ತಾಲ್ಲೂಕಿನ ಕಾಯ್ಕಿಣಿಯ ಬಸ್ತಿಯಲ್ಲಿ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಲಾರಿ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಅಪಘಾತಕ್ಕೆ ಹೆದ್ದಾರಿ ಕಾಮಗಾರಿಯೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರ ಪ್ರತಿಭಟನೆಕನ್ನಡಪ್ರಭ ವಾರ್ತೆ ಭಟ್ಕಳ

ತಾಲ್ಲೂಕಿನ ಕಾಯ್ಕಿಣಿಯ ಬಸ್ತಿಯಲ್ಲಿ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಲಾರಿ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಕಾಯ್ಕಿಣಿಯ ಸಬ್ಬಾತಿಯ ನಿವಾಸಿ ಕೃಷ್ಣ ಶನಿಯಾರ ನಾಯ್ಕ (55) ಮೃತರು. ಕೃಷ್ಣ ಬುಧವಾರ ಮಧ್ಯಾಹ್ನ ಕಾಯ್ಕಿಣಿ ಬಸ್ತಿ ಜಂಕ್ಷನ್ ಬಳಿ ಮುರುಡೇಶ್ವರ ಕಡೆಗೆ ಹೋಗಲು ಬೈಕ್ ನಿಲ್ಲಿಸಿಕೊಂಡು ಇದ್ದಾಗ ಹಿಂಬದಿಯಿಂದ ಬಂದ ಲಾರಿ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಡಿಕ್ಕಿಯ ರಭಸಕ್ಕೆ ಬೈಕ್ ಸಹಿತ ಸವಾರ ಕೃಷ್ಣಾ ನಾಯ್ಕ ಲಾರಿ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಲಾರಿಯ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮೃತ ಕೃಷ್ಣ ಶಿರಾಲಿಯ ಸಾರದಹೊಳೆಯ ಹಳೇಕೋಟೆ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದಾರೆ. ಅಪಘಾತದ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರಿಂದ ಪ್ರತಿಭಟನೆ, ಆಕ್ರೋಶ:

ಅಪಘಾತಕ್ಕೆ ಕಾಯ್ಕಿಣಿಯ ಬಸ್ತಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಕೆಲಕಾಲ ಪ್ರತಿಭಟನೆ ನಡೆಸಿ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಸಂಬಂಧಪಟ್ಟ ಗುತ್ತಿಗೆದಾರ ಕಂಪೆನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಬೇಕು ಎಂದು ಪಟ್ಟು ಹಿಡಿದರು. ಕಾಯ್ಕಿಣಿಯಲ್ಲಿ ಭೀಕರ ಅಪಘಾತ ಮತ್ತು ಸಾರ್ವಜನಿಕರ ಪ್ರತಿಭಟನೆ ಸುದ್ದಿ ತಿಳಿದ ಸಹಾಯಕ ಆಯುಕ್ತ ಮಹೇಶ, ಡಿವೈಎಸ್ಪಿ ಗಿರೀಶ, ಮುರುಡೇಶ್ವರ ಪಿಎಸ್ಐ ಬಿರಾದಾರ ಸೇರಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಅಧಿಕಾರಿಗಳ ಬಳಿ ಐಆರ್‌ಬಿ ಮತ್ತು ಹೆದ್ದಾರಿ ಅಧಿಕಾರಿಗಳು ಸ್ಥಳಕ್ಕೆ ಕರೆಯಿಸುವಂತೆ ಪ್ರತಿಭಟನಾಕಾರರರು ಪಟ್ಟು ಹಿಡಿದರು.

ಸ್ಥಳಕ್ಕಾಗಮಿಸಿದ ಹೆದ್ದಾರಿ ಮತ್ತು ಐಆರ್‌ಬಿ ಅಭಿಯಂತರರು ಈ ಸ್ಥಳದಲ್ಲಿ ಅಪಘಾತ ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟು ಮೃತದೇಹ ಲಾರಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಭಟ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.