ವಕ್ಫ್‌ ಮಂಡಳಿಗೆ 3.82 ಕೋಟಿ ರು. ಮೌಲ್ಯದ ಆಸ್ತಿ ಮರಳಿಸಿದ ಇ.ಡಿ

Published : Jul 09, 2025, 11:36 AM IST
MP Waqf Property

ಸಾರಾಂಶ

ರಾಜ್ಯ ವಕ್ಫ್‌ ಮಂಡಳಿಗೆ ಸೇರಿದ ನಾಲ್ಕು ಕೋಟಿ ರು. ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ)ವು ಜಪ್ತಿ ಮಾಡಿದ್ದ 3.82 ಕೋಟಿ ರು. ಮೌಲ್ಯದ ಆಸ್ತಿಯನ್ನು ರಾಜ್ಯ ವಕ್ಫ್‌ ಮಂಡಳಿಗೆ ಹಸ್ತಾಂತರಿಸಿದೆ.

  ಬೆಂಗಳೂರು :  ರಾಜ್ಯ ವಕ್ಫ್‌ ಮಂಡಳಿಗೆ ಸೇರಿದ ನಾಲ್ಕು ಕೋಟಿ ರು. ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ)ವು ಜಪ್ತಿ ಮಾಡಿದ್ದ 3.82 ಕೋಟಿ ರು. ಮೌಲ್ಯದ ಆಸ್ತಿಯನ್ನು ರಾಜ್ಯ ವಕ್ಫ್‌ ಮಂಡಳಿಗೆ ಹಸ್ತಾಂತರಿಸಿದೆ.

ರಾಜ್ಯ ವಕ್ಫ್‌ ಮಂಡಳಿಗೆ ಸೇರಿದ 4 ಕೋಟಿ ರು. ಹಣವನ್ನು ಬೆನ್ಸನ್‌ ಟೌನ್‌ನ ಇಂಡಿಯನ್‌ ಬ್ಯಾಂಕ್‌ ಶಾಖೆಯ ಖಾತೆಗೆ ಜಮೆ ಮಾಡಲಾಗಿತ್ತು. ಈ ಹಣವನ್ನು ಮಂಡಳಿ ಗಮನಕ್ಕೆ ತಾರದೆ 2017ನೇ ಸಾಲಿನಲ್ಲಿ ಚಿಂತಾಮಣಿಯ ವಿಜಯಾ ಬ್ಯಾಂಕ್‌ ಶಾಖೆಯಲ್ಲಿ ಖಾತೆ ತೆರೆದು ವರ್ಗಾಯಿಸಲಾಗಿತ್ತು. ಬಳಿಕ ಹಣವನ್ನು ವರ್ಗೀಸ್‌ ರಿಯಾಲಿಟೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ಖಾತೆಗೆ ವರ್ಗಾಯಿಸಲಾಗಿತ್ತು. ಈ ಸಂಬಂಧ ವಿಜಯಾ ಬ್ಯಾಂಕಿನ ಇಬ್ಬರು ಅಧಿಕಾರಿಗಳು ಮತ್ತು ವಕ್ಫ್‌ ಮಂಡಳಿಯ ಪ್ರಥಮ ದರ್ಜೆ ಸಹಾಯಕ ಸೈಯದ್‌ ಸಿರಾಜ್‌ ಅಹಮ್ಮದ್‌ ವಿರುದ್ಧ ಪ್ರಕರಣ ದಾಖಲಾಗಿತ್ತು.

ಬಳಿಕ ಆರೋಪಿಗಳು ನಾಲ್ಕು ಕೋಟಿ ರು. ಹಣದ ಪೈಕಿ 1.10 ಕೊಟಿ ರು. ಮೌಲ್ಯದ ಮರ್ಸಿಡಿಸ್‌ ಬೆಂಜ್‌ ಕಾರು ಖರೀದಿಸಿದ್ದರು. ಉಳಿದ 2.72 ಕೋಟಿ ರು.ಗಳನ್ನು ಮತ್ತೊಂದು ಖಾತೆಗೆ ವರ್ಗಾಯಿಸಿದ್ದರು. ಈ ಸಂಬಂಧ 2017ರಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಇ.ಡಿ ಅಧಿಕಾರಿಗಳು, ತನಿಖೆ ಕೈಗೊಂಡು ಆರೋಪಿಗಳಿಂದ 3.82 ಕೋಟಿ ರು. ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದರು. ಬಳಿಕ ವರ್ಗೀಸ್‌ ರಿಯಾಲಿಟೀಸ್‌ ಸೇರಿ ಆರು ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.

ಇದೀಗ ನ್ಯಾಯಾಲಯದ ಅನುಮತಿ ಮೇರೆಗೆ ತನಿಖೆ ವೇಳೆ ಆರೋಪಿಗಳಿಂದ ಜಪ್ತಿ ಮಾಡಿದ್ದ 3.82 ಕೋಟಿ ರು. ಮೌಲ್ಯದ ಆಸ್ತಿಗಳನ್ನು ರಾಜ್ಯ ವಕ್ಫ್‌ ಮಂಡಳಿಗೆ ಹಸ್ತಾಂತರಿಸಲಾಗಿದೆ ಎಂದು ಇ.ಡಿ ತಿಳಿಸಿದೆ.

 

PREV
Read more Articles on