ಆರೋಗ್ಯಕರ ಸಮಯದಲ್ಲಿ ಗರ್ಭ ಧಾರಣೆ ಧರಿಸುವುದು, ಸೂಕ್ತವಾದ ವಯಸ್ಸಿನಲ್ಲಿ ಸದೃಢವಾದ ಮಕ್ಕಳನ್ನು ಪಡೆಯಲು ತಾಯಂದಿರು ಮಾಹಿತಿ ಪಡೆದುಕೊಂಡು ಆರೋಗ್ಯ ಇಲಾಖೆಯ ಸೇವೆ ಪಡೆಯಬೇಕು. ತಾಯಿ ಮತ್ತು ಮಕ್ಕಳ ಆರೋಗ್ಯ ಕಾಪಾಡಿಕೊಂಡು ತಾಯಿ ಮತ್ತು ಮಗುವಿನ ಮರಣ ಪ್ರಮಾಣ ಕಡಿಮೆ ಮಾಡಬೇಕಾಗಿದೆ.

ಗದಗ: ಆರೋಗ್ಯಕರ ಸಮಯದಲ್ಲಿ ಗರ್ಭಧಾರಣೆ ಹಾಗೂ ಮಕ್ಕಳ ನಡುವಿನ ಆರೋಗ್ಯಕರ ಅಂತರ ಕಾಪಾಡುವದರಿಂದ ತಾಯಿ ಮತ್ತು ಮಕ್ಕಳ ಆರೋಗ್ಯ ವೃದ್ಧಿಸುವುದರೊಂದಿಗೆ ಅನಗತ್ಯ ಗರ್ಭ ಧಾರಣೆಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ತಿಳಿಸಿದರು.

ನಗರದ ಸರ್ಕಾರಿ ಪಪೂ ಮಹಾವಿದ್ಯಾಲಯದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ನಡೆದ ಜಾಥಾ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯಕರ ಸಮಯದಲ್ಲಿ ಗರ್ಭ ಧಾರಣೆ ಧರಿಸುವುದು, ಸೂಕ್ತವಾದ ವಯಸ್ಸಿನಲ್ಲಿ ಸದೃಢವಾದ ಮಕ್ಕಳನ್ನು ಪಡೆಯಲು ತಾಯಂದಿರು ಮಾಹಿತಿ ಪಡೆದುಕೊಂಡು ಆರೋಗ್ಯ ಇಲಾಖೆಯ ಸೇವೆ ಪಡೆಯಬೇಕು. ತಾಯಿ ಮತ್ತು ಮಕ್ಕಳ ಆರೋಗ್ಯ ಕಾಪಾಡಿಕೊಂಡು ತಾಯಿ ಮತ್ತು ಮಗುವಿನ ಮರಣ ಪ್ರಮಾಣ ಕಡಿಮೆ ಮಾಡಬೇಕಾಗಿದೆ. ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ 3 ವರ್ಷ ಅಂತರ ಕಾಪಾಡಿಕೊಳ್ಳಬೇಕು. ತಾತ್ಕಾಲಿಕ ವಿಧಾನ, ಶಾಶ್ವತ ವಿಧಾನಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಆರೋಗ್ಯ ಇಲಾಖೆಯಿಂದ ಸಿಗುತ್ತದೆ. ಬಾಲ್ಯವಿವಾಹವನ್ನು ತಡೆಗಟ್ಟಿ ಹೆಣ್ಣುಮಕ್ಕಳು 18 ವರ್ಷ ಹಾಗೂ ಗಂಡು ಮಕ್ಕಳಿಗೆ 21 ವರ್ಷ ತುಂಬಿದ ನಂತರ ಮದುವೆಯಾಗಬೇಕು ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವಾಣ ಪ್ರಾಸ್ತಾವಿಕವಾಗಿ ಮಾತನಾಡಿ, ಜನಸಂಖ್ಯಾ ಸ್ಫೋಟದಿಂದ ಮುಂದೆ ಆಗುವ ತೊಂದರೆಗಳು ನಿರುದ್ಯೋಗ ಸಮಸ್ಯೆ, ಆಹಾರ ಸಮಸ್ಯೆ, ಶಿಕ್ಷಣ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ಉಲ್ಬಣಗೊಳ್ಳುವುದರಿಂದ ದೇಶದ ಜನಸಂಖ್ಯೆಯು ಹತೋಟಿಯಲ್ಲಿರಲು ಸಾರ್ವಜನಿಕರಿಗೆ ಅರಿವು ಮೂಡಿಸಲು ಪ್ರತಿವರ್ಷ ಜು. 11ರಂದು ವಿಶ್ವ ಜನಸಂಖ್ಯಾ ದಿನ ಆಚರಣೆ ಮಾಡಲಾಗುತ್ತದೆ ಎಂದರು.

ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಉಪನ್ಯಾಸ ನೀಡಿದರು. ಪ್ರಭಾರಿ ಪ್ರಾ. ಮಹೇಶ ಜಕ್ಕಣವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಭಾರ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್.ಎಲ್. ಗಿರಡ್ಡಿ, ಪ್ರಭಾರಿ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೀತ್ ಖೋನಾ ಸೇರಿದಂತೆ ಆರೋಗ್ಯ ಕೇಂದ್ರದ ವ್ಶೆದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು. ಸಹದೇವಪ್ಪ ಹನಕನಹಳ್ಳಿ ಸ್ವಾಗತಿಸಿದರು. ರಾಜೇಂದ್ರ ಗಡಾದ ನಿರೂಪಿಸಿ, ವಂದಿಸಿದರು.