ಜೀವನವೆಂದರೆ ಕೇವಲ ಬದುಕುವಿಕೆಯಲ್ಲ, ಅದರೊಳಗಿನ ಅರ್ಥ, ಮೌಲ್ಯ ಮತ್ತು ದೈವಿಕತೆಯನ್ನು ಅರಿಯುವ ಆತ್ಮಯಾತ್ರೆಯೇ ನಿಜವಾದ ಜೀವನ ದರ್ಶನ. ಮನುಷ್ಯನು ದುಃಖ, ಸೋಲು, ಟೀಕೆ ಹಾಗೂ ನಿರಾಶೆಗಳ ನಡುವೆ ಸಿಲುಕಿ ಜೀವನವನ್ನು ವ್ಯರ್ಥಗೊಳಿಸಬಾರದು.

ಗದಗ: ಕಷ್ಟ, ನಷ್ಟ ಮತ್ತು ಸವಾಲುಗಳು ಜೀವನದ ಸಹಜ ಭಾಗಗಳಾಗಿದ್ದು, ಅವುಗಳಿಗೆ ಹೆದರಿ ಕುಗ್ಗದೆ ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ ಹಾಗೂ ಆತ್ಮಪರಿಶೀಲನೆಯೊಂದಿಗೆ ಮುನ್ನಡೆಯುವಾಗಲೇ ಜೀವನ ಸಾರ್ಥಕವಾಗುತ್ತದೆ ಎಂದು ನರಸಾಪುರ- ಕದಾಂಪುರ ಹಿರೇಮಠದ ಡಾ. ವೀರಭದ್ರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ವಿವೇಕಾನಂದ ನಗರದ ಕಾಶಿ ವಿಶ್ವನಾಥ ದೇವಸ್ಥಾನದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯಿಂದ ಆಯೋಜಿಸಿದ್ದ ಜೀವನ ದರ್ಶನ ಉಪನ್ಯಾಸ ಮಾಲಿಕೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜೀವನವೆಂದರೆ ಕೇವಲ ಬದುಕುವಿಕೆಯಲ್ಲ, ಅದರೊಳಗಿನ ಅರ್ಥ, ಮೌಲ್ಯ ಮತ್ತು ದೈವಿಕತೆಯನ್ನು ಅರಿಯುವ ಆತ್ಮಯಾತ್ರೆಯೇ ನಿಜವಾದ ಜೀವನ ದರ್ಶನ. ಮನುಷ್ಯನು ದುಃಖ, ಸೋಲು, ಟೀಕೆ ಹಾಗೂ ನಿರಾಶೆಗಳ ನಡುವೆ ಸಿಲುಕಿ ಜೀವನವನ್ನು ವ್ಯರ್ಥಗೊಳಿಸಬಾರದು.

ಕೊರತೆಗಳು ಹೊರಜಗತ್ತಿನಲ್ಲಿ ಅಲ್ಲ, ನಮ್ಮ ಮನಸ್ಸಿನೊಳಗೇ ಇರುತ್ತವೆ. ಸಂಕಷ್ಟಗಳು ಎದುರಾದರೂ ಬಗ್ಗದೆ, ಜಗ್ಗದೆ, ಕುಗ್ಗದೆ ಮುನ್ನಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ಭಾರತೀಯ ಸಂಪ್ರದಾಯಗಳು ಧರ್ಮ, ನಿಷ್ಠೆ ಮತ್ತು ಕುಟುಂಬ ಮೌಲ್ಯಗಳನ್ನು ಬೆಳೆಸುವ ಶಕ್ತಿಕೇಂದ್ರಗಳಾಗಿವೆ ಎಂದರು.

ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರಾಜೇಂದ್ರ ಎಸ್. ಗಡಾದ ಅವರು, ನಾವು ಮತ್ತು ನಮ್ಮ ಮಕ್ಕಳು’ ವಿಷಯ ಕುರಿತು ಉಪನ್ಯಾಸ ನೀಡಿ, ಮಕ್ಕಳಲ್ಲಿ ಸಂಸ್ಕಾರ, ಮೌಲ್ಯ ಹಾಗೂ ಉತ್ತಮ ವ್ಯಕ್ತಿತ್ವ ಬೆಳೆಸುವಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಎ.ಟಿ. ನರೇಗಲ್ ಮಾತನಾಡಿ, ಜೀವನ ಮೌಲ್ಯಗಳು ಮತ್ತು ಆತ್ಮಪರಿಶೀಲನೆಯ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಪ್ರತಿ ಅಮಾವಾಸ್ಯೆಯಂದು ಉಪನ್ಯಾಸ ಮಾಲಿಕೆ ನಡೆಸಲಾಗುತ್ತಿದೆ. ಸಮಿತಿಯು ಧಾರ್ಮಿಕ-ಸಾಂಸ್ಕೃತಿಕ ಚಟುವಟಿಕೆಗಳ ಜತೆಗೆ ಸಮಾಜಮುಖಿ ಸೇವಾ ಕಾರ್ಯಗಳನ್ನೂ ಕೈಗೊಳ್ಳುತ್ತಿದೆ ಎಂದರು.

ಈ ವೇಳೆ ಸಮಿತಿಯ ಉಪಾಧ್ಯಕ್ಷ ಆರ್.ಆರ್. ಕಾಶಪ್ಪನವರ, ಸುದರ್ಶನ ಹಾನಗಲ್ಲ, ವಿ.ಆರ್. ಗೊಬ್ಬರಗುಂಪಿ, ಸಾಗರ ಬಿಂಗಿ, ಸಂಗೀತಾ ಕುರಿ, ಎಸ್.ಎಸ್. ಪಾಟೀಲ, ಎಂ.ಬಿ. ಚನ್ನಪ್ಪಗೌಡ್ರ, ಬಿ.ಎನ್. ಯರನಾಳ, ಎಂ.ಕೆ. ತುಪ್ಪದ, ಡಾ. ರಾಜಾಪೂರ, ಡಾ. ಎಂ.ಎನ್. ಕಾಮನಹಳ್ಳಿ, ಡಾ. ಟಿ.ಎನ್. ಗೋಡಿ, ಪ್ರಾ. ವಿ.ವೈ. ಮಕ್ಕಣ್ಣವರ, ಎಸ್.ಐ. ಯಾಳಗಿ, ಎ.ಎಸ್. ರಡ್ಡೇರ, ಕನಕೇರಿ, ಪೈಲದ, ಜಿ.ಎ. ಪಾಟೀಲ, ಗೌರಿಪುರ, ಕೆ.ಬಿ. ಕೊಣ್ಣೂರ ಸೇರಿದಂತೆ ಮುಂತಾದವರಿದ್ದರು.

ಕಸ್ತೂರಿ ಕಮ್ಮಾರ ಪ್ರಾರ್ಥಿಸಿದರು. ಕಾರ್ಯದರ್ಶಿ ಕೆ.ಪಿ. ಗುಳಗೌಡ್ರ ಸ್ವಾಗತಿಸಿದರು. ಬಿ.ಎಚ್. ಗರಡಿಮನಿ ನಿರೂಪಿಸಿದರು. ನಿರ್ಮಲಾ ಪಾಟೀಲ, ಭುವನೇಶ್ವರಿ ಹಿರೇಮಠ, ಶಾಂತಾ ತುಪ್ಪದ ಹಾಗೂ ಗೀತಾ ಅಣ್ಣಿಗೇರಿ ತತ್ವಪದ ಹಾಡಿದರು. ಎಸ್.ಎಸ್. ಪಾಳೇಗಾರ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕಾಶಿ ವಿಶ್ವನಾಥನ ಪಾಲಕಿ ಜರುಗಿತು.