ಹೊಸಕೋಟೆ: ನಗರದಲ್ಲಿ ಸಿಐಟಿಯು, ಇಂಡೋ ಮೀಮ್ ಎಂಪ್ಲಾಯ್ ಯೂನಿಯನ್, ಆಟೋಲಿವ್, ಇಂಡಿಯಾ ಎಂಪ್ಲಾಯಿಸ್, ಗುಡ್ ರಿಚ್ ಏರೋಸ್ಪೇಸ್ ಸರ್ವಿಸ್ ಎಂಪ್ಲಾಯಿಸ್ ಯೂನಿಯನ್, ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಎಂಪ್ಲಾಯಿಸ್ ಯೂನಿಯನ್, ಎಂಐಇಯು ಹಾಗೂ ದಲಿತಪರ, ಕನ್ನಡಪರ, ಪ್ರಗತಿಪರ, ರೈತಪರ ಸಂಘಟನೆಗಳಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿ ನಗರದಲ್ಲಿ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ತಾಲೂಕು ಕಾರ್ಯಾಲಯದಿಂದ ಕೆಇಬಿ ಸರ್ಕಲ್, ಗಂಗಮ್ಮಗುಡಿ ರಸ್ತೆ, ಓಂಶ್ರೀ ಸರ್ಕಲ್, ಸ್ವಾಮಿ ವಿವೇಕಾನಂದ ರಸ್ತೆ, ಮೋರ್ ಸರ್ಕಲ್, ಕುರುಬರ ಪೇಟೆ, ಹಳೆ ಮಾರುಕಟ್ಟೆ ರಸ್ತೆಗಳಲ್ಲಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಅಂಗಡಿ ಮುಂಗಟ್ಟು ಮುಚ್ಚಿಸಿ ಕಾರ್ಮಿಕರು, ರೈತರು ಮೆರವಣಿಗೆ ನಡೆಸಿದರು.ಹೋರಾಟಗಾರ ಹರೀಂದ್ರ ಮಾತನಾಡಿ, ಇಡೀ ದೇಶದಲ್ಲಿ 11 ಕಾರ್ಮಿಕ ಸಂಘಟನೆಗಳು ಸುಮಾರು 800ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳು ಬಂದ್‌ಗೆ ಕರೆ ಕೊಟ್ಟಿದ್ದವು. ಆದರೆ ತಾಲೂಕಿನಲ್ಲಿ ಪೊಲೀಸರು ಲಾಠಿ ಜಾರ್ಜ್ ಮಾಡಿ ಬಂದ್ ಹತ್ತಿಕ್ಕುವ ಹುನ್ನಾರ ನಡೆಯಿತು. ಇದಾವುದಕ್ಕೂ ಕಿವಿಗೊಡದ ಕಾರ್ಮಿಕರು, ರೈತರು ಸಾವಿರಾರು ಸಂಖ್ಯೆಯಲ್ಲಿ ಬಂದು ಯಶಸ್ಸುಗೊಳಿಸಿದ್ದಾರೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲದು, ಏಕೆಂದರೆ 17ಎ ಬಿ ಕಾಯ್ದೆ ಬಗ್ಗೆ ಅದೆಷ್ಟೋ ಜನಕ್ಕೆ ಇಂದಿಗೂ ಗೊತ್ತಿಲ್ಲ. ಕಾಂಗ್ರೆಸ್-ಬಿಜೆಪಿ ರಾಜಕೀಯ ಮೇಲಾಟದಲ್ಲಿ ದೇಶದ ನಿಜವಾದ ರೈತ ಬೀದಿ ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಬಿಜೆಪಿ ಸೌಟಲ್ಲಿ ತಿಂದರೆ ಕಾಂಗ್ರೆಸ್ ಮಡಿಕೆಯಲ್ಲೇ ತಿನ್ನುತ್ತೆ ಎನ್ನುವಷ್ಟರ ಮಟ್ಟಿಗೆ ರಾಜಕಾರಣ ಹೊಲಸಾಗಿದೆ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಸಿಐಟಿಯು ತಾಲೂಕು ಕಾರ್ಯದರ್ಶಿ ಆನಂದ್ ಮಾತನಾಡಿ, ಕಾರ್ಮಿಕನಿಂದ ದೇಶದ ಜಿಡಿಪಿ ದುಪ್ಪಟ್ಟಾಗಿದೆ. ಆದರೆ ಅಂತಹ ಕಾರ್ಮಿಕನ ಬದುಕಿಗೆ ಇಂದು ಭದ್ರತೆ ಇಲ್ಲದಂತಾಗಿದೆ. ಈ ಹಿಂದೆ ಇದ್ದ 29 ಕಾನೂನುಗಳನ್ನು 4 ಕಾನೂನು ಸಂಹಿತೆಗಳ ಹೆಸರಿನಲ್ಲಿ ಕೇಂದ್ರ ಸರ್ಕಾರ ಕೊಳ್ಳಿ ಇಡಲು ಹೊರಟಿರುವುದು ದುರಂತವೇ ಸರಿ. ಅಲ್ಲದೆ ದೇಶದಲ್ಲಿ ಅಮೆರಿಕಾದ ರೈತ ಬೆಳೆದ 50ಕ್ಕೂ ಹೆಚ್ಚು ಬೆಳೆಗಳ ಪ್ರವೇಶಕ್ಕೆ ತೆರಿಗೆ ವಿನಾಯಿತಿ ನೀಡಿ ನಮ್ಮ ರೈತ ಬೆಳೆದ ಬೆಳೆಯನ್ನು ಅದೇ ಅಮೆರಿಕದಲ್ಲಿ ಮಾರಾಟ ಮಾಡಲು ಶೇ.18ರಷ್ಟು ತೆರಿಗೆ ಕಟ್ಟುವ ತೆರೆಮರೆಯ ಕಸರತ್ತು ನಡೆಸುತ್ತಿರುವ ವ್ಯವಸ್ಥೆಗೆ ಏನು ಹೇಳಬೇಕು? ರೈತರ ಬದುಕಿನ ಬಗ್ಗೆ ಆತಂಕ ಕಾಡುವಂತಾಗಿದೆ ಎಂದರು.ಅಖಿಲ ಭಾರತ ವಕೀಲರ ಸಂಫದ ಮುಂಖಂಡ ನಾಗರಾಜ್ ಮಾತನಾಡಿ, ದೇಶ ಎಂದರೆ ಕೇವಲ ಅಂಬಾನಿ ಅದಾನಿ ಅಷ್ಟೇ ಅಲ್ಲ. ದುಡಿವ ಶ್ರಮಿಕರ ಬದುಕು ಇದೆ ಎಂಬುದನ್ನು ಸರ್ಕಾರಗಳು ಮನಗಾಣಬೇಕಿದೆ. ಇಂದು ಬೆವರು ಸುರಿಸುವ ಕಾರ್ಮಿಕ ರೈತನಿಗೆ ತನ್ನ ಬೆವರಿನ ಫಲ ಪಡೆಯಲು ಮುಂದೆ ಬಂದರೆ ಬಂದಿಸಿ ದೌರ್ಜನ್ಯ ಎಸಗುವ ಸಂಸ್ಕೃತಿ ದೇಶದಲ್ಲಿ ತಲೆ ಎತ್ತಿದೆ. ಪ್ರಜಾಪ್ರಭುತ್ವದ ಸ್ಥಾನದಲ್ಲಿ ಸರ್ವಾಧಿಕಾರತ್ವ ಮುನ್ನೆಲೆಗೆ ಬರುತ್ತಿರುವುದು ದೇಶಕ್ಕೆ ಮಾರಕ ಎಂಬುದನ್ನು ಸಾಮಾನ್ಯರು ಅರ್ಥ ಮಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದರು.
ಫೋಟೋ: 12 ಹೆಚ್‌ಎಸ್‌ಕೆ 4 ಮತ್ತು 5
4: ಹೊಸಕೋಟೆಯಲ್ಲಿ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲಿಸಿ ಪ್ರತಿಭಟನೆ ನಡೆಸಿದ ಕಾರ್ಮಿಕ ಮುಖಂಡರು.
5: ಹೊಸಕೋಟೆಯಲ್ಲಿ ಸಿಐಟಿಯು ತೇತೃತ್ವದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.