ಇ - ಖಾತಾ ಕಡ್ಡಾಯ : ಆಸ್ತಿ ನೋಂದಣಿಯಾಗದೆ ತೀವ್ರ ಹೈರಾಣ, ರಾಜ್ಯಾದ್ಯಂತ ಸರ್ವರ್ ಸಮಸ್ಯೆ

Published : Oct 18, 2024, 08:29 AM IST
computer activity

ಸಾರಾಂಶ

ಸಮರ್ಪಕ ಸಿದ್ಧತೆಯಿಲ್ಲದೆ ರಾಜ್ಯಾದ್ಯಂತ ಸ್ಥಿರಾಸ್ತಿ ದಸ್ತಾವೇಜು ನೋಂದಣಿ ಅಥವಾ ಆಸ್ತಿ ನೋಂದಣಿಗೆ ಸರ್ಕಾರ ಇ-ಖಾತಾ ಕಡ್ಡಾಯಗೊಳಿಸಿರುವುದು ಇದೀಗ ಆಸ್ತಿ ಮಾಲೀಕರನ್ನು ಸಮಸ್ಯೆಗೆ ಸಿಲುಕಿಸಿದೆ.

ಬೆಂಗಳೂರು  : ಸಮರ್ಪಕ ಸಿದ್ಧತೆಯಿಲ್ಲದೆ ರಾಜ್ಯಾದ್ಯಂತ ಸ್ಥಿರಾಸ್ತಿ ದಸ್ತಾವೇಜು ನೋಂದಣಿ ಅಥವಾ ಆಸ್ತಿ ನೋಂದಣಿಗೆ ಸರ್ಕಾರ ಇ-ಖಾತಾ ಕಡ್ಡಾಯಗೊಳಿಸಿರುವುದು ಇದೀಗ ಆಸ್ತಿ ಮಾಲೀಕರನ್ನು ಸಮಸ್ಯೆಗೆ ಸಿಲುಕಿಸಿದೆ. 

ಸರ್ವರ್ ಸಮಸ್ಯೆ, ಕರಡು ಖಾತಾಗಳಲ್ಲಿನ ದೋಷ, ಅಗತ್ಯ ದಾಖಲೆಗಳ ಕೊರತೆ ಮತ್ತಿತರ ಕಾರಣದಿಂದ ಇ-ಖಾತಾ ದೊರೆಯದೆ ಆಸ್ತಿ ಮಾಲೀಕರು ಪರದಾಡುವಂತಾಗಿದೆ. ಮತ್ತೊಂದೆಡೆ, ಇ-ಖಾತಾ ಇಲ್ಲದೆ ಆಸ್ತಿ ನೋಂದಣಿ ಸಾಧ್ಯವಿಲ್ಲದಿರುವುದರಿಂದ ಸಾರ್ವಜನಿಕರು ಆಸ್ತಿ ನೋಂದಣಿ, ಅಡಮಾನ ಸಾಲ ಪಡೆಯುವುದು ಸೇರಿ ಯಾವುದೇ ವಹಿವಾಟು ಮಾಡಲಾಗದೆ ಅತಂತ್ರಗೊಂಡಿದ್ದಾರೆ.

ಕಂದಾಯ ನಿವೇಶನ ಹಾಗೂ ಅದರಲ್ಲಿ ಮನೆ ನಿರ್ಮಿಸಿದವರಿಗೆ ಇ-ಖಾತಾ ಇಲ್ಲದೆ ಮಾಲೀಕತ್ವ ಸಾಬೀತುಪಡಿಸುವುದು ಹೇಗೆ? ಪರಭಾರೆ ಮಾಡುವುದು ಹೇಗೆ ಎಂಬ ಆತಂಕ ಶುರುವಾಗಿದೆ. ರಾಜ್ಯಾದ್ಯಂತ ಬಿಬಿಎಂಪಿ, ಬಿಡಿಎ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶದಿಂದ ಪಡೆದ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಜತೆಗೆ ಗ್ರಾಮೀಣ ಭಾಗದಲ್ಲಿ ಇ-ಸ್ವತ್ತು ತಂತ್ರಾಂಶದಿಂದ ಪಡೆದ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಇ-ಖಾತಾ ಪಡೆಯಲು ಡಿಜಿಟಲ್ ಇಂಟಿಗ್ರೇಷನ್ ಖಾತಾ ನಿಯಮ ಪಾಲನೆ ಕಡ್ಡಾಯಗೊಳಿಸಲಾಗಿದೆ.

ಇದರಡಿ ಆಧಾರ್ ಇ-ಕೆವೈಸಿ, ಆಸ್ತಿಯ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು. ಬಳಿಕ ಅಧಿಕಾರಿಗಳು ಪರಿಶೀಲಿಸಿ ಇ-ಖಾತಾ ವಿತರಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ನೋಂದಾಯಿತ ಶುದ್ಧ ಕ್ರಯ ಪತ್ರ, ಇ.ಸಿ, ಅನುಮೋದಿತ ಖಾತಾ ಸೇರಿದಂತೆ ಸೂಕ್ತ ದಾಖಲೆಗಳ ಕೊರತೆಯಿಂದಇ-ಖಾತಾದೊರೆಯದೆಸಮಸ್ಯೆ ಸೃಷ್ಟಿಯಾಗಿದೆ. ಮತ್ತೊಂದೆಡೆ ಆನ್‌ಲೈನ್ ಸರ್ವರ್ ಸಮಸ್ಯೆ, ಕರಡು ದೋಷಗಳಿಂದಪರದಾಡುವಂತಾಗಿದೆ.ಗ್ರಾಮೀಣಭಾಗದಲ್ಲಿ ಶೇ.90ರಷ್ಟು ಮನೆ-ನಿವೇಶನಕ್ಕೆ ಕಂದಾಯ ನಿಯಮಗಳಡಿ ಇ-ಖಾತಾ ದೊರೆಯುವುದಿಲ್ಲ. ಅವರೆಲ್ಲರೂ ತೀವ್ರ ಭೀತಿಗೆ ಗುರಿಯಾಗಿದ್ದು, ಮನೆ, ನಿವೇಶನಗಳ ಮಾಲೀಕತ್ವಕ್ಕೆ ಚ್ಯುತಿ ಬರುವ ಆತಂಕ ಎದುರಾಗಿದೆ.

ತಾಂತ್ರಿಕ ಸಮಸ್ಯೆ ಬಗೆಹರಿಸಲು ಇಂದು ಸಭೆ: ಈ ಎಲ್ಲಾ ಸಮಸ್ಯೆಗಳ ಹಿನ್ನೆಲೆಯಲ್ಲಿ ನೋಂದಣಿ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರು (ಐರ್ಜಿ) ಶುಕ್ರವಾರ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ಹಮ್ಮಿಕೊಂಡಿದ್ದಾರೆ. ಇ-ಖಾತಾಗಾಗಿ ಸಾರ್ವಜನಿಕರು ಪರದಾಡುತ್ತಿದ್ದು, ಅವರು ಎದುರಿಸುತ್ತಿರುವಸಮಸ್ಯೆಗಳೇನು? ಅವುಗಳಿಗೆಇಲಾಖೆಯಿಂದ ಯಾವ ಪರಿಹಾರ ಒದಗಿಸಬಹುದು ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲೂ ಸಮಸ್ಯೆ: ಬಿಬಿಎಂಪಿ ವ್ಯಾಪ್ತಿಯಲ್ಲೂ ಮ್ಯಾನುಯಲ್ ಖಾತಾ ವಿತರಣೆ ವ್ಯವಸ್ಥೆ ರದ್ದುಪಡಿಸಿದ್ದು, ಫೇಸ್‌ಲೆಸ್‌, ಸಂಪರ್ಕರಹಿತ ಹಾಗೂ ಆನ್ ಲೈನ್ ಮೂಲಕ ಇ-ಖಾತಾ ವಿತರಣೆ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಆನ್‌ಲೈನ್ ಸೇವೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಇ-ಖಾತೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹಲವು ಸ್ವತ್ತುದಾರರು ತಮ್ಮ ಆಸ್ತಿಯ ಸಂಖ್ಯೆ ಹಾಗೂ ದಾಖಲೆಯ ವಿವರವನ್ನು ನಮೂದಿಸಿದರೂ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ತಾಂತ್ರಿಕ ದೋಷವಿದ್ದರೂ ಪಾಲಿಕೆಯಿಂದ ಮಾರ್ಗದರ್ಶನ ಸಿಕ್ಕಿಲ್ಲ. ಆದಷ್ಟು ಬೇಗ ನಿಯಮದಂತೆ ಎಲ್ಲರಿಗೂ ಇ-ಖಾತಾ ಸಿಗುವಂತೆ ಸರಳ ನಿಯಮ ರೂಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಕರಡು ಖಾತೆಯೇ ದೊರೆಯುತ್ತಿಲ್ಲ: ಆಸ್ತಿದಾರರು ಇ-ಖಾತಾ ಪಡೆಯಲು ಮೊದಲು ಬಿಬಿಎಂಪಿ-ಕಾವೇರಿ-2ತಂತ್ರಾಂಶದಲ್ಲಿ ಅಪ್ಲೋಡ್‌ಮಾಡಿರುವಕರಡುಖಾತೆಪರಿಶೀಲಿಸಬೇಕು.ವಿವರ ಸರಿ ಇದ್ದರೆ ಪೂರಕ ದಾಖಲೆ ಅಪ್ಲೋಡ್ ಮಾಡಿ ಇ-ಖಾತಾ ಪಡೆಯಬಹುದು. ನಕಲಿ ದಾಖಲೆ ಸೃಷ್ಟಿ ಬಗ್ಗೆ ಮಾಹಿತಿ ಇದ್ದರೆ ಮಾಲೀಕರು ದೂರು ನೀಡಿಖಾತಾ ವಿತರಣೆ ತಡೆಯಬಹುದು. ಇದರಿಂದ ನಕಲಿ ದಾಖಲೆ ಸೃಷ್ಟಿ, ಆಸ್ತಿ ಅಕ್ರಮದ ಬಳಿಕ ಬ್ರೇಕ್ ಬೀಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆಹಲವರ ಆಸ್ತಿಯ ವಿವರಗಳೇ ಕರಡು ಖಾತೆಗಳಲ್ಲಿ ಲಭ್ಯವಾಗುತ್ತಿಲ್ಲ. ಇದು ಸಮಸ್ಯೆಯಾಗುತ್ತಿದೆ.

ಬ್ಯಾಂಕ್ ವ್ಯವಹಾರಕ್ಕೂ ತೊಂದರೆ: ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಬೆಂಗಳೂರಿನಲ್ಲಿರುವ ಬಿ-ಖಾತಾ, ಕಂದಾಯ ನಿವೇಶನ ಸೇರಿ ಬಹುತೇಕ ಆಸ್ತಿಗಳಿಗೆ ಇ-ಖಾತಾ ಇಲ್ಲ. ಇಂತಹ ಆಸ್ತಿಗಳಿಗೆ ಹಲವುಸಹಕಾರಬ್ಯಾಂಕ್ ಹಾಗೂ ಸೊಸೈಟಿಗಳು ಸಾಲ ಮಂಜೂರು ಮಾಡಿದ್ದು, ಅಡಮಾನ ನೋಂದಣಿ (ಡಿಟಿಡಿ-ಡಿಪಾಸಿಟ್‌ ಆಫ್‌ ಟೈಟಲ್ಸ್) ಗೆ ಇ-ಖಾತಾ ಕಡ್ಡಾಯದಿಂದ ಅವಕಾಶ ದೊರೆಯುತ್ತಿಲ್ಲ. ಇದರಿ೦ದಾಗಿ ಮಂಜೂರಾದ ಸಾಲ ಬಿಡುಗಡೆ ಮಾಡಿಸಿಕೊಳ್ಳಲೂ ಗ್ರಾಹಕರು ಪರದಾಟ ನಡೆಸುತ್ತಿದ್ದಾರೆ. ಬ್ಯಾಂಕ್ ವ್ಯವಹಾರಗಳಿಗೆ ತೀವ್ರ ಅಡಚಣೆ ಬೇಗ ಆಗಿದ್ದು, ಪರಿಹರಿಸಬೇಕು ಎಂದು ಬೆಂಗಳೂರು ಜಿಲ್ಲಾ ಸಹಕಾರಿ ಯೂನಿಯನ್ ಆಗ್ರಹಿಸಿದ್ದಾರೆ.

ನಿರ್ದೇಶಕ ಎಂ.ಆರ್.ವೆಂಕಟೇಶ್ ಬೆಂಗ್ಳೂರಿನ ಜತೆ ಅನೇಕ ಜಿಲ್ಲೆಗಳಲ್ಲೂ ಸಂಕಷ್ಟ: ಬೆಂಗಳೂರಿನಲ್ಲಿ ಮಾತ್ರವಲ್ಲ, ಬೆಳಗಾವಿ, ವಿಜಯಪುರ, ಚಿಕ್ಕಮಗಳೂರು ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲೂ ಇ-ಖಾತಾದಿಂದಾಗಿ ಆಸ್ತಿ ನೋಂದಣಿ, ಅಡಮಾನ ಸಾಲ ಮತ್ತಿತರ ಸೌಲಭ್ಯಗಳಿಗಾಗಿ ಸಾರ್ವಜನಿಕರು ಪರದಾಟ ಅನುಭವಿಸುತ್ತಿದ್ದಾರೆ. ದಾವಣಗೆರೆ, ಧಾರವಾಡ, ಯಾದಗಿರಿ, ಗದಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತಿತರ ಕಡೆ ನಿಧಾನವಾಗಿಯಾದರೂ ಇ-ಖಾತಾ ನೋಂದಣಿ ಸಾಂಗವಾಗಿ ನೆರವೇರುತ್ತಿದ್ದು, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಚಿಕ್ಕಮಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಸಮಸ್ಯೆ ಆಗುತ್ತಿದೆ. ಇದರಿಂದಲೇವಾದೇವಿ ವ್ಯವಹಾರಗಳು, ಆಸ್ತಿ ನೋಂದಣಿಯಂಥ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ.

ಹಳ್ಳಿಗಳಲ್ಲಿ 90% ಆಸ್ತಿಗೆ ಇ-ಖಾತಾ ಸಿಗೋದೇ ಇಲ್ಲ!: ಗ್ರಾಮೀಣ ಭಾಗದಲ್ಲಿ ಶೇ.90ರಷ್ಟು ಮನೆ- ನಿವೇಶನಕ್ಕೆ ಕಂದಾಯ ಇಲಾಖೆ ನಿಯಮಗಳಡಿ ಇ-ಖಾತಾ ದೊರೆಯುವುದಿಲ್ಲ. ಅವರೆಲ್ಲರೂ ತೀವ್ರ ಭೀತಿಗೆ ಗುರಿಯಾಗಿದ್ದು, ಮನೆ, ನಿವೇಶನಗಳ ಮಾಲೀಕತ್ವಕ್ಕೆ ಚ್ಯುತಿ ಬರುವ ಆತಂಕ ಎದುರಾಗಿದೆ. ಅವರ ಆಸ್ತಿ ಪರಭಾರೆ ಕೂಡ ಕಷ್ಟ.

 ಯಾವ್ಯಾವ ವ್ಯವಹಾರ ಸ್ಥಗಿತ?: ಮೊದಲೆಲ್ಲ ಪಹಣಿ ಹಾಗೂ ಪಾಲಿಕೆಯಿಂದ ನೀಡಲಾಗುತ್ತಿದ್ದ ನಮೂನೆ-2 (ಪಾಲಿಕೆ ಪಹಣಿ)ಯಿಂದ ನಡೆಯುತ್ತಿದ್ದ ವ್ಯವಹಾರಗಳಾದ ಸ್ಥಿರಾಸ್ತಿ ಖರೀದಿ, ದಖ್ ಖರೀದಿ, ಬ್ಯಾಂಕ್ ಸಾಲ, ಬೋಜಾ ಏರಿಸುವುದು, ಬೋಜಾ ಕಡಿಮೆಗೊಳಿಸು ವುದು, ಹಕ್ಕುಬಿಟ್ಟ ಪತ್ರ, ಭಕ್ಷೀಸ್ ಪತ್ರ ಸೇರಿ ಹಲವು ವಹಿವಾಟುಗಳು ಈಗ ಇ-ಖಾತಾ ಕಡ್ಡಾಯದಿಂದಾಗಿ ಸ್ಥಗಿತವಾಗಿವೆ. ಇ-ಖಾತಾ ಆದ ನಂತರವಷ್ಟೇ ಉಪ ನೋಂದಣಾಧಿಕಾರಿಗಳ ಕಚೇರಿಯ ಕಾವೇರಿ 2.0 ತಂತ್ರಾಂಶದಲ್ಲಿ ಆಸ್ತಿ ವಿವರಗಳು ಗೋಚರವಾಗುತ್ತಿವೆ. ಅಲ್ಲಿವರೆಗೂ ಈ ಎಲ್ಲ ಲೇವಾದೇವಿಗಳು ನಿಂತುಬಿಟ್ಟಿವೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''