ ಅಧಿಕಾರಿಗಳು ಕೇಳಿದ್ದಾರೆ. ನಮಗೆ ಮೂಲ ದಾಖಲೆಯೇ ಬೇಕು. ಪಾರ್ವತಿ ಸಿದ್ದರಾಮಯ್ಯನವರಿಗೆ ಹಂಚಿಕೆಯಾದ ನಿವೇಶನಕ್ಕೆ ಸಂಬಂಧಿಸಿದ ಕೇಸ್ ಬಗ್ಗೆ 2004ರಿಂದ 2023ರವರಗಿನ ಮೂಲ ದಾಖಲೆಗಳನ್ನು ತಕ್ಷಣ ಕೊಡಿ ಎಂದು ಕೇಳಿದರು. ಬಳಿಕ, ಮುಡಾ ಕಾರ್ಯದರ್ಶಿ ಪ್ರಸನ್ನಕುಮಾರ್ ಅವರನ್ನು ದಾಖಲೆಗಳನ್ನು ತರಲು ಹೊರಗೆ ಕಳುಹಿಸಿದರು. ಅಲ್ಲದೆ, 50:50 ಅನುಪಾತದ ವಿಚಾರ ಏನು? ಇಲ್ಲಿಯವರೆಗೆ ಎಷ್ಟು ಸೈಟ್ ಗಳು ಹಂಚಿಕೆಯಾಗಿವೆ? ಎಂಬುದರ ಬಗ್ಗೆ ನಮಗೆ ಅಂಕಿ-ಅಂಶ ಕೊಡಿ ಎಂದು ಇ.ಡಿ ಅಧಿಕಾರಿಗಳ ಕೇಳಿದರು. ಇವುಗಳಿಗೆ ಮುಡಾ ಆಯುಕ್ತರು ವಿವರಣೆ ನೀಡಿದ್ದಾರೆ ಎಂದು ಮುಡಾ ಅಧಿಕಾರಿಗಳು ಹೇಳಿದ್ದಾರೆ.

ವೈಟ್ನರ್ ಹಾಕಿದ್ದು ಯಾರು?:

ಮುಡಾ ದಾಖಲೆಗೆ ವೈಟ್ನರ್ ಹಾಕಿದ ದಾಖಲೆ ಬಗ್ಗೆ ಪ್ರಶ್ನೆ ಶುರು ಮಾಡಿದ ಇ.ಡಿ. ಅಧಿಕಾರಿಗಳು, ಇದರ ಮೂಲ ಪ್ರತಿ ಯಾವುದು? ಮೂಲ ಪ್ರತಿ ಎಲ್ಲಿದೆ? ಮೂಲ ಪ್ರತಿಗೆ ವೈಟ್ನರ್ ಬಂದಿದ್ದು ಹೇಗೆ? ವೈಟ್ನರ್ ಹಾಕಿದ್ದು ಯಾರು? ವೈಟ್ನರ್ ಹಿಂದಿನ ಪದಗಳು ಯಾವುದು? ನಮಗೆ ಸರಿಯಾದ ಉತ್ತರ ಬೇಕು ಎಂದು ಇ.ಡಿ. ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ನಾನು ಆಯುಕ್ತನಾಗಿ ಬಂದಿರುವುದು ಎರಡು ತಿಂಗಳ ಹಿಂದೆ. ನಾನು ಬರುವುದಕ್ಕಿಂತ ಮುಂಚೆಯೇ ಅದರ ಮೇಲೆ ವೈಟ್ನರ್ ಹಾಕಲಾಗಿತ್ತು. ನನಗೆ ವೈಟ್ನರ್ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಮುಡಾ ಆಯುಕ್ತ ರಘುನಂದನ್ ಉತ್ತರಿಸಿದ್ದಾರೆ.

ಹಿಂದಿನ ಡಿಸಿ ಪತ್ರ:

27.11.2023ರಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಹಿಂದಿನ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಪತ್ರ ಬರೆದಿದ್ದರು. ನಿವೇಶನ ಹಂಚಿಕೆಯಲ್ಲಿ ಲೋಪ ಕಂಡು ಬಂದಿದ್ದು, ಇದರಿಂದಾಗಿ ಮುಡಾಕ್ಕೆ ಒಂದು ಸಾವಿರ ಕೋಟಿ ರು.ಗೂ ಅಧಿಕ ನಷ್ಟವಾಗಿದೆ ಎಂದು ದೂರುಗಳು ಬಂದಿದೆ ಎಂದು ಪತ್ರದಲ್ಲಿ ತಿಳಿಸಿದ್ದರು. ಆ ಪತ್ರವನ್ನು ಇ.ಡಿ. ಅಧಿಕಾರಿಗಳು ತಂದಿದ್ದು, ಪತ್ರದ ಆಧಾರದ ಮೇಲೆ ಹಲವು ಪ್ರಶ್ನೆಗಳನ್ನು ಮುಡಾ ಅಧಿಕಾರಿಗಳಿಗೆ ಕೇಳಿದ್ದಾರೆ.

ಪ್ರಕರಣದ ಹಿನ್ನೆಲೆ:

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಹೆಸರಿನಲ್ಲಿ 50:50 ಅನುಪಾತದಡಿ ಮುಡಾದಿಂದ 14 ನಿವೇಶನಗಳು ಹಂಚಿಕೆಯಾಗಿವೆ. ಈ ವೇಳೆ ಹಗರಣ ನಡೆದಿದೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿಎಂ ವಿರುದ್ದದ ತನಿಖೆಗೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಸ್ನೇಹಮಯಿಯವರು ನ್ಯಾಯಾಲಯದ ಆದೇಶದ ಪ್ರತಿಯೊಂದಿಗೆ ಮೈಸೂರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ಸಂಬಂಧ ಲೋಕಾಯುಕ್ತದಿಂದ ತನಿಖೆ ನಡೆಯುತ್ತಿದೆ. ಈ ಮಧ್ಯೆ, ಮುಡಾದಲ್ಲಿ 5 ಸಾವಿರ ಕೋಟಿ ರು.ಅಕ್ರಮ ನಡೆದಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಇ.ಡಿಗೂ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮುಡಾ ಸುತ್ತ ಬಿಗಿ ಭದ್ರತೆ:

ಇ.ಡಿ ದಾಳಿ ಹಿನ್ನೆಲೆಯಲ್ಲಿ ಮುಡಾ ಕಚೇರಿ ಸುತ್ತಮುತ್ತ ಸ್ಥಳೀಯ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಸಿಆರ್ ಪಿಎಫ್ ಯೋಧರಿಗೆ ಸ್ಥಳೀಯ ಪೊಲೀಸರು ಸಾಥ್ ನೀಡಿದ್ದಾರೆ. ಮುಡಾ ಕಚೇರಿಗೆ ಯಾರೂ ಬರದಂತೆ ಪೊಲೀಸರು ತಡೆಯುತ್ತಿದ್ದಾರೆ. ಸಾರ್ವಜನಿಕ ಸೇವೆಗೂ ಕೂಡ ಮುಡಾ ಅಲಭ್ಯವಾಗಿದ್ದು, ಮುಡಾದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಕಚೇರಿಯಲ್ಲಿ ತೀವ್ರ ಶೋಧವನ್ನು ನಡೆಸುತ್ತಿದ್ದಾರೆ.

ಇ.ಡಿ. ಅಧಿಕಾರಿಗಳು ಬೆಳಗ್ಗೆ ಬಂದಿದ್ದಾರೆ. ದಾಖಲೆಗಳನ್ನು ನಮ್ಮ ಬಳಿ ಕೇಳಿದ್ದಾರೆ. ನಾವು ಅವರಿಗೆ ಎಲ್ಲವನ್ನೂ ಒದಗಿಸುತ್ತಿದ್ದೇವೆ. ಅವರು ಕೇಳಿದ ಎಲ್ಲಾ ಮಾಹಿತಿ ನೀಡಿದ್ದೇವೆ. ನಮಗೆ ಏನನ್ನೂ ಮಾತನಾಡದಂತೆ ಸೂಚಿಸಿದ್ದಾರೆ. ಆ ಕಾರಣಕ್ಕೆ ನಾವು ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ.

- ಪ್ರಸನ್ನಕುಮಾರ್, ಮುಡಾ ಕಾರ್ಯದರ್ಶಿ

Share this article